ADVERTISEMENT

ರಶೀದ್ ಮಲಬಾರಿ ವಿರುದ್ಧ ಕೋಕಾ!

​ಪ್ರಜಾವಾಣಿ ವಾರ್ತೆ
Published 23 ಮೇ 2017, 8:42 IST
Last Updated 23 ಮೇ 2017, 8:42 IST

ಬೆಳಗಾವಿ: ಭೂಗತ ಪಾತಕಿ ರಶೀದ್‌ ಮಲಬಾರಿ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಪ್ರಯೋಗಿಸಲು ಬೆಳಗಾವಿ ನಗರ ಪೊಲೀಸರು ಮುಂದಾಗಿದ್ದಾರೆ.

‘ರಶೀದ್‌ ಭಾಗಿಯಾಗಿರುವ ಕೊಲೆ ಪ್ರಕರಣ ಸೇರಿದಂತೆ ವಿವಿಧ ಗಂಭೀರ ಅಪರಾಧ ಪ್ರಕರಣಗಳ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದರೆ, ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ. ಅವರ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಜಪ್ತಿ ಮಾಡಬಹುದು ಹಾಗೂ ತನಿಖಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಸಿಗುತ್ತದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ವ್ಯಾಪಾರಿ ಸುರೇಶ ರೇಡೆಕರ್‌ ಅವರ ಪುತ್ರ ರೋಹನ್‌ ಅಪಹರಣ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಶೀದ್‌ ಪೊಲೀಸರಿಗೆ ಬೇಕಾಗಿದ್ದಾನೆ. ಎರಡು ವರ್ಷಗಳ ಹಿಂದೆ ರೋಹನ್‌ ಅವರನ್ನು ಹತ್ಯೆ ಮಾಡಿ, ಚೋರ್ಲಾ ಅರಣ್ಯ ಪ್ರದೇಶದಲ್ಲಿ ಶವ ಎಸೆಯಲಾಗಿತ್ತು.

ADVERTISEMENT

ನ್ಯಾಯಾಂಗ ಬಂಧನಕ್ಕೆ: ಬಿಲ್ಡರ್‌ ಶರೀಫ್‌ ಯರಗಟ್ಟಿ ಅಪಹರಣಕ್ಕೆ ಸಂಬಂಧಿಸಿ ದಂತೆ ಬಂಧಿತರಾಗಿದ್ದ ರಶೀದ್ ಮಲಬಾರಿ ಸಹಚರರಾದ ಮುಜಫ್ಪರ್‌ ಮಹಮ್ಮದ್‌ ಶೇಖ್‌ ಹಾಗೂ ಇಮ್ತಿಯಾಜ್‌ ಅಬ್ದುಲ್‌ ಢಾಲಾಯತ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಜೆ.ಎಂ.ಎಫ್‌.ಸಿ ಒಪ್ಪಿಸಿದೆ.

ಎರಡು ತಿಂಗಳ ಹಿಂದೆ ಶರೀಫ್‌ ಅವರನ್ನು ಅಪಹರಿಸಿದ್ದ ಆರೋಪಿಗಳು, ₹3.5 ಲಕ್ಷ ಒತ್ತೆ ಹಣ ಪಡೆದು ಬಿಡುಗಡೆ ಮಾಡಿದ್ದರು. ಎ.ಪಿ.ಎಂ.ಸಿ ಪೊಲೀಸ್‌ ಠಾಣೆಗೆ ಶರೀಫ್‌ ದೂರು ನೀಡಿದ್ದರು. ಆಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ತಾವು ರಶೀದ್‌ ಸಹಚರರು ಎನ್ನುವ ಅಂಶವನ್ನು ಅವರು ಬಾಯ್ಬಿಟ್ಟಿದ್ದರು.

ಬಾಡಿ ವಾರಂಟ್‌: ರಶೀದ್ ಹಾಗೂ ಆತನ ಸಹಚರರು ಅಯಾಜ್‌ ಶೇಖ್‌ ಹಾಗೂ ಆಶೀಶ್‌ ರಂಜನ್‌ ಅವರನ್ನು ಹತ್ಯೆ ಮಾಡಿ ಯಲ್ಲಾಪುರ ಹಾಗೂ ಕುಮಟಾ ದಲ್ಲಿ ಶವ ಬಿಸಾಕಿ ಹೋಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಅಶ್ಫಾಕ್‌ ಖತೀಬ್‌ (32), ಇರ್ಫಾನ್‌ ಮೋಮಿನ್‌ (31) ಹಾಗೂ ತೌಹೀದ್‌ ಖಾಜಿ (33) ಅವರನ್ನು ಬಂಧಿಸಿದ್ದಾರೆ.

ಇವರನ್ನು ಕರೆತಂದು ವಿಚಾರಣೆ ನಡೆಸಲು ಯೋಚಿಸುತ್ತಿದ್ದೇವೆ ಎಂದು ಬೆಳಗಾವಿಯ ಡಿಸಿಪಿ ಅಮರನಾಥ ರೆಡ್ಡಿ ತಿಳಿಸಿದರು. ಈ ಆರೋಪಿಗಳನ್ನು ಕರೆತರಲು ಸದ್ಯದಲ್ಲಿಯೇ ಬಾಡಿ ವಾರಂಟ್‌ ಹೊರಡಿಸಲಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.