ADVERTISEMENT

ಪ್ರತ್ಯೇಕ ಜಿಲ್ಲೆ: ಸರ್ಕಾರದ ಬಳಿಗೆ ನಿಯೋಗ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 9:33 IST
Last Updated 21 ಫೆಬ್ರುವರಿ 2018, 9:33 IST

ಚಿಕ್ಕೋಡಿ: ‘ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ ಎರಡನ್ನೂ ಹೊಸ ಜಿಲ್ಲೆಗಳನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಜಿಲ್ಲೆಯ ಸರ್ವಪಕ್ಷ ಮುಖಂಡರ ನಿಯೋಗದೊಂದಿಗೆ ಮುಖ್ಯಮಂತ್ರಿ ಭೇಟಿಯಾಗಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು’ ಎಂದು ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಚಿಕ್ಕೋಡಿ ಜಿಲ್ಲೆ ರಚನೆಗೆ ಆಗ್ರಹಿಸಿ ಇಲ್ಲಿನ ಮಿನಿ ವಿಧಾನಸೌಧದ ಎದುರು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

‘ಕಳೆದ 15 ವರ್ಷಗಳ ಹಿಂದೆ ಜೆ.ಎಚ್‌.ಪಟೇಲರು ಚಿಕ್ಕೋಡಿ ಮತ್ತು ಗೋಕಾಕ ಎರಡನ್ನೂ ಜಿಲ್ಲೆಗಳನ್ನಾಗಿ ಘೋಷಿಸಿ ಗೆಜೆಟ್‌ ಹೊರಡಿಸಿದ್ದರು. ಆದರೆ, ಕೆಲ ರಾಜಕಾರಣಿಗಳು ಚಿಕ್ಕ ಜಿಲ್ಲೆಗಳಿಗೆ ಯಾಕೆ ಮಂತ್ರಿಯಾಗಬೇಕು ಎಂದು ಅಖಂಡ ಬೆಳಗಾವಿ ಜಿಲ್ಲೆ ಉಳಿಸಿಕೊಂಡರು. ಅವರು ನಿಮ್ಮ ಊರಲ್ಲೇ ಇದ್ದಾರೆ’ ಎಂದರು.

ADVERTISEMENT

‘ವಿಶಾಲವಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಇನ್ನೂ ಎರಡು ಜಿಲ್ಲೆಗಳನ್ನು ಹೊಸದಾಗಿ ರಚಿಸಿದರೆ ಗ್ರಾಮೀಣ ಭಾಗದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಆಡಳಿತ ಯಂತ್ರ ಚುರುಕುಗೊಳ್ಳುತ್ತದೆ. ಹೊಸ ಜಿಲ್ಲೆಗಳ ರಚನೆಗೆ ನಮ್ಮ ಸಹಮತವೂ ಇದೆ. ನಿಮ್ಮ ಬೇಡಿಕೆ ಬಗ್ಗೆ ಬಜೆಟ್‌ ಅಧಿವೇಶನದ ಅಂತ್ಯದ ಒಳಗಾಗಿಯೇ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುತ್ತೇನೆ. ಅಲ್ಲದೇ, ಆದಷ್ಟು ಬೇಗ ಸರ್ವಪಕ್ಷ ನಿಯೋಗದೊಂದಿಗೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು’ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.

ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್.ಸಂಗಪ್ಪಗೋಳ ಮಾತನಾಡಿ, ‘ಕಳೆದೆರೆಡು ದಿನಗಳ ಹಿಂದೆ ಗೃಹ ಸಚಿವ ರಾಮಲಿಂಗಾರೆಡ್ಡಿ, ಎಚ್‌.ಎಂ.ರೇವಣ್ಣ ಚಿಕ್ಕೋಡಿಗೆ ಭೇಟಿ ನೀಡಿದ್ದರು. ಆದರೆ, ಸಂಸದ ಪ್ರಕಾಶ ಹುಕ್ಕೇರಿ ಅವರು ಸಚಿವರನ್ನು ಧರಣಿ ಸ್ಥಳಕ್ಕೆ ಕರೆತರಲಿಲ್ಲ. ಇದರಿಂದಾಗಿ ಚಿಕ್ಕೋಡಿ ಜಿಲ್ಲೆ ಘೋಷಣೆಗೆ ಅವರ ಸಹಮತವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಜಿಲ್ಲೆ ರಚನೆಗೆ ನೀವೇ ಮುಂದಾಳತ್ವ ವಹಿಸಬೇಕು’ ಎಂದು ಸತೀಶ ಜಾರಕಿಹೊಳಿ ಅವರಲ್ಲಿ ಮನವಿ ಮಾಡಿಕೊಂಡರು.

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಸುಭ್ರಾವ್ ಎಂಟೆತ್ತಿನವರ, ಸಾಹಿತಿ ಪ್ರೊ.ಎಸ್‌.ವೈ.ಹಂಜಿ ಮಾತನಾಡಿದರು. ಮಾಜಿ ಶಾಸಕ ದತ್ತು ಹಕ್ಯಾಗೋಳ, ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಬಾಳಾಸಾಹೇಬ್‌ ಸಂಗ್ರೋಳೆ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಮಹಾವೀರ ಮೋಹಿತೆ, ರಮೇಶ್‌ ಸಿಂದಗಿ, ಲಕ್ಷ್ಮಣ ಪೂಜಾರಿ, ತ್ಯಾಗರಾಜ್ ಕದಂ, ಸಂಜು ಬಡಿಗೇರ್, ಪ್ರಶಾಂತ ಮಾಳಗೆ, ಪ್ರಶಾಂತ ಹುಕ್ಕೇರಿ, ಎಂ.ಎ.ಪಾಟೀಲ, ಸುರೇಶ ಬ್ಯಾಕುಡೆ, ತುಕಾರಾಮ ಕೋಳಿ, ಚಂದ್ರಕಾಂತ ಹುಕ್ಕೇರಿ, ಅಪ್ಪಾಸಾಹೇಬ್ ಚೌಗಲಾ, ರಾಘವೇಂದ್ರ ಲಂಬುಗೋಳ ಸೇರಿದಂತೆ ನೂರಾರು ಜನ ಧರಣಿಯಲ್ಲಿ ಪಾಲ್ಗೊಂಡಿದ್ದರು. 10 ಜನ ಕಾರ್ಯಕರ್ತರು ಸರದಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಎಬಿವಿಪಿ ಬೆಂಬಲ: ಚಿಕ್ಕೋಡಿ ಪಟ್ಟಣದ ವಿವಿಧ ಶಾಲೆ–ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಧರಣಿ ಸ್ಥಳಕ್ಕೆ ಆಗಮಿಸಿ ಚಿಕ್ಕೋಡಿ ಜಿಲ್ಲೆ ರಚನೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಸರ್ಕಾರ ಚಿಕ್ಕೋಡಿ ಜಿಲ್ಲೆ ಘೋಷಣೆಗೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಮಕನಮರಡಿ ಕ್ಷೇತ್ರದಿಂದ ಪಕ್ಷೇತರರಾಗಿ ಲಖನ್ ಜಾರಕಿಹೊಳಿ ಸ್ಪರ್ಧಿಸುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸತೀಶ ಜಾರಕಿಹೊಳಿ,‘ ಲಖನ್ ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸಿದರೆ ಮಾತ್ರ ಚುನಾವಣೆ ರಾಜಕೀಯಕ್ಕೆ ಕಳೆ ಬರುತ್ತದೆ. ನೀವೇ (ಮಾಧ್ಯಮದವರು) ಯಮಕನಮರಡಿ ಕ್ಷೇತ್ರದಲ್ಲಿ ಈಗಿನಿಂದಲೇ ಪ್ರಚಾರ ಕೈಗೊಳ್ಳುವಂತೆ ಲಖನ್‌ಗೆ ತಿಳಿಸಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.