ADVERTISEMENT

₹1.65 ಕೋಟಿ ಅನುದಾನ ವಾಪಸ್‌

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರಿಂದ ತರಾಟೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 9:52 IST
Last Updated 15 ಜೂನ್ 2018, 9:52 IST

ರಾಮದುರ್ಗ: ಕಳೆದ ಸಾಲಿನಲ್ಲಿನ ₹1.65 ಕೋಟಿ ಅನುದಾನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಳಿ ಹೋಗಿದ್ದಕ್ಕೆ ತಾಲ್ಲೂಕು ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸ್ಥಳೀಯ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಗುರುವಾರ ಅಧ್ಯಕ್ಷೆ ಶಕುಂತಲಾ ವಡ್ಡರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳೂ ಸೇರಿದಂತೆ ಕೆಲವು ಅಧಿಕಾರಿಗಳನ್ನು ನಿಂದಿಸಿದರು.

ಬೆಳಿಗ್ಗೆ 11 ಗಂಟೆಗೆ ಪ್ರಾರಂಭಗೊಂಡ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಪ್ರಗತಿಯ ಕುರಿತು ಸ್ಪಷ್ಟ ಪಡಿಸಲು ಮುಂದಾಗುತ್ತಿದಂತೆ ಆಕ್ರೋಶಗೊಂಡ ಸದಸ್ಯ ಮೌನೇಶ ಕಮ್ಮಾರ, ‘ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ತಾಲ್ಲೂಕು ಪಂಚಾಯ್ತಿ ಅನುಮೋದನೆ ನೀಡಿದ್ದರೂ ಸರಿಯಾಗಿ ಬಳಸಿಕೊಂಡಿಲ್ಲ. ಸರ್ಕಾರ
ದಿಂದ ಹಣ ಮರಳಿ ಹೋಗುವಂತೆ ಮಾಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ತೋರುತ್ತದೆ’ ಎಂದರು.

ADVERTISEMENT

‘ತಾಲ್ಲೂಕು ಪಂಚಾಯ್ತಿಗೆ ಬರುವ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳದೇ ಅನುದಾನ ಮರಳಿ ಹೋಗಲು ಕಾರಣರಾಗಿರುವ ಕಾರ್ಯನಿರ್ವಾಹಕ ಅಧಿಕಾರಿ ಆರ್‌.ವಿ. ನಿಡೋಣಿ ಮತ್ತು ಎಂಜಿನಿಯರ್‌ ವಿಜಯಕುಮಾರ ಕಾರಣರಾಗಿದ್ದಾರೆ’ ಎಂದು ದೂರಿದ ಸದಸ್ಯೆ ವಿಜಯಲಕ್ಷ್ಮಿ ನಾಡಗೌಡ್ರ   ಆರೋಪಿಸಿದರು.

‘ಕುಡಿಯುವ ನೀರಿನ ವಿಷಯವಾಗಿ ಗ್ರಾಮ ಪಂಚಾಯ್ತಿಗಳಿಗೆ ಬರುವ ಅನುದಾನದಲ್ಲಿ ಮೊದಲ ಅದ್ಯತೆ ಕುಡಿಯುವ ನೀರಿಗೆ ನೀಡಬೇಕೆಂಬ ಆದೇಶ ಇದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದರೂ ಅದನ್ನು ಲೆಕ್ಕಿಸದೇ ಪಿಡಿಒಗಳು 14ನೇ ಹಣಕಾಸಿನ ಹಣವನ್ನು ಬೇರೆ ಕೆಲಸಗಳಿಗೆ ಬಳಕೆ ಮಾಡಿಕೊಂಡಿದ್ದಾರೆ' ಎಂದು ಶಿವಪ್ಪ ಮೇಟಿ ಕಿಡಿಕಾರಿದರು.

ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲು ಸೂಚನೆ ನೀಡುವುದಾಗಿ ತಾಲ್ಲೂಕು ಪಂಚಾಯ್ತಿ ಇಓ ಆರ್‌.ವಿ. ದೇಶಪಾಂಡೆ ಮುಂದಾಗುತ್ತಿದ್ದಂತೆ ಸಿಟ್ಟಿನಿಂದಲೇ ಮಾತಿಗೆ ಮುಂದಾದ ಶಿವಪ್ಪ ಮೇಟಿ ಅವರು, ‘ಮೊದಲು ನೀವು ಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಕಲಿಯಿರಿ. ಸರಿಯಾಗಿ ಕೆಲಸ ಮಾಡದ ಸಿಬ್ಬಂದಿ ಮೇಲೆ ಯಾವ ಕ್ರಮ ತೆಗೆದುಕೊಂಡಿದ್ದೀರಿ’ ಎಂದು ಪ್ರಶ್ನಿಸಿದರು. ‘ಇದೇ ರೀತಿ ಆದರೆ ಸಭೆಯನ್ನು ಮೊಟಕುಗೊಳಿಸಿ ಕೆಲಸ ಮಾಡದ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳುವರೆಗೂ ಧರಣಿ ನಡೆಸಲಾಗುವುದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯ್ತಿಗೆ ಬರುವ ಅನುದಾನವೇ ಅಲ್ಪ. ಅಂಥದ್ದರಲ್ಲಿ ಸರ್ಕಾರದಿಂದ ಹಣ ಮರಳಿ ಹೋಗುವಂತೆ ಮಾಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯ
- ಮೌನೇಶ ಕಮ್ಮಾರ, ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.