ADVERTISEMENT

ಶರಣರ ತತ್ವ, ವಿಚಾರ ಪಾಲಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 9:34 IST
Last Updated 23 ಮಾರ್ಚ್ 2017, 9:34 IST

ಹೊಸೂರ (ಬೈಲಹೊಂಗಲ): ಶರಣರ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶನೀಯ ಜೀವನ ಸಾಗಿಸಬೇಕು ಎಂದು ಯಕ್ಕುಂಡಿ ವಿರಕ್ತಮಠದ ಪಂಚಾಕ್ಷರ ಸ್ವಾಮೀಜಿ ಹೇಳಿದರು.

ಇಲ್ಲಿಗೆ ಸಮೀಪದ ಯಕ್ಕುಂಡಿ ಗ್ರಾಮದ ವಿರಕ್ತಮಠದಲ್ಲಿ ನಡೆದ ಹಾನಗಲ್ಲ ಕುಮಾರ ಸ್ವಾಮೀಜಿ ಅವರ 155ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ‘ಜನರು ಹಣ ಗಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರಿಂದ ಅಧ್ಯಾತ್ಮದ ಒಲವು ಕಡಿಮೆಯಾಗುತ್ತಿದೆ. ಸತ್ಸಂಗದಲ್ಲಿ ಭಾಗಿಗಳಾಗುವದರಿಂದ ಜೀವನ ಜಂಜಾಟಮುಕ್ತವಾಗಿ ನೆಮ್ಮದಿ, ಶಾಂತಿ, ಸಹಬಾಳ್ವೆ ಬೆಳೆಸಿಕೊಳ್ಳಬೇಕು’ ಎಂದರು.

‘ಒಬ್ಬರನ್ನು ಪ್ರೀತಿ ಭಾವದಿಂದ ಮಾತನಾಡಿಸಿದರೆ ಸಮಾಜದಲ್ಲಿ ಶಾಂತಿದಾಯಕ ಬದುಕನ್ನು ಸಾಗಿಸಬಹುದಾಗಿದೆ. ಇಂದಿನ ಮಠಮಾನ್ಯಗಳು ಆಧ್ಯಾತ್ಮಿಕ ಕೇಂದ್ರಗಳಾಗಿ ಹೊರ ಹೊಮ್ಮಬೇಕು. ಜನರಲ್ಲಿ ಮೂಢನಂಬಿಕೆ ಹೊರಹಾಕಿ ಮೌಲ್ಯಯುತ ತತ್ವಗಳನ್ನು ಬೆಳೆಸಿ, ಜನರು ಸುಖ, ಶಾಂತಿ, ನೆಮ್ಮದಿಯಿಂದ ಬದುಕುವಂತೆ ಮಾಡಬೇಕು’ ಎಂದರು.

ಸವದತ್ತಿ ಎಪಿಎಂಸಿ ನಿರ್ದೇಶಕ ಎಫ್.ಎಸ್. ಸಿದ್ಧನಗೌಡರ ಮಾತನಾಡಿ, ಯಕ್ಕುಂಡಿ ವಿರಕ್ತಮಠಕ್ಕೆ ವಿಶೇಷವಾದ ಸ್ಥಾನಮಾನವಿದೆ. ಮಠದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕೊಡುಗೆ ಅಪಾರವಿದೆ. ಭಕ್ತರು ಗುರು ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜೈಲಾನಿ ಬಾರಿಗಿಡದ, ಸದಸ್ಯ ಬಸವರಾಜ ನಡುವಿನಮನಿ, ಶಂಕರ ಪಾಶ್ಚಾಪುರ, ಇಸ್ಮಾಯಿಲ್ ಮುಜಾವರ, ವಿಜಯಕಾಂತ ದೇಸಾಯಿ, ನಾಗಪ್ಪ ಹಿಟ್ಟನಗಿ, ಬಸನಗೌಡ ಪಾಟೀಲ, ಬಂದೇನವಾಜ್ ಮುಲ್ಲ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT