ADVERTISEMENT

ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 7:15 IST
Last Updated 8 ಜುಲೈ 2017, 7:15 IST

ಚಿಕ್ಕೋಡಿ: ರಾಯಬಾಗ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕಿನ ಬೆಳಕೂಡ ಗ್ರಾಮ ವ್ಯಾಪ್ತಿಯ ದೊಡ್ಡಹಳ್ಳಕ್ಕೆ ಚಿಕ್ಕದಾಗಿದ್ದ ಸೇತುವೆ ಯನ್ನು ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಶುಕ್ರವಾರ ಚಾಲನೆ ನೀಡಿದರು.

‘ಬೆಳಕೂಡ ಗ್ರಾಮದ ದೊಡ್ಡಹಳ್ಳಕ್ಕೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸ ಬೇಕು ಎಂಬ ಬೆಳಕೂಡ, ಡೋಣವಾಡ, ಹಂಚಿನಾಳ, ಕರಗಾಂವ, ಉಮರಾಣಿ ಮೊದಲಾದ ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಲೋಕೋಪಯೋಗಿ ಇಲಾಖೆಯಿಂದ ನಬಾರ್ಡ್‌ ಯೋಜನೆಯಡಿ ₹1.20 ಕೋಟಿ ಅನುದಾನ ಮಂಜೂರು ಮಾಡಿಸಿಕೊಂಡು ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲಾಗಿದ್ದು, ಗ್ರಾಮಸ್ಥರು ವಿಶೇಷ ಮುತುವರ್ಜಿ ವಹಿಸಿ ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ನಿರ್ಮಿಸಿ ಕೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮಹೇಶ ಭಾತೆ,‘ಈಗಾಗಲೇ ಬೆಳಕೂಡ ಗ್ರಾಮಸ್ಥರಿಗೆ ₹50 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಸರಬರಾಜು ಯೋಜನೆ ಜಾರಿಗೊಳಿಸಲಾಗುತ್ತಿದೆ. ಅಲ್ಲದೇ, ನಾಗರ ಮುನ್ನೋಳಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿಯೂ ಮುಂಬರುವ 15 ದಿನಗಳಲ್ಲಿ ಕುಡಿಯುವ ನೀರಿನ ಸರಬರಾಜು ಪ್ರಾರಂಭ ಆಗಲಿದೆ.

ADVERTISEMENT

'ಮುಂಬರುವ ದಿನಗಳಲ್ಲಿ ಹೊಸ ಸೇತುವೆ ಬಳಿ ಚೆಕ್‌ಡ್ಯಾಂ ನಿರ್ಮಿಸಿ ನೀರು ಸಂಗ್ರಹಕ್ಕೂ ಶಾಸಕ ಐಹೊಳೆ ಅವರು ಅನುದಾನ ಮಂಜೂರು ಮಾಡಿಸಲಿದ್ದಾರೆ’ ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮಹಾದೇವ ಪಾಮದಿನ್ನಿ, ಚೆನ್ನಪ್ಪ ಕಾಮಗೌಡ, ಟಿ.ಎಸ್‌.ಮೋರೆ, ನಿಂಗಪ್ಪ ಕುರಬರ, ವಿಜಯ ಕೋಠಿವಾಲೆ, ಬಸವಣ್ಣಿ ಪಾಶ್ಚಾಪುರೆ, ಬಾಳಪ್ಪ ತಳವಾರ, ಸಂಭಾ ಚವ್ಹಾಣ, ಮಲ್ಲಪ್ಪಾ ಅರಭಾವಿ, ಲೋಕೋಪಯೋಗಿ ಇಲಾಖೆ ಎಇ ವಿಜಯ ಸಂಗಪ್ಪಗೋಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.