ADVERTISEMENT

20 ಸಾವಿರ ಕುಟುಂಬಗಳಿಗೆೆ ‘ಉಜ್ವಲ’

ಅಡುಗೆ ಅನಿಲ ವಿತರಣೆ ಯೋಜನೆಗೆ ಚಾಲನೆ ನೀಡಿದ ಸಂಸದ ಸುರೇಶ ಅಂಗಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 11:13 IST
Last Updated 10 ಜುಲೈ 2017, 11:13 IST

ಬೆಳಗಾವಿ: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಉಜ್ವಲ’ ಯೋಜನೆಯಡಿ ಜಿಲ್ಲೆಯ 20 ಸಾವಿರ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕವನ್ನು ಉಚಿತ
ವಾಗಿ ಕಲ್ಪಿಸಲಾಗುವುದು’ ಎಂದು ಸಂಸದ ಸುರೇಶ ಅಂಗಡಿ ತಿಳಿಸಿದರು.

ಅಡುಗೆ ಅನಿಲ ವಿತರಣೆ ಕಂಪೆನಿಗಳಿಂದ ಇಲ್ಲಿನ ಗಾಂಧಿಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಿಲಿಂಡರ್‌ ವಿತರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿ ಅವರು ಮಾತನಾಡಿದರು.

‘ಗೋಕಾಕದಲ್ಲಿ 5438, ಸವದತ್ತಿಯಲ್ಲಿ 3077, ಬೈಲಹೊಂಗಲದಲ್ಲಿ 1225, ಬೆಳಗಾವಿಯಲ್ಲಿ 1880 ಹಾಗೂ ರಾಮದುರ್ಗ ತಾಲ್ಲೂಕಿನಲ್ಲಿ 1332 ಮಂದಿಗೆ ಅಡುಗೆ ಅನಿಲ ಸಂಪರ್ಕ ಇಲ್ಲ ಎನ್ನುವುದು ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ಸಮೀಕ್ಷೆಯಿಂದ ತಿಳಿದು ಬಂದಿದೆ. ಇವರೆಲ್ಲರಿಗೂ ಈಗ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುವುದು. ಮಹಿಳೆಯರ ಆರೋಗ್ಯ ಗಮನದಲ್ಲಿಟ್ಟುಕೊಂಡು ಈ ಯೋಜನೆ ಜಾರಿಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಶ್ರೀಮಂತರೇ ಅಡುಗೆ ಅನಿಲ ಸಿಲಿಂಡರ್‌ಗೆ ಪಡೆಯುವ ಸಹಾಯಧನವನ್ನು ಬಿಟ್ಟುಕೊಡಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು. ಇದಕ್ಕೆ ದೇಶದಾದ್ಯಂತ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಶ್ರೀಮಂತರು ಬಿಟ್ಟುಕೊಟ್ಟ ಸಹಾಯಧನವನ್ನು ಬಡವರಿಗೆ ಸೌಲಭ್ಯ ಕಲ್ಪಿಸಲು ಬಳಸುತ್ತಿದ್ದೇವೆ. ಇದರಿಂದ ಲಕ್ಷಾಂತರ ಮಂದಿ ಉಚಿತವಾಗಿ ಸಿಲಿಂಡರ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ’ ಎಂದರು.

ಕೇಂದ್ರದ ಸೌಲಭ್ಯವಿದು: ‘ಕೇಂದ್ರ ಸರ್ಕಾರವು ₹ 26ಕ್ಕೆ ಖರೀದಿಸಿ ₹ 2ಕ್ಕೆ ನೀಡುವ ಅಕ್ಕಿಯನ್ನು ರಾಜ್ಯ ಸರ್ಕಾರ ಉಚಿತವಾಗಿ ಖರೀದಿಸುತ್ತಿದೆ. ಅಮ್ಮನ ಇಡ್ಲಿ, ಅಪ್ಪನ ಅನ್ನ ಎಂದೆಲ್ಲಾ ಕಾರ್ಯಕ್ರಮ ಮಾಡಲಾಗುತ್ತಿದೆ’ ಎಂದು ಮಾರ್ಮಿಕವಾಗಿ ಹೇಳಿದರು.

ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ‘ಅಡುಗೆ ಅನಿಲ ಸಂಪರ್ಕ ಎನ್ನುವುದು ಶ್ರೀಮಂತರಿಗೆ ಮಾತ್ರ ಎನ್ನುವಂತಾಗಿತ್ತು. ದೂರವಾಣಿ, ಅಡುಗೆ ಅನಿಲ ಸಂಪರ್ಕ ಕೊಡಿಸಿ ಎಂದು ಜನ ಬರುತ್ತಿದ್ದರು. ಇಂದು ಬಡವರಿಗೂ ಅಡುಗೆ ಅನಿಲ ಸಿಲಿಂಡರ್‌ ದೊರೆಯುತ್ತಿದೆ ಎಂದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ’ ಎಂದು ವಿವರಿಸಿದರು.

‘ವಿದೇಶದಲ್ಲಿದ್ದರೂ ಮೋದಿ ಅವರ ವಿಚಾರ, ಮನಸ್ಸು ಹಾಗೂ ಮನಸ್ಥಿತಿ ನಮ್ಮ ದೇಶದ ಕಟ್ಟಕಡೆಯ ವ್ಯಕ್ತಿಯ ಕಡೆಗೇ ಇದೆ. ಇದಕ್ಕೆ ಅವರು ಜಾರಿಗೊಳಿಸಿರುವ ಯೋಜನೆಗಳೇ ಸಾಕ್ಷಿ’ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಪ್ರತಿಪಾದಿಸಿದರು. ಎಂಇಎಸ್‌ ಬೆಂಬಲಿತ ಶಾಸಕ ಸಂಭಾಜಿ ಪಾಟೀಲ ಮಾತನಾಡಿ, ‘ಸುರೇಶ ಅಂಗಡಿ ಅವರಂಥ ಜನಾನುರಾಗಿ ಸಂಸದರು ಕೇಂದ್ರ ಸಚಿವರಾಗಬೇಕು’ ಎಂದು ಆಶಿಸಿದರು.

ಎಲ್ಲರಿಗೂ ಅನ್ವಯಿಸಿ:  ‘2011ರ ಸಮೀಕ್ಷೆಯ ಬದಲಿಗೆ ಎಲ್ಲ ಬಡವರಿಗೂ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ವಿಧಾನಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಸಲಹೆ ನೀಡಿದರು. ಜಿ.ಪಂ. ಸದಸ್ಯ ರಮೇಶ ದೇಶಪಾಂಡೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ಮಾಜಿ ಅಧ್ಯಕ್ಷ ಅನಿಲ ಬೆನಕೆ, ಮುಖಂಡರಾದ ಮನೋಹರ ಕಡೋಲ್ಕರ್‌, ಗೂಳಪ್ಪ ಹೊಸಮನಿ, ರಾಜು ಚಿಕ್ಕನಗೌಡರ ಭಾಗವಹಿಸಿದ್ದರು.

ಸಾಂಕೇತಿಕವಾಗಿ 200 ಮಂದಿಗೆ ಅಡುಗೆ ಅನಿಲ ಸಂಪರ್ಕದ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ  ಇತರ ಪಕ್ಷದ ಜನಪ್ರತಿನಿಧಿಗಳಾಗಲಿ ಕಂಡುಬರಲಿಲ್ಲ. ಬಿಜೆಪಿ ಮುಖಂಡರಷ್ಟೇ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.