ADVERTISEMENT

‘ಹಿರಿಯ ಜೀವಿಗಳಿಗೆ ಗೌರವ ನೀಡಿ’

ವಚನ ಸಾಹಿತ್ಯ ಪರಿಷತ್ತಿನ ರಾಮದುರ್ಗ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 5:50 IST
Last Updated 31 ಜನವರಿ 2017, 5:50 IST
ರಾಮದುರ್ಗದಲ್ಲಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭವನ್ನು ಮುಳ್ಳೂರು ಅನ್ನದಾನೇಶ್ವರ ಮಠದ ಚಂದ್ರಶೇಖರ ಸ್ವಾಮೀಜಿ ಉದ್ಘಾಟಿಸಿದರು. ವಚನ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಆರ್‌. ಗಂಗಣ್ಣನವರ, ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ಆರ್‌.ಎಸ್‌. ಪಾಟೀಲ ಇದ್ದರು
ರಾಮದುರ್ಗದಲ್ಲಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭವನ್ನು ಮುಳ್ಳೂರು ಅನ್ನದಾನೇಶ್ವರ ಮಠದ ಚಂದ್ರಶೇಖರ ಸ್ವಾಮೀಜಿ ಉದ್ಘಾಟಿಸಿದರು. ವಚನ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಆರ್‌. ಗಂಗಣ್ಣನವರ, ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ಆರ್‌.ಎಸ್‌. ಪಾಟೀಲ ಇದ್ದರು   

ರಾಮದುರ್ಗ: ಯುವಕರು ಉದ್ಯೋಗದ ಅವಸರದಲ್ಲಿ ತಮ್ಮ ಪಾಲಕರನ್ನು ಪೋಷಣೆ ಮಾಡದೇ ಅನಾಥಾಶ್ರಮ ಗಳಿಗೆ ಸೇರಿಸುವಂತಹ ಘಟನೆಗಳು ಇಂದಿನ ಕಾಲದಲ್ಲಿ ಹೆಚ್ಚಾಗತೊಡಗಿದೆ ಎಂದು ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಜರುಗಿದ ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತು ಮತ್ತು ಸಂಸ್ಕೃತಿಕ ಪರಿಷತ್ತುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವೇದಿಕೆಯ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿಯ ಹಿರಿಯ ಜೀವಿಗಳನ್ನು ಗೌರವಿಸಿ ಪೊಷಿಸಬೇಬೇಕಿದೆ. ಆ ನಿಟ್ಟಿನಲ್ಲಿ 12 ನೇ ಶತಮಾನದ ವಚನ ಸಾಹಿತ್ಯ ಅಧ್ಯಯನ ಮಾಡುವತ್ತ ಯುವಕರನ್ನು ಪ್ರೇರೇಪಿಸಬೇಕು. ಅಂದಾಗ ಮಾನವೀಯ ಮೌಲ್ಯಗಳ ಉಳಿಯಲು ಸಾಧ್ಯ ಎಂದು ಹೇಳಿದರು.

ಇಂದಿನ ಯಾಂತ್ರಿಕ ಬದುಕಿನ ಮಾನವ ಸಂಬಂಧಗಳಲ್ಲಿ ಮಾನವೀಯ ಮೌಲ್ಯಗಳು ಮಾಯವಾಗುತ್ತಿವೆ. ಅತಿಯಾದ ಬುದ್ಧಿವಂತರು ವಿದೇಶಗಳಿಗೆ ಹೋಗಿ ತಮ್ಮ ಕೌಶಲ್ಯಗಳನ್ನು ಹಣದಾಸೆಗಾಗಿ ಮಾರಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ದೇಶದ ಬುದ್ಧಿವಂತ ನಾಗರಿಕರ ಕೌಶಲಗಳು ಇಲ್ಲಿಯೇ ಬಳಕೆಯಾಗುವಂತೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಉದ್ದಿಮೆಗಳನ್ನು ಸ್ಥಾಪನೆ ಮಾಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ಸಮಾರಂಭ ಉದ್ಘಾಟಿಸಿದ ಮುಳ್ಳೂರ ಅನ್ನದಾನೇಶ್ವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರ ಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯ ಪರಿಷತ್ತು ಸೃಜನಾತ್ಮಕ ಕಾರ್ಯಗಳನ್ನು ಮಾಡಿ ಯುವ ಜನತೆಗೆ ವಚನಗಳ ಸಾರ ತಿಳಿಸುವಂತಹ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಮುಂದಾಗಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ರೇಣಪ್ಪ ಸೋಮಗೊಂಡ, ಜಾನಪದ ಡೊಳ್ಳು ವಾದ್ಯ ಕಲಾವಿದ ಸಿದ್ದು ಮೋಟೆ, ಬಿ. ಕೆ. ಹೊಂಗಲ, ಹಣಮಂತಗೌಡ ಮುದಿಗೌಡರ, ಸುರೇಶ ದೇಸಾಯಿ, ಶಿವಾನಂದ ಬರದೇಲಿ, ಡಿ. ಎಫ್. ಹಾಜಿ ಇತರರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್. ಎಸ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸಂಘಟಿಸಿದ್ದ ಕವಿಗೋಷ್ಠಿಯಲ್ಲಿ 26 ಜನ ಕವಿಗಳು ತಮ್ಮ ಕವನಗಳನ್ನು ಓದಿದರು. ಆರ್. ಸಿ. ರಾಠೋಡ ಆಶಯ ಭಾಷಣ ಪ್ರಸ್ತುತ ಪಡಿಸಿದರು. ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಗಂಗಣ್ಣವರ ಸ್ವಾಗತಿಸಿದರು. ಶಂಕರ ಲಮಾಣಿ ಕಾರ್ಯಕ್ರಮ ನಿರೂಪಿಸಿದರು. ಕಿರಣ ದೇಸಾಯಿ ವಂದಿಸಿದರು.

***

ವಚನ ಸಾಹಿತ್ಯ ಪರಿಷತ್ತು ಸೃಜನಾತ್ಮಕ ಕಾರ್ಯಗಳನ್ನು ಮಾಡಿ ಯುವ ಜನತೆಗೆ ವಚನಗಳ ಸಾರ ತಿಳಿಸುವಂತಹ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಮುಂದಾಗಬೇಕು
- ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುಳ್ಳೂರು ಅನ್ನದಾನೇಶ್ವರ ಮಠ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.