ADVERTISEMENT

ಮಣ್ಣಿನ ಗುಣ ಅರಿತು ಬಿತ್ತನೆ ಮಾಡಿ

ಕೃಷಿ ಅಭಿಯಾನದಲ್ಲಿ ಕೃಷಿ ಅಧಿಕಾರಿ ರೋಡಗಿ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಮೇ 2016, 8:28 IST
Last Updated 26 ಮೇ 2016, 8:28 IST

ಯಮಕನಮರಡಿ: ಮಣ್ಣಿನ ಗುಣ, ಅದಕ್ಕೆ ಅಗತ್ಯವಿರುವ ಪೋಷಕಾಂಶಗಳ ಅಗತ್ಯವನ್ನು ಅರಿತು ಪೂರಕವಾದ ಬೆಳೆ ಮಾಡಿದರೆ ಆರ್ಥಿಕವಾಗಿ ಸದೃಢ ರಾಗಲು ಸಾಧ್ಯ ಎಂದು ಉಪ ಕೃಷಿ ನಿರ್ದೇಶಕ ಎಲ್‌.ಐ. ರೋಡಗಿ ತಿಳಿಸಿದರು.

ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ನಡೆದ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತರು ತಮ್ಮ ಹೊಲದಲ್ಲಿರುವ ಮಣ್ಣಿನ ಗುಣವನ್ನು ಪರೀಕ್ಷೆಗೆ ಒಳಪಡಿಸಬೇಕು. ಕೃಷಿ ವಿಜ್ಞಾನಿಗಳ ಸಲಹೆ ಪಡೆದು, ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆ ನಿರ್ವಹಣೆ ಮಾಡಿದರೆ ನಷ್ಟದ ಹೊರೆಯಿಂದ ಪಾರಾಗಬಹುದು ಎಂದು ತಿಳಿಸಿದರು.

ಕೃಷಿ ಅಭಿಯಾನದ ಮೂಲಕ ಜಿಲ್ಲೆಯ ಎಲ್ಲೆಡೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನಡೆಯುತ್ತಿದೆ. ರೈತರಿಗೆ ಕೃಷಿಯ ಮಹತ್ವ, ಬೆಳೆ ನಿರ್ವಹಣೆ ಮತ್ತು ಲಾಭದಾಯಕ ಕೃಷಿ ಪದ್ಧತಿ ಕುರಿತು ತಿಳಿವಳಿಕೆ ನೀಡುವ, ಅಗತ್ಯ ಮಾರ್ಗದರ್ಶನ ನೀಡುವ ಕಾರ್ಯವನ್ನು ಕೃಷಿ ಅಧಿಕಾರಿಗಳು ಜವಾಬ್ದಾರಿಯಿಂದ ಮಾಡಬೇಕು ಎಂದರು.

ಹತ್ತರಗಿ, ಮಣಗುತ್ತಿ, ನಾಗನೂರ ಕೆ.ಎಂ, ದಡ್ಡಿ ಭಾಗದಲ್ಲಿ ಕೃಷಿ ಅಭಿಯಾನದ ಜಾಥಾ ವಾಹನವು ಪ್ರಚಾರಕ್ಕೆ ಸಂಚರಿಸಲಿದೆ. ಸಾವಯುವ ಭಾಗ್ಯ ಯೋಜನೆ, ರಾಷ್ಟ್ರೀಯ ವಿಕಾಸ ಯೋಜನೆ, ಸಸ್ಯ ಸಂರಕ್ಷಣಾ ಔಷಧಿಗಳ ಮತ್ತಿತರ ಮಾಹಿತಿಯನ್ನು ನೀಡಲಾಗುವುದು. ಕಬ್ಬಿನ ಬೆಳೆ ಬೆಳೆಯುವ ಎಸ್ಸಿ/ ಎಸ್ಟಿ ಹಾಗೂ ಇನ್ನಿತರ ರೈತರಿಗೆ ಶೇ 90ರಷ್ಟು ರಿಯಾಯಿತಿಯಲ್ಲಿ 1 ಹೆಕ್ಟೇರ್‌ ಪ್ರದೇಶದವರೆಗೆ ಹನಿ ನೀರಾವರಿ ಪೈಪ್‌ಗಳನ್ನು ನೀಡಲಾಗುವುದು ಎಂದರು.

ನೀರಿನ ಉಳಿತಾಯ ಹಾಗೂ ಕಡಿಮೆ ಪ್ರದೇಶದಲ್ಲಿ ಗರಿಷ್ಠ ಬೆಳೆ ಉತ್ಪಾದಿಸಲು ಹನಿ ನೀರಾವರಿ ಯೋಜನೆ ಸಹಾಯಕ ವಾಗುವುದು. ಅಲ್ಲದೇ ಸ್ವಹಾಯ ಸಂಘಗಳು ಹಿಟ್ಟಿನ ಗಿರಣಿ, ಖಾರಾ ಕುಟ್ಟುವ ಯಂತ್ರಗಳನ್ನೂ ಪಡೆಯ ಬಹುದು ಎಂದು ಹೇಳಿದರು.

ಹುಕ್ಕೇರಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ದಸ್ತಗೀರ್ ಬಸ್ಸಾಪೂರಿ, ಕೃಷಿ ಅಭಿಯಾನ ಕರ ಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿ ರೈತರಿಗೆ ಬಿತ್ತನೆ ಬಗ್ಗೆ ಅರಿವು ಮೂಡಿಸಬೇಕು. ಚೆನ್ನಾಗಿ ಮಳೆಯಾಗಿ, ನೆಲ ಹದವಾದ ನಂತರ ರೈತರು ಸೋಯಾಬೀನ್ ಬಿತ್ತಬೇಕು ಎಂದು ಸಲಹೆ ನೀಡಿದರು.

ಹತ್ತರಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹಾದೇವ ಪಟೋಳಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಅಧಿಕಾರಿ ಎಸ್.ಎಲ್. ಲಮಾಣಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ಟಿ.ಎ. ನಾಂದನಿ, ಯಮಕನಮರಡಿ ಕೃಷಿ ಅಧಿಕಾರಿ ಬಸವರಾಜ ಅಂಗಡಿ, ಪರಗೌಡ ಪಾಟೀಲ, ಎಲ್.ವೈ. ನಲ್ಯಾನಹಟ್ಟಿ, ಸಿ.ಎಂ. ಯಮಕನಮರಡಿ, ಎಸ್.ಎಸ್. ಗೋಟೂರೆ, ಎ.ಬಿ. ರಣದೇವಿ, ಬಿ.ಎಸ್. ಮಾರಿಹಾಳ, ಶ್ರೀಶೈಲ ಸಾರಾಪುರಿ, ಗೋಪಾಲ ಕುಡಚಿ, ಭೀಮಪ್ಪ ತವಗ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.