ADVERTISEMENT

ರಸ್ತೆ ಅಭಿವೃದ್ಧಿಗೆ ₹7.58 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 6:22 IST
Last Updated 18 ಸೆಪ್ಟೆಂಬರ್ 2017, 6:22 IST

ಚಿಕ್ಕೋಡಿ: ‘ಚಿಕ್ಕೋಡಿ–ಸದಲಗಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ನಾಗರಾಳ ಗ್ರಾಮದಿಂದ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸುಧಾರಣೆ ಕಾಮಗಾರಿಗಳಿಗಾಗಿ ಒಟ್ಟು ₹7.58 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು.

ತಾಲ್ಲೂಕಿನ ನಾಗರಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಡಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಶನಿವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ನಾಗರಾಳ ಗ್ರಾಮದಿಂದ ಮಲಿಕವಾಡ ಶರ್ಯತ್ತು ಮೈದಾನ ಮಾರ್ಗವಾಗಿ ಸದಲಗಾ–ಯಕ್ಸಂಬಾ ರಸ್ತೆಗೆ ಕೂಡು ರಸ್ತೆ ನಿರ್ಮಾಣಕ್ಕಾಗಿ ₹4.01 ಕೋಟಿ, ನಾಗರಾಳ–ನೇಜ ರಸ್ತೆಯಿಂದ ಬಾಳುಮುತ್ಯಾನ ಗುಡಿ ಮಾರ್ಗವಾಗಿ ನಾಗರಾಳ–ಶಿರಗಾಂವ ಕೂಡು ರಸ್ತೆ ಸುಧಾರಣೆಗಾಗಿ ₹1.20 ಕೋಟಿ, ನಾಗರಾಳ ಗ್ರಾಮದ ಎಸ್‌.ಸಿ. ಕಾಲೊನಿಯಿಂದ ಕುರಣೆಕೋಡಿ ರಸ್ತೆ ಸುಧಾರಣೆಗೆ ₹1.20 ಕೋಟಿ ಹಾಗೂ ನಾಗರಾಳ ಗ್ರಾಮದಲ್ಲಿ ಸುವರ್ಣ ಗ್ರಾಮೋದಯ ಯೋಜನೆಯಡಿ ಹೆಚ್ಚುವರಿಯಾಗಿ ₹1.17 ಕೋಟಿ ಅನುದಾನ ಮಂಜೂರಾಗಿದೆ’ ಎಂದರು.

ADVERTISEMENT

‘2014–15 ರಿಂದ 2016–17ನೇ ಸಾಲಿನಲ್ಲಿ ನಾಗರಾಳ ಗ್ರಾಮದಲ್ಲಿ ವಿವಿಧ ವಸತಿ ಯೋಜನೆಯಡಿ ಒಟ್ಟು 380 ಮನೆಗಳನ್ನು ಒದಗಿಸಲಾಗಿದ್ದು, 2017–18ರಲ್ಲಿ ಮತ್ತೆ 40 ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಗ್ರಾಮ ಪಂಚಾಯ್ತಿ ಸದಸ್ಯರು ಅರ್ಹ ಬಡ ಕುಟುಂಬಗಳನ್ನೇ ವಸತಿ ಯೋಜನೆಗೆ ಆಯ್ಕೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಒಟ್ಟು ₹3.77 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ದೊರಕಿದೆ’ ಎಂದು ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಎನ್.ಎಲ್‌.ಶಿಂಧೆ ಸಂಸದರಿಗೆ ಮಾಹಿತಿ ನೀಡಿದರು.

ನರೇಗಾ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ವಿವರಣೆ ಪಡೆದ ಸಂಸದ ಹುಕ್ಕೇರಿ, ‘ಕಾಮಗಾರಿಗಳ ಪ್ರಗತಿಯನ್ನು ಕಾಲ ಕಾಲಕ್ಕೆ ಪರಿಶೀಲಿಸಬೇಕು ಹಾಗೂ ಸಕಾಲ ದಲ್ಲಿ ಬಿಲ್‌ಗಳನ್ನು ಮಂಜೂರು ಮಾಡ ಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌. ಪಾಟೀಲ ಅವರಿಗೆ ಸೂಚನೆ ನೀಡಿದರು.

‘ನಾಗರಾಳ ಗ್ರಾಮದ ಒಟ್ಟು 316 ಕುಟುಂಬಗಳಿಗೆ ಒಂದು ಮತ್ತು ಎರಡನೇ ಹಂತದಲ್ಲಿ ಬಿಪಿಎಲ್‌ ಪಡಿತರ ಚೀಟಿ ಗಳನ್ನು ಅನುಮೋದನೆ ಮಾಡಿಸ ಲಾಗಿದ್ದು, ಇನ್ನೂ ಬಿಪಿಎಲ್‌ ಚೀಟಿ ವಂಚಿತ ಅರ್ಹ ಕುಟುಂಬಗಳು ಅರ್ಜಿ ಸಲ್ಲಿಸಬೇಕು’ ಎಂದು ಹೇಳಿದರು.

‘ಗ್ರಾಮದ ಪಡಿತರ ಚೀಟಿದಾರರಿಗೆ ಪಕ್ಕದ ಹಿರೇಕೋಡಿಯಿಂದ ಪಡಿತರ ಧಾನ್ಯ ವಿತರಣೆ ಮಾಡಲಾಗುತ್ತಿದ್ದು, ಮುಂಬರುವ ತಿಂಗಳಿನಲ್ಲಿ ನಾಗರಾಳ ಗ್ರಾಮದಲ್ಲಿಯೇ ಪಡಿತರ ವಿತರಣೆ ವ್ಯವಸ್ಥೆ ಮಾಡಿಸಲಾಗುವುದು’ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಶೋಭಾ ಜೊಂಡ, ಉಪಾಧ್ಯಕ್ಷೆ ಶಾಣಾಬಾಯಿ ಪೂಜಾರಿ, ಸದಸ್ಯ ಸಂತೋಷ ಖಾಡಗಾಂವೆ, ಪುಂಡಲೀಕ ಕೊರವಿ, ಮುಖಂಡರಾದ ಸೂರ್ಯಕಾಂತ ಚೌಗಲಾ, ಸಿದ್ದಾರ್ಥ ಕಾಂಬಳೆ, ಸಿದ್ದಾರ್ಥ ಮಡ್ಡೆ, ಅರ್ಜುನ ಕಾಂಬಳೆ, ಬಾಬರ ಪಟೇಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.