ADVERTISEMENT

‘ಸಾಲ ಮನ್ನಾ: ಸ್ಪಂದಿಸದ ಕೇಂದ್ರ ಸರ್ಕಾರ’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 5:57 IST
Last Updated 15 ನವೆಂಬರ್ 2017, 5:57 IST

ಬೆಳಗಾವಿ: ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಮಹದಾಯಿ ವಿವಾದ ಬಗೆಹರಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಸುವರ್ಣ ವಿಧಾನಸೌಧ ಬಳಿಯ ಕೊಂಡಸಕೊಪ್ಪದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಮಾತನಾಡಿ, ‘ಮತದಾನ ಇಂದು ‘ಮತಧನ’ವಾಗಿ ಹೋಗಿದೆ. ಸ್ವಾಭಿಮಾನ ದಿಂದ ಬದುಕಬೇಕು ಎನ್ನುವ ಕಿಚ್ಚು ಎಲ್ಲ ರೈತರಲ್ಲೂ ಬರಬೇಕು. ಚುನಾವಣೆಯಲ್ಲಿ ಹಣ, ಮದ್ಯ, ಆಮಿಷ, ಜಾತಿಗೆ ಬಲಿಯಾಗಬಾರದು. ಜಿಲ್ಲೆಗೆ ಒಬ್ಬ ರೈತ ಮುಖಂಡರನ್ನು ಚುನಾಯಿಸಿ, ವಿಧಾನಸಭೆಗೆ ಕಳುಹಿಸಬೇಕು. ಆಗ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ’ ಎಂದು ತಿಳಿಸಿದರು.

‘ಸಹಕಾರಿ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಸಂಪೂರ್ಣ ಸಾಲ, ಸ್ತ್ರೀಶಕ್ತಿ ಸಂಘಗಳಿಗೆ ನೀಡಿ ಸಾಲ ಮನ್ನಾ ಮಾಡಬೇಕು. ಕಬ್ಬಿನ ಬಿಲ್‌ ಬಾಕಿ ಕೊಡಿಸಬೇಕು. ಕಬ್ಬಿಗೆ ನ್ಯಾಯಸಮ್ಮತ ದರ ನಿಗದಿಪಡಿಸಬೇಕು. ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿ ನಷ್ಟ ಅನುಭವಿಸಿದ ರೈತರಿಗೆ ಕೂಡಲೇ ಪರಿಹಾರ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕೋಡಿಹಳ್ಳಿ ವಿರುದ್ಧ ವಾಗ್ದಾಳಿ: ರೈತ ಸಂಘದ ಮತ್ತೊಂದು ಬಣದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ವಿರುದ್ಧ ಮುಖಂಡರು ವಾಗ್ದಾಳಿ ನಡೆಸಿದರು. ‘ಸಾಲ ಮನ್ನಾ ಅರ್ಜಿ ಸಲ್ಲಿಕೆ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಮಾಡಲಾಗಿದೆ. ಇದೊಂದು ತೋರಿಕೆ ಕಾರ್ಯಕ್ರಮ. ಇದರಿಂದ ಪ್ರಯೋಜನ ಆಗುವುದಿಲ್ಲ’ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಟೀಕಿಸಿದರು.

‘ರೈತರ ಸಮಸ್ಯೆಗಳ ಪರಿಹಾರಕ್ಕೆ ಹೋರಾಡುವವರು ನಾಯಕರು. ಸಮಸ್ಯೆಗಳನ್ನು ದುರುಪಯೋಗ ಮಾಡಿಕೊಳ್ಳುವವರು ನಾಯಕರಲ್ಲ. ಸಾಲ ಮನ್ನಾ ಅರ್ಜಿ ಸಲ್ಲಿಕೆಗೆ ಹಣ ಪಡೆಯುವುದು ರೈತ ಚಳವಳಿಗೆ ಹಿನ್ನಡೆಯಾಗುತ್ತದೆ. ಹಣ ಪಡೆದು ವಂಚಿಸಲಾಗಿದೆ ಎಂದು ಹಾಸನ ಜಿಲ್ಲೆಯಲ್ಲಿ ಕೆಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಇಂತಹ ಘಟನೆಗಳಿಂದ, ಹಸಿರು ಶಾಲು ಹಾಕಿದವರನ್ನೆಲ್ಲ ಜನರು ಪ್ರಶ್ನಿಸುವ ಸ್ಥಿತಿ ಬರುತ್ತದೆ’ ಎಂದು ಹೇಳಿದರು.

‌ಸಂಘದ ಹೆಸರು ಬದಲಾವಣೆ: ದನಿಗೂಡಿಸಿದ ಕೆ.ಎಸ್‌. ಪುಟ್ಟಣ್ಣಯ್ಯ, ‘ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹೆಸರಿನಲ್ಲಿ ಮತ್ತೊಬ್ಬರು ಸಂಘಟನೆ ಮಾಡಿಕೊಂಡಿದ್ದಾರೆ. ಹೀಗಾಗಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಸಿರುಸೇನೆ ಎನ್ನುವುದನ್ನು ಬಿಟ್ಟು ಹೆಸರು ಬದಲಾವಣೆ ಮಾಡಿಕೊಳ್ಳಬೇಕು. ರಾಜ್ಯ ರೈತ ಸಂಘ ಎನ್ನುವುದರೊಂದಿಗೆ ಸೂಕ್ತ ಹೆಸರು ಸೇರಿಸಿಕೊಳ್ಳಬೇಕು’ ಎಂದರು. ಇದಕ್ಕೆ ನರೆದಿದ್ದವರು ಚಪ್ಪಾಳೆ ಮೂಲಕ ಬೆಂಬಲ ಸೂಚಿಸಿದರು.

ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ‘ರೈತ ಪರವಾದ ಸರ್ಕಾರ ನಮ್ಮದು. ಹೀಗಾಗಿಯೇ ₹ 50ಸಾವಿರದವರೆಗಿನ ಸಾಲ ಮನ್ನಾ ಮಾಡಿದ್ದೇವೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲ ಮನ್ನಾ ಮಾಡುವಂತೆ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದಕ್ಕೆ ಸ್ಪಂದನೆ ದೊರೆತಿಲ್ಲ. ಕೇಂದ್ರ ಸಚಿವರು ರೈತರ ಕುರಿತು ಕೀಳುಮಟ್ಟದ ಹೇಳಿಕೆ ನೀಡಿದರು’ ಎಂದರು. ರೈತ ಸಂಘದ ಅಧ್ಯಕ್ಷ ಕೆ.ಟಿ. ಗಂಗಾಧರ, ವರಿಷ್ಠ ಮಂಡಳಿ ಸದಸ್ಯ ಕಲ್ಯಾಣರಾವ್‌ ಮುಚಳಂಬಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.