ADVERTISEMENT

ಮೂಡಲಗಿ ಸಂಪೂರ್ಣ ಬಂದ್‌

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 6:26 IST
Last Updated 14 ಸೆಪ್ಟೆಂಬರ್ 2017, 6:26 IST
ಮೂಡಲಗಿ ತಾಲ್ಲೂಕು ರಚನೆಗೆ ಆಗ್ರಹಿಸಿ ಬುಧವಾರ ಕರೆದಿದ್ದ ಬಂದ್‌ದಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು
ಮೂಡಲಗಿ ತಾಲ್ಲೂಕು ರಚನೆಗೆ ಆಗ್ರಹಿಸಿ ಬುಧವಾರ ಕರೆದಿದ್ದ ಬಂದ್‌ದಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು   

ಮೂಡಲಗಿ: ಮೂಡಲಗಿ ತಾಲ್ಲೂಕು ರಚನೆಯಾಗಬೇಕು ಎಂದು ಒತ್ತಾಯಿಸಿ ತಾಲ್ಲೂಕು ಹೋರಾಟ ಸಮಿತಿಯವರು ಬುಧವಾರ ಕರೆ ಕೊಟ್ಟಿದ್ದ ಮೂಡಲಗಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗ್ಗೆಯಿಂದ ಅಂಗಡಿ, ಮುಂಗಟ್ಟು, ಸಹಕಾರಿ ಸಂಘ, ಸಂಸ್ಥೆಗಳು ಬಂದ್‌ ಮಾಡಿ ಕಲ್ಮೇಶ್ವರ ವೃತ್ತದಲ್ಲಿ ಜಮಾಯಿಸಿದರು.

ಗುರ್ಲಾಪುರ ಕ್ರಾಸ್‌ ಸೇರಿದಂತೆ ಮೂಡಲಗಿಯ ವಿವಿಧೆಡೆ ಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬೆಳಿಗ್ಗೆ ಯಿಂದ ಬಸ್‌ ಮತ್ತು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.

ತಾಲ್ಲೂಕು ವಿಂಗಡಣೆಗಾಗಿ ಸರ್ಕಾರವು ನೇಮಿಸಿದ್ದ ಆಯೋಗಗಳ ಎಲ್ಲ ವರದಿಗಳಲ್ಲಿ ಮೂಡಲಗಿಯು ತಾಲ್ಲೂಕು ರಚನೆಗೆ ಶಿಫಾರಸು ಮಾಡಲಾಗಿತ್ತು. 2013ರಲ್ಲಿ ಮಂಡಿಸಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಂಡಿಸಿದ ಬಜೆಟ್‌ನಲ್ಲಿ ಪ್ರಕಟಿಸಿದ 43 ತಾಲ್ಲೂಕುಗಳಲ್ಲಿ ಮತ್ತು 2017ರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿರುವ ಬಜೆಟ್‌ದ 49 ತಾಲ್ಲೂಕುಗಳಲ್ಲಿ ಸಹ ಮೂಡಲಗಿಯು ಹೆಸರಿತ್ತು. ಆದರೆ ಇದೇ 6ರಂದು ತಾಲ್ಲೂಕಿಗೆ ಆಡಳಿತಾತ್ಮಕ ಅನುಮತಿ ನೀಡುವ ಆದೇಶದಲ್ಲಿ ಮೂಡಲಗಿ ಹೆಸರನ್ನು ಬಿಟ್ಟಿರುವುದು ಘೋರ ಅನ್ಯಾಯ ಎಂದು ಖಂಡಿಸಿದರು.

ADVERTISEMENT

ಮೂರ್ನಾಲ್ಕು ದಶಕದಿಂದ ಮೂಡಲಗಿ ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮದವರು ಹೋರಾಟ ಮಾಡಿಕೊಂಡು ಬಂದಿರುವ ಶ್ರಮವೆಲ್ಲ ಸರ್ಕಾರದ ನಿರ್ಧಾರದಿಂದ ವ್ಯರ್ಥವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮೂಡಲಗಿ ತಾಲ್ಲೂಕಿಗೆ ಸೇರ ಬೇಕಾದ ಗ್ರಾಮಗಳ ವಿಷಯದಲ್ಲಿ ಕೊನೆ ಗಳಿಗೆಯಲ್ಲಿ ಗೊಂದಲ ಸೃಷ್ಟಿಯಾಗಿ ಮೂಡಲಗಿ ತಾಲ್ಲೂಕು ರಚನೆಗೆ ಅಡ್ಡ ಗಾಲು ಆಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದಂತೆ ನಡೆದು ಕೊಳ್ಳಬೇಕು, ಶಾಸಕರು ಭರವಸೆಗೆ ತಪ್ಪಿದರೆ ಜನ ರೊಚ್ಚಿಗೇಳುತ್ತಾರೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು ಶಿವಪುತ್ರಯ್ಯ ಮಠಪತಿ, ಎಸ್.ಜಿ. ಢವಳೇಶ್ವರ, ಬಿ.ಬಿ. ಹಂದಿಗುಂದ, ಬಿ.ವೈ. ಶಿವಾಪುರ, ಶಂಕರಯ್ಯ ಹಿರೇ ಮಠ, ಬಸು ಸಾಲಾಪುರ, ಪುಲಕೇಶಿ ಸೋನವಾಲಕರ, ಲಕ್ಷ್ಮಣ ಅಡಿಹುಡಿ, ಈರಪ್ಪ ಕಲ್ಯಾಣಿ, ಹಣಮಂತ ಗುಡ್ಲ ಮನಿ, ಉಮೇಶ ಬೆಳಕೂಡ, ಖಾನಟ್ಟಿ ಬಸವರಾಜ ಕೌಜಲಗಿ  ಮಾತನಾಡಿದರು.

ಹೋರಾಟ ಸಮಿತಿ ಗೌರವ ಅಧ್ಯಕ್ಷ ಶ್ರೀಪಾದಬೋಧ ಸ್ವಾಮೀಜಿ, ರಮೇಶ ಉಟಗಿ, ಈರಪ್ಪ ಬೆಳಕೂಡ, ಲಖನ ಸವಸುದ್ದಿ, ಆರ್.ಪಿ. ಬಡಗಣ್ಣವರ, ಶಿವಲಿಂಗಪ್ಪ ತೇಲಿ, ರುದ್ರಪ್ಪ ತಾಂವಂಶಿ, ಕೆ.ಟಿ.ಗಾಣಿಗೇರ, ಶಿವಪುತ್ರಯ್ಯ ಮಠಪತಿ, ಎನ್‌.ಟಿ. ಪಿರೋಜಿ, ಡಿ.ಬಿ. ಪಾಟೀಲ, ಕೆ.ಬಿ. ಪಾಟೀಲ, ಎಂ.ಜಿ. ಗಾಣಿಗೇರ,ಕಮಲದಿನ್ನಿಯ ಲಕ್ಷ್ಮಣ ಹುಚ್ಚರಡ್ಡಿ, ರಮೇಶ ಪ್ಯಾಟಿಗೌಡರ, ಶ್ರೀಮಂತ ಲಠ್ಠೆ, ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.

* *

ಬೆಳಗಾವಿ ಜಿಲ್ಲೆಯ ವಿಭಜನೆಯಲ್ಲಿ ಗೋಕಾಕಗೆ ಆಗಿರುವ ಅನ್ಯಾಯವನ್ನು ಮುಖ್ಯಮಂತ್ರಿಗಳು ಸರಿಪಡಿಸಿ ನ್ಯಾಯ ಒದಗಿಸಬೇಕು
ಈರಣ್ಣ ಕಡಾಡಿ
ಜಿಲ್ಲಾ ಪಂಚಯ್ತಿ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.