ADVERTISEMENT

‘ನಿಮಗೇಕೆ ಕೊಡಬೇಕು ಕಪ್ಪ...!’

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 6:30 IST
Last Updated 24 ಅಕ್ಟೋಬರ್ 2014, 6:30 IST

ರಾಣಿ ಚನ್ನಮ್ಮ ವೇದಿಕೆ (ಕಿತ್ತೂರು): ‘ನಿಮಗೇಕೆ ಕೊಡಬೇಕು ಕಪ್ಪ. ನೀವು ನಮ್ಮ ಅಣ್ಣ– ತಮ್ಮಂದಿರೇ, ದಾಯಾ­ದಿಗಳೇ...’ ಎಂದು ಹಿರಿಯ ನಟಿ ಡಾ. ಬಿ. ಸರೋಜಾದೇವಿ ಅವರು ಗುಡು­ಗುತ್ತಿದ್ದಂತೆ ಪ್ರೇಕ್ಷಕರಿಂದ ಚಪ್ಪಾಳೆಯ ಸುರಿಮಳೆ ಸುರಿಯಿತು.

ಗುರುವಾರ ಸಂಜೆ ನಡೆದ ಕಿತ್ತೂರು ಉತ್ಸವದ ಉದ್ಘಾಟನಾ ಸಮಾರಂಭ­ದಲ್ಲಿ ಸರೋಜಾದೇವಿ ಅವರು ‘ವೀರರಾಣಿ ಕಿತ್ತೂರು ಚನ್ನಮ್ಮ’ ಸಿನಿಮಾದ ಡೈಲಾಗ್‌ ಹೇಳುತ್ತಿದ್ದಂತೆ ಕಿತ್ತೂರಿನ ಜನ ಪುಳಕಿತಗೊಂಡರು. ‘ಹಾರು, ಹಾರು ಇನ್ನೆಷ್ಟು ದಿನ ಹಾರುತ್ತದೆ ನಾನೂ ನೋಡುತ್ತೇನೆ. ನನ್ನ ಮಗ ಸಂಗೊಳ್ಳಿ ರಾಯಣ್ಣ ಬಂದು ಬ್ರಿಟಿಷರ ಈ ಧ್ವಜವನ್ನು ತೆಗೆದು­ಹಾಕು­ತ್ತಾನೆ’ ಎಂದು ಸಿನಿಮಾದ ಡೈಲಾಗ್‌ ಹೇಳಿದಾಗಲೂ ಕರತಾಡನ ಮೊಳಗಿತು.

‘16 ವರ್ಷ ವಯಸ್ಸಾಗಿದ್ದಾಗ ನಾನು ಚನ್ನಮ್ಮನ ಪಾತ್ರ ವಹಿಸಿದ್ದೆ. ಆಗ ಜೀವನ ಎಂದರೆ ಏನು ಎಂಬುದು ನನಗೆ ಗೊತ್ತಿರಲಿಲ್ಲ. ಈಗ ಆ ಪಾತ್ರ ಮಾಡಿದ್ದರೆ ಅದಕ್ಕೆ ಇನ್ನೂ ಹೆಚ್ಚು ಜೀವ ತುಂಬುತ್ತಿದ್ದೆ. ಬಾಲ್ಯದಲ್ಲೂ ಆ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿ­ದ್ದೇನೆ ಎಂಬ ಸಮಾಧಾನ ಇದೆ. ಚನ್ನ­ಮ್ಮನ ಪಾತ್ರ ನನಗೆ ಅತ್ಯಂತ ಪ್ರೀತಿ­ಯಾಗಿದ್ದು, ಅದನ್ನು ಮರೆಯಲು ಸಾಧ್ಯವಿಲ್ಲ. ಚನ್ನಮ್ಮ ತನ್ನ ಗಂಡ, ಮಗ­ನನ್ನು ಕಳೆದುಕೊಳ್ಳುತ್ತಾಳೆ. ಆ ಪಾತ್ರ­ವನ್ನು ಮಾಡಿದ ನಾನೂ ನನ್ನ ಗಂಡ, ಮಕ್ಕಳನ್ನು ಕಳೆದುಕೊಂಡಿದ್ದೇನೆ’ ಎಂದು ಸಿನಿಮಾ ಕುರಿತು ಹೇಳುತ್ತ ಗದ್ಗದಿತ­ರಾದರು.

‘ಪ್ರತಿಯೊಬ್ಬರೂ ಸತ್ಯ– ಧರ್ಮ­ಕ್ಕಾಗಿ ಹೋರಾಡಬೇಕು. ಜೀವನದಲ್ಲಿ ಆ ಆದರ್ಶವನ್ನು ಅಳವಡಿಸಿಕೊಳ್ಳಬೇಕು. ದೇಶಕ್ಕಾಗಿ ಪ್ರತಿಯೊಬ್ಬರೂ ಏನಾದರೂ ಕೊಡುಗೆ ನೀಡಬೇಕು. ಸ್ವಾತಂತ್ರ್ಯೋತ್ಸ­ವದ ದಿನದಂದು ಚನ್ನಮ್ಮನಂತಹ ಸಿನಿಮಾ ಪ್ರದರ್ಶನ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.

ಅರಮನೆ ಅಭಿವೃದ್ಧಿಗೆ ಒತ್ತಾಯ:  ‘ಇಂದು ಅರಮನೆಗೆ ಹೋಗಿ ನೋಡಿದಾಗ ಬಹಳ ನೋವಾಯಿತು. ಕಿತ್ತೂರಿನ ಕೋಟೆ, ಅರಮನೆಯು ಕುಸಿದು ಬೀಳುತ್ತಿದೆ. ಚನ್ನಮ್ಮ ಅಡುಗೆ ಮಾಡುತ್ತಿದ್ದ ಸ್ಥಳ ಹಾಳಾಗಿದೆ. ಸರ್ಕಾರ ಯಾವುದೇ ಕಾರ್ಯಕ್ರಮಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಹೀಗಾಗಿ ಹಣ ಖರ್ಚು ಮಾಡಿ ಅರಮನೆಯನ್ನು ಸರ್ಕಾರ ಅಭಿವೃದ್ಧಿಪಡಿಸಬೇಕು’ ಎಂದು ಸರೋಜಾದೇವಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.