ADVERTISEMENT

ವಿದ್ಯಾರ್ಥಿಗಳ ಅಂತ್ಯಕ್ರಿಯೆ; ನೀರವ ಮೌನ...

ಶ್ರೀಕಾಂತ ಕಲ್ಲಮ್ಮನವರ
Published 17 ಏಪ್ರಿಲ್ 2017, 6:46 IST
Last Updated 17 ಏಪ್ರಿಲ್ 2017, 6:46 IST
ಬೆಳಗಾವಿ ತಾಲ್ಲೂಕಿನ ಬಂಬರಗಾ ಗ್ರಾಮದಲ್ಲಿ ಪುತ್ರಿ ಮಾಯಾ ಕೋಳೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ತಂದೆ ಶಟ್ಟಪ್ಪ ಕೋಳೆ (ಎಡಚಿತ್ರ) ಮಾಯಾ ಕೋಳೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಗ್ರಾಮಸ್ಥರು
ಬೆಳಗಾವಿ ತಾಲ್ಲೂಕಿನ ಬಂಬರಗಾ ಗ್ರಾಮದಲ್ಲಿ ಪುತ್ರಿ ಮಾಯಾ ಕೋಳೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ತಂದೆ ಶಟ್ಟಪ್ಪ ಕೋಳೆ (ಎಡಚಿತ್ರ) ಮಾಯಾ ಕೋಳೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಗ್ರಾಮಸ್ಥರು   

ಬಂಬರಗಾ (ಬೆಳಗಾವಿ): ಎಂಜಿನಿಯರಿಂಗ್‌ ಕಾಲೇಜು ಮೆಟ್ಟಿಲೇರಿದ ಗ್ರಾಮದ ಮೊದಲ ಯುವತಿ ಎನ್ನುವ ಹೆಮ್ಮೆ ಮಾಯಾ ಕೋಳೆ ಅವರ ಪೋಷಕರಿಗೆ ಅಷ್ಟೇ ಅಲ್ಲ, ಇಡೀ ಗ್ರಾಮಸ್ಥರಿಗಿತ್ತು. ಇನ್ನೆರಡು ತಿಂಗಳು ಕಳೆದಿದ್ದರೆ ಇವರೆಲ್ಲರ ಆಶಯದಂತೆ ಮಾಯಾ ಎಂಜಿನಿಯರ್‌ ಆಗಿ ಹೊರಹೊಮ್ಮುತ್ತಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು....
ಅಧ್ಯಯನ ಪ್ರವಾಸಕ್ಕೆಂದು ಪುಣೆಗೆ ಹೋಗಿ ಮರಳುತ್ತಿದ್ದಾಗ ಮಹಾರಾಷ್ಟ್ರದ ವಾಯರಿ ಬೀಚ್‌ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ತಮ್ಮದೇ ಕಾಲೇಜಿನ ಒಬ್ಬ ಉಪನ್ಯಾಸಕ ಹಾಗೂ ಆರು ಜನ ವಿದ್ಯಾರ್ಥಿಗಳ ಜೊತೆ ಮಾಯಾ ಅವರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಭಾನುವಾರ ಬೆಳಿಗ್ಗೆ ನಡೆದ ಮಾಯಾ ಅವರ ಅಂತ್ಯಕ್ರಿಯೆಯಲ್ಲಿ ಇಡೀ ಗ್ರಾಮವೇ ಪಾಲ್ಗೊಂಡಿತ್ತು. ಗ್ರಾಮದ ಲ್ಲೀಗ ನೀರವ ಮೌನ ಆವರಿಸಿದೆ.

ಮುಗಿಲು ಮುಟ್ಟಿದ ಆಕ್ರಂದನ: ‘ಬಹಳಷ್ಟು ನಿರೀಕ್ಷೆಯಿಟ್ಟು ಮಗಳನ್ನು ಎಂಜಿನಿಯರಿಂಗ್‌ ಕಾಲೇಜಿಗೆ ಸೇರಿಸಿದ್ದೆ. ಎಷ್ಟೇ ಕಷ್ಟವಾದರೂ ಸಹಿಸಿಕೊಂಡೆ. ಸಾಲ– ಸೋಲ ಮಾಡಿ ಓದಿಸಿದೆ. ಇನ್ನೇನು ಎರಡು ತಿಂಗಳು ಕಳೆದಿದ್ದರೆ ಮಾಯಾ ಎಂಜಿನಿಯರಿಂಗ್‌ ಆಗಿ ಬಿಡುತ್ತಿದ್ದಳು. ಆದರೆ, ವಿಧಿ ಎಲ್ಲವನ್ನೂ ನಮ್ಮಿಂದ ಕಿತ್ತುಕೊಂಡಿತು...’ ಎಂದು ಮನೆಯ ಜಗಲಿ ಮೇಲೆ ಇಟ್ಟಿದ್ದ ಮಗಳ ಶವದ ಎದುರು ಶಟ್ಟಪ್ಪ ಬಿ. ಕೋಳೆ ರೋದಿಸುತ್ತಿದ್ದರು.

ಗ್ರಾಮಸ್ಥರು, ಕುಟುಂಬದವರು, ಸಂಬಂಧಿಕರು, ಶಟ್ಟಪ್ಪ ಅವರನ್ನು ಸಮಾ ಧಾನ ಪಡಿಸಲು ಪ್ರಯತ್ನಿಸುತ್ತಿದ್ದರು.ಶಟ್ಟಪ್ಪ ಗ್ರಾಮದಲ್ಲಿ ಕೃಷಿ ಮಾಡಿ ಕೊಂಡು ಜೀವನ ಸಾಗಿಸುತ್ತಿ ದ್ದಾರೆ. ಮಗ ರಾಹುಲಗಿಂತ ಮಗಳು ಮಾಯಾ ಓದಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಳು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಳು. ಎಂಜಿನಿಯರಿಂಗ್‌ ಓದುವ ಬಗ್ಗೆ ಆಸೆ ವ್ಯಕ್ತಪಡಿಸಿದಾಗ, ಶಟ್ಟಪ್ಪ ತಡವರಿಸದೇ ಎಂಜಿನಿಯರಿಂಗ್‌ ಕಾಲೇಜಿಗೆ ಸೇರಿಸಿದ್ದರು.

ADVERTISEMENT

‘ಎಷ್ಟೇ ಕಷ್ಟವಾಗಲಿ, ಕಾಲೇಜಿಗೆ ಕಳುಹಿಸುವುದನ್ನು ತಪ್ಪಿಸಬೇಡ. ಓದಿಗಾಗಿ ಮಾಡುವ ಎಲ್ಲ ಖರ್ಚನ್ನು ಎಂಜಿನಿಯರ್‌ ಆದ್ಮೇಲೆ ತೀರಿಸುವೆ ಎಂದು ಭರವಸೆ ನೀಡಿದ್ದಳು. ಆದರೆ, ಈಗ ಎಲ್ಲವೂ ನಿರರ್ಥಕವಾಯಿತು’ ಎಂದು ರೋದಿಸುತ್ತಿದ್ದರು.ಸಾವಿನಲ್ಲೂ ಒಂದಾದ ಸ್ನೇಹಿತೆಯರು: ಇದೇ ದುರ್ಘಟನೆಯಲ್ಲಿ ಬಲಿಯಾದ ಬೆಳಗಾವಿ ತಾಲ್ಲೂಕಿನ ಸಾಂಬ್ರಾದ ಆರತಿ ಚವ್ಹಾಣ ಹಾಗೂ ಕರುಣಾ ಬರ್ಡೆ ಬಾಲ್ಯದಿಂದಲೂ ಸ್ನೇಹಿತೆಯರಾಗಿದ್ದರು. ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದ ಇವರು, ಬೆಳಿಗ್ಗೆ ಕಾಲೇಜಿಗೆ, ಟ್ಯೂಷನ್‌ಗೆ ಒಟ್ಟಿಗೆ ಹೋಗುತ್ತಿದ್ದರು. ಒಟ್ಟಿಗೆ ಆಟವಾಡಿಕೊಂಡ ಬೆಳೆದಿದ್ದ ಇವರು, ಸಾವಿನಲ್ಲೂ ಒಂದಾದರು. ಇವರ ಅಂತ್ಯಕ್ರಿಯೆಯು ಒಂದೇ ಸ್ಮಶಾನದಲ್ಲಿ ಬಹುತೇಕ ಒಂದೇ ಸಮಯದಲ್ಲಿ ನಡೆಯಿತು.

ಆರತಿ ಅವರ ತಂದೆ ದಿಲೀಪ ಚವ್ಹಾಣ ನಿವೃತ್ತ ಶಿಕ್ಷಕರು. ತಾಯಿ ವಂದನಾ ಗೃಹಿಣಿ. ಇವರಿಗೆ ಮೂವರು ಪುತ್ರಿಯರಿದ್ದು, ಆರತಿ ಪ್ರಾಥಮಿಕ ಶಿಕ್ಷಣದಿಂದಲೇ ಪ್ರತಿಭಾವಂತೆಯಾಗಿದ್ದರು. ಆರತಿ ಮನೆಗೆ ಆಧಾರ ಸ್ತಂಭ ವಾಗಿ ಬೆಳೆಯಬಲ್ಲಳು ಎಂದು ತಂದೆ– ತಾಯಿ ಕಟ್ಟಿಕೊಂಡಿದ್ದ ಕನಸು ಒಡೆದುಹೋಗಿದೆ.

ಕರುಣಾಜನಕ ಸ್ಥಿತಿ: ದುರ್ಘಟನೆಯಲ್ಲಿ ಅಸುನೀಗಿದ ಕರುಣಾ ಬರ್ಡೆ ಅವರ ಕುಟುಂಬ ಸ್ಥಿತಿ ಇನ್ನೂ ಚಿಂತಾಜನಕವಿದೆ. ಇವರ ತಂದೆ ಮನೋಹರ ಕಳೆದ ವರ್ಷವಷ್ಟೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮನೆಯಲ್ಲೀಗ ತಾಯಿ ರೇಖಾ ಬರ್ಡೆ ಹಾಗೂ ಸಹೋದರ ಮಾತ್ರ ಇದ್ದಾರೆ.‘ನನ್ನನ್ನು ಓದಿಸು ನಾನು ತಮ್ಮನನ್ನು ಓದಿಸುತ್ತೇನೆ ಎಂದು ಕರುಣಾ ಆಗಾಗ ಹೇಳುತ್ತಿದ್ದಳು. ಆದರೆ, ಈಗ....’  ಎಂದು ತಾಯಿ ರೇಖಾ ರೋದಿಸುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.