ADVERTISEMENT

‘ರಂಗಭೂಮಿ ಮನುಷ್ಯತ್ವ ರೂಪಿಸುತ್ತದೆ’

ಪರಸಗಡ ನಾಟಕೋತ್ಸವ ಉದ್ಘಾಟನೆ; ಜಿಲ್ಲೆಯಲ್ಲಿ ರಂಗಭೂಮಿ ಉಳಿಸುವವರು ಹಲವರು

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 6:04 IST
Last Updated 30 ಜನವರಿ 2017, 6:04 IST
ಸವದತ್ತಿ: ರಂಗಭೂಮಿ ಮನುಷ್ಯನಲ್ಲಿ ಪರಿಪೂರ್ಣ ಮನುಷ್ಯತ್ವವನ್ನು ರೂಪಿಸುವ ಮಹತ್ತರ ಶಕ್ತಿಯಿದೆ. ಆ ನಿಟ್ಟನಲ್ಲಿ ಊರಿಗೊಂದು ಸುಸಜ್ಜಿತ ರಂಗಭೂಮಿ ನಿರ್ಮಾಣವಾಗುವ  ಅಗತ್ಯವಿದೆ ಎಂದು ಹಿರಿಯ ಸಾಹಿತಿ ಡಿ.ಎಸ್‌. ಚೌಗಲೆ ಹೇಳಿದರು.
 
ಶನಿವಾರ ಸಂಜೆ ಇಲ್ಲಿನ ಕೋಟೆಯಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಶನಿವಾರ ಸಂಜೆ ಆಯೋಜಿಸಿದ್ದ ಪರಸ­ಗಡ ನಾಟಕೋತ್ಸವ 2017ರ ಉದ್ಘಾ­ಟನಾ ಸಮಾರಂಭದಲ್ಲಿ ಮಾತ­ನಾಡಿದ ಅವರು, ‘ರಂಗಮಂಚದ ಮೇಲೆ ಪ್ರಾಯೋಗಿಕ ನಾಟಕಗಳಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಲಿದೆ ಎಂದರು.
 
ಪ್ರಸ್ತುತ ಜಾತಿ, ವರ್ಗ, ಜನಾಂಗ­ಕ್ಕೊಂದು ದೇವಾಲಯ, ವಿವಿಧ ಪದವಿ­ಗಳ ಶಾಲಾ ಕಾಲೇಜುಗಳನ್ನು ಕಟ್ಟುವ ಸರ್ಕಾರ ಊರಿಗೊಂದು ರಂಗಭೂಮಿ ಕಟ್ಟಿಸುವಲ್ಲಿ ಆಸಕ್ತಿ ಹೊಂದಬೇಕು. ಆ ಮೂಲಕ ವಿನಾಶದಂಚಿನಲ್ಲಿರುವ ಸಣ್ಣಾಟ, ದೊಡ್ಡಾಟದ ಜತೆಗೆ ಕಲೆ ಹಾಗೂ ಕಲಾವಿದರು ಉಳಿಯಲು ಸಾಧ್ಯ ಎಂದ ಅವರು, ಬೆಳಗಾವಿ ಜಿಲ್ಲೆಯಲ್ಲಿ ರಂಗಭೂಮಿ ರಕ್ಷಕರಿದ್ದಾರೆ. ಅವರಿಂದ ಮಾತ್ರ ನಾಟಕಗಳು ಉಳಿದಿಕೊಂಡಿವೆ ಎಂದರು.
 
ಧಾರವಾಡದ ರಂಗಕರ್ಮಿ ಅನೀಲ ದೇಸಾಯಿ ಮಾತನಾಡಿ, ವಿವಿಧ ಮನಸ್ಸುಗಳನ್ನು ಒಂದುಗೂಡಿಸುವ ರಂಗಭೂಮಿ ಎಲ್ಲರನ್ನು ಸಮಾನತೆಯಿಂದ ಕಾಣುವದು. ಆದ್ದರಿಂದಲೇ ನಾಟಕ ರಚಿಸಿದ ಎಂ.ಎಸ್‌.ಕೆ ಪ್ರಭು ಹಾಗೂ ಬೆಳಗಾವಿ ವಾರ್ತಾ ಇಲಾಖೆ ಉಪನಿರ್ದೇಶಕ ದಿ. ಜಯತೀರ್ಥ ಜೋಶಿ ಅವರ ಸಂಬಂಧ ಒಳ್ಳೆಯದಾಗಿದ್ದರಿಂದ ಇಂತಹ ನಾಟಕಗಳು ರಂಗಭೂಮಿ ಮೇಲೆ ಮಿಂಚಿದವು ಎಂದು ಸ್ಮರಿಸಿದರು. 
 
ಹಿರಿಯ ಸಾಹಿತಿ ಯ.ರು ಪಾಟೀಲ ಮಾತನಾಡಿ, ಅಂದು 18 ವರ್ಷಗಳ ಹಿಂದೆ ಇದೇ ದೇಸಾಯಿ ಕೋಟೆಯನ್ನು ಬಳಿಸಿಕೊಂಡು ನೈಜ್ಯ ದೃಶ್ಯಗಳೊಂದಿಗೆ ಪ್ರದರ್ಶನಗೊಂಡ ಇದೇ ನಾಟಕ ಇಂದಿಗೂ ಎಲ್ಲರ ಮನದಲ್ಲಿ ಹಚ್ಚ ಹಸಿರಾಗಿದೆ. ಇದೀಗ ಮತ್ತೆ ರಂಗಭೂಮಿ ಮೇಲೆ ಪ್ರದರ್ಶನದಿಂದ ಸಾಂಸ್ಕೃತಿಕ ಹಬ್ಬವಾದಂತಿದೆ ಎಂದರು.
 
ಬೆಳಗಾವಿಯ ರಂಗಕರ್ಮಿ ವಿನೋದ ಅಂಬೇಕರ ಮಾತನಾಡಿ, ಕಳೇದ 20 ವರ್ಷಗಳಿಂದ ರಂಗಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರಂಗ ಆರಾಧನಾ ರಾಜ್ಯ. ರಾಷ್ಟ್ರ ಮಟ್ಟದಲ್ಲಿ ಇನ್ನೂ ಹೆಸರು ಮಾಡಲಿ ಎಂದು ಹಾರೈಸಿದರು.
 
ಸ್ವಾದಿಮಠದ ಶಿವಬಸವಸ್ವಾಮೀಜಿ, ಡಾ. ಎ.ಸಿ. ಕಬ್ಬಿಣ, ಡಾ. ಗಿರೀಶ ಗಾಣಿಗೇರ, ಪ್ರಮೋದ ಅಂಬೇಕರ, ಹಸನ್‌ ನಯೀಂ ಸುರಕೋಡ, ಅನೀಲ ಗದಗ ಉಪಸ್ಥಿತರಿದ್ದರು.
 
ಝಾಕೀರ್‌ ನದಾಫ ಸ್ವಾಗತಿಸಿದರು. ಶಿವಾನಂದ ತಾರಿಹಾಳ ನಿರೂಪಿಸಿದರು.
 
ನಂತರ ಪ್ರದರ್ಶನಗೊಂಡ ಎಂ.ಎಸ್‌.ಕೆ ಪ್ರಭು ರಚಿತ, ದಿ. ಜಯತೀರ್ಥ ಜೋಶಿ ನಿರ್ದೇಶನದ ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’ ನಾಟಕ ಎಲ್ಲರನ್ನು ರಂಜಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.