ADVERTISEMENT

ಸಮರ ಕಲೆಗೆ ನವಲಿಹಾಳ ಯುವಕರು ಸೈ

ಕಲೆಯನ್ನು ಕರಗತ ಮಾಡಿಕೊಂಡ ಗ್ರಾಮದ 30–40 ಉತ್ಸಾಹಿಗಳು

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 6:47 IST
Last Updated 17 ಜೂನ್ 2018, 6:47 IST
ಚಿಕ್ಕೋಡಿ ತಾಲ್ಲೂಕಿನ ನವಲಿಹಾಳ ಗ್ರಾಮದ ಶಿವಶಂಭೋ ಮರ್ದಾನಿ ಖೇಳ ಸಂಘದ ಯುವಕರು ರಾಯಗಡದಲ್ಲಿ ಸಮರ ಕಲೆ ಪ್ರದರ್ಶನ ನೀಡಿದರು
ಚಿಕ್ಕೋಡಿ ತಾಲ್ಲೂಕಿನ ನವಲಿಹಾಳ ಗ್ರಾಮದ ಶಿವಶಂಭೋ ಮರ್ದಾನಿ ಖೇಳ ಸಂಘದ ಯುವಕರು ರಾಯಗಡದಲ್ಲಿ ಸಮರ ಕಲೆ ಪ್ರದರ್ಶನ ನೀಡಿದರು   

ಚಿಕ್ಕೋಡಿ: ರಾಜ ಮಹಾರಾಜರ ಕಾಲದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದ ಸಮರ ಕಲೆಗಳು ಇಂದಿನ ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ಯುವ ಜನರಿಂದ ನೇಪಥ್ಯಕ್ಕೆ ಸರಿಯುತ್ತಿವೆ. ಆದರೆ, ತಾಲ್ಲೂಕಿನ ನವಲಿಹಾಳ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜರ ಕಾಲದ ದಾಂಢಪಟ್ಟಾ, ತಲವಾರ ಪ್ರಯೋಗ ಮೊದಲಾದ ಸಮರ ಕಲೆಗಳನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದೆ.

ಹಿಂದೊಂದು ದಿನ ರಾಜಾಶ್ರಯ ಪಡೆದಿದ್ದ ಸಮರ ಕಲೆ ಇಂದು ಅವನತಿಯತ್ತ ಸಾಗಿದೆ. ಕದನ ವಿದ್ಯೆಯೊಂದಿಗೆ ದೈಹಿಕ ಕ್ಷಮತೆ ಕಾದುಕೊಂಡು ಮನಸನ್ನು ಹದದಲ್ಲಿಡುವ ಈ ತಂತ್ರವನ್ನು ಕರಗತ ಮಾಡಿಕೊಂಡು ಆರೋಗ್ಯವಂತ ಬದುಕು ನಡೆಸುವತ್ತ ಇಂದಿನ ಯುವ ಜನಾಂಗ ಆಸಕ್ತಿ ತೋರಬೇಕಾಗಿದೆ. ಅಂತೆಯೇ ನವಲಿಹಾಳ ಗ್ರಾಮದ 30ರಿಂದ 40 ಜನರ ತಂಡ ಸಮರ ಕಲೆಯನ್ನು ಕರಗತ ಮಾಡಿ
ಕೊಂಡು ಹಲವು ಕಡೆಗಳಲ್ಲಿ ಚೇತೋಹಾರಿ ಪ್ರದರ್ಶನಗಳನ್ನು ನೀಡಿ ಸೈ ಎನ್ನಿಸಿಕೊಂಡಿದೆ.

ಮೈ ಕಂಪಿಸುವಂತೆ ಮಾಡುವ ಪಟ್ಟುಗಳು, ಹಾವಿನಂತೆ ಸುರುಳಿ ಸುತ್ತಿ ಮೇಲೆದ್ದು ನೆಲಕ್ಕುರುಳಿ ಬೀಳುತ್ತಲೇ ಮತ್ತೆ ಪುಟಿದೆದ್ದು ಎದುರಾಳಿಯನ್ನು ಸೆಣೆಸಲು ಮುಗಿಬೀಳುವ ಪರಿ, ಹೇಗೆ ಬೇಕಾದರೂ ತಿರುಚಬಲ್ಲ ಸಲೀಸಾದ ಕಾಯ, ಬಿಲ್ಲಿನಂಥ ದೇಹ. ಆಳೆತ್ತರಕ್ಕೆ ಎಗರಿ ಕತ್ತಿ ಬೀಸುವ ಧಾಟಿಯೊಂದಿಗೆ ಪ್ರದರ್ಶಿಸುವ ಸಮರ ಕಲೆ ನೋಡುಗರ ಎದೆ ಝಲ್ಲೆನ್ನುವಂತೆ ಮಾಡುತ್ತದೆ. ಕಲೆಯನ್ನು ಮೇಲೆತ್ತುವ ಉದ್ದೇಶದೊಂದಿಗೆ ಸಮಕಾಲೀನ ನೃತ್ಯ ಶೈಲಿ ಹಾಗೂ ಸಂಗೀತದೊಂದಿಗೆ ಸೇರಿಸಿ ಪ್ರದರ್ಶಿಸಲಾಗುತ್ತಿದೆ.

ADVERTISEMENT

ಶತಮಾನದ ಆಚೆಯಿಂದಲೂ ನವಲಿಹಾಳ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನು ಆದರ್ಶಗಳನ್ನು ಆರಾಧಿಸುತ್ತ ಬರಲಾಗುತ್ತಿದ್ದು, ಸಮರ ಕಲೆಯೂ ಈ ಗ್ರಾಮದಲ್ಲಿ ಸಾಂಪ್ರದಾಯಿಕ ಕ್ರೀಡೆಯಂತಾಗಿತ್ತು. ಆದರೆ, ಬದಲಾದ ಕಾಲಘಟ್ಟದಲ್ಲಿ ಕೆಲ ವರ್ಷಗಳ ಕಾಲ ಗ್ರಾಮದಲ್ಲಿ ಸಮರ ಕಲೆಯ ವೈಭವ ಕ್ಷೀಣಿಸಿತ್ತು. ಇದನ್ನರಿತ ಗ್ರಾಮದ ದತ್ತು ಗುರವ ಎಂಬುವವರ ತಂದೆ ಸತಾರದಿಂದ ಏಳು ಜನ ಸಮರ ಕಲಾ ಪ್ರವೀಣರನ್ನು ಗ್ರಾಮಕ್ಕೆ ಕರೆಸಿಕೊಂಡು ದಾಂಢಪಟ್ಟಾ, ಮಲಕಂಭ, ಕುಸ್ತಿ ಮೊದಲಾದ ಸಮರಕಲೆ ಕ್ರೀಡೆಯನ್ನು ಕಲಿಸಿಕೊಟ್ಟರು. ಇದನ್ನು ಕರಗತ ಮಾಡಿಕೊಂಡ ದತ್ತು ಗುರವ, ಮಾರುತಿ ಗುರವ ಮೊದಲಾದ ಯುವಕರು ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಸಮರ ಕಲೆ ಪ್ರದರ್ಶನದಲ್ಲಿ ಗಮನ ಸೆಳೆದರು.

ಕಾಲಾಂತರದಲ್ಲಿ ಗ್ರಾಮದಲ್ಲಿ ಮತ್ತೆ ಸಮರ ಕಲೆ ಕಳೆಗುಂದಿತು. ಇತ್ತೀಚಿನ ದಿನಗಳಲ್ಲಿ ಸರ್ಕಾರ ಹಬ್ಬ ಹರಿದಿನಗಳಲ್ಲಿ ಡಾಲ್ಬಿ ಬಳಕೆಯನ್ನು ನಿಷೇಧಿಸಿತು. ಇದರಿಂದ ಮತ್ತೆ ಗ್ರಾಮದಲ್ಲಿ ಸಮರ ಕಲೆಯನ್ನೇ ಪುನಶ್ಚೇತನಗೊಳಿಸಬೇಕು ಎಂಬ ಉದ್ದೇಶದಿಂದ ಗ್ರಾಮ ಪಂಚಾಯ್ತಿ ಸದಸ್ಯರಾದ ಸುನಿಲ ಪಾಟೀಲ ಮತ್ತು ಸುಧೀರ ಖಿಲಾರೆ ಅವರ ಮುಂದಾಳತ್ವದಲ್ಲಿ ಅಶೋಕ ಗುರವ ಮತ್ತು ಮನೋಹರ ಗುರವ ಅವರ ‘ಶಿವಶಂಭೋ ಮರ್ದಾನಿ ಖೇಳ ಸಂಘ’ ಕಟ್ಟಿಕೊಂಡು ಸುಮಾರು 40 ಜನ ಯುವಕರಿಗೆ ಸಮರ ಕಲೆ ತರಬೇತಿ ನೀಡಿದ್ದಾರೆ. ತಂಡದಲ್ಲಿ ಋಷಿಕೇಶ ಗುರವ ಎಂಬ ಸಿವಿಲ್ ಎಂಜಿನಿಯರ್ ಕೂಡ ಇದ್ದಾರೆ.

ಸುಧಾಕರ ತಳವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.