ADVERTISEMENT

‘6 ತಿಂಗಳು ಆತ್ಮಹತ್ಯೆ ಮುಂದೂಡಿ’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 6:00 IST
Last Updated 15 ನವೆಂಬರ್ 2017, 6:00 IST
ಬೆಳಗಾವಿಯಲ್ಲಿ ಮಂಗಳವಾರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಜೆಡಿಎಸ್‌ ಸೇರ್ಪಡೆಯಾದರು. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ, ನಡಹಳ್ಳಿ ಪತ್ನಿ ಮಹಾದೇವಿ, ಬಸವರಾಜ ಹೊರಟ್ಟಿ, ಬಾಬಾಗೌಡ ಪಾಟೀಲ ಉಪಸ್ಥಿತರಿದ್ದರು
ಬೆಳಗಾವಿಯಲ್ಲಿ ಮಂಗಳವಾರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಜೆಡಿಎಸ್‌ ಸೇರ್ಪಡೆಯಾದರು. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ, ನಡಹಳ್ಳಿ ಪತ್ನಿ ಮಹಾದೇವಿ, ಬಸವರಾಜ ಹೊರಟ್ಟಿ, ಬಾಬಾಗೌಡ ಪಾಟೀಲ ಉಪಸ್ಥಿತರಿದ್ದರು   

ಬೆಳಗಾವಿ: ‘ರೈತರೇ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನು ಆರು ತಿಂಗಳ ಕಾಲ ಮುಂದೂಡಿ....’ ಹೀಗೊಂದು ಮನವಿ ಮಾಡಿದ್ದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ. ನಗರದಲ್ಲಿ ಮಂಗಳವಾರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಮ್ಮ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರಾಷ್ಟ್ರೀಕೃತ ಬ್ಯಾಂಕ್‌ ಸೇರಿದಂತೆ ಎಲ್ಲ ಹಣಕಾಸು ಸಂಸ್ಥೆಗಳಲ್ಲಿನ ಸಾಲ ಮನ್ನಾ ಮಾಡಲಾಗುವುದು. ರೈತರು, ಮುಂದೆಂದೂ ಸಾಲಗಾರರಾಗದಂತೆ ಯೋಜನೆಗಳನ್ನು ರೂಪಿಸಲಾಗುವುದು. ಹೀಗಾಗಿ ಆತ್ಮಹತ್ಯೆಯನ್ನು ಮುಂದೂಡಬೇಕು’ ಎಂದರು.

‘ಕಡಿಮೆ ‍ನೀರಿನಲ್ಲಿ ಯಾವ ರೀತಿ ಕೃಷಿ ಮಾಡಬಹುದೆನ್ನುವ ತಂತ್ರಜ್ಞಾನವನ್ನು ಇಸ್ರೇಲ್‌ನಲ್ಲಿ ನೋಡಿ ಬಂದಿದ್ದೇನೆ. ಆ ತಂತ್ರಜ್ಞಾನವನ್ನು ಇಲ್ಲಿ ಜಾರಿಗೊಳಿಸುತ್ತೇನೆ. ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬೇಕು ಎನ್ನುವ ಬಗ್ಗೆ ನೀತಿ ರೂಪಿಸುತ್ತೇನೆ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗದಿಪಡಿಸುತ್ತೇನೆ. ಇವಿಷ್ಟು ಜಾರಿಯಾದರೆ ರೈತರು ಮತ್ತೆಂದೂ ಸಾಲಗಾರರು ಆಗುವುದಿಲ್ಲ’ ಎಂದರು.

ADVERTISEMENT

ನೇರ ನಗದು: ಗರ್ಭಿಣಿ ಮಹಿಳೆಯರಿಗೆ ಆಹಾರ ನೀಡುವ ಮಾತೃಪೂರ್ಣ ಯೋಜನೆಯನ್ನು ಬದಲಾಯಿಸಿ, ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ನಗದು ವರ್ಗಾಯಿಸುವ ಯೋಜನೆ ರೂಪಿಸಲಾಗುವುದು. ಗರ್ಭಿಣಿ ಮಹಿಳೆಯರಿಗೆ 6 ತಿಂಗಳ ನಂತರ ಮಾಸಿಕ ₹6 ಸಾವಿರ ನಗದು ನೀಡಲಾಗುವುದು ಎಂದು ಪ್ರಕಟಿಸಿದರು.

70 ವರ್ಷ ಮೀರಿದ ವೃದ್ಧರಿಗೆ ಮಾಸಿಕ ₹5 ಸಾವಿರ ಗೌರವ ಧನ ನೀಡಲಾಗುವುದು. ಸಾಮಾಜಿಕ ಅರಣ್ಯ ಇಲಾಖೆಗೆ ನೀಡುವ ಅನುದಾನವನ್ನು ಗ್ರಾಮೀಣ ಜನರಿಗೇ ಕೊಟ್ಟು, ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದರಿಂದ ಸ್ಥಳೀಯರಿಗೆ ಉದ್ಯೋಗ ನೀಡಿದಂತಾಗಲಿದೆ’ ಎಂದರು.

* * 

ಸುವರ್ಣ ವಿಧಾನಸೌಧ ನಿರ್ಮಾಣದ ಉದ್ದೇಶ ಈಡೇರುತ್ತಿಲ್ಲ. ಹೀಗಾಗಿ ಈ ಭಾಗದ ಜನರ ಕ್ಷಮೆ ಕೋರುತ್ತೇನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ವಾರದಲ್ಲಿ ಎರಡು ದಿನ ಸುವರ್ಣ ಸೌಧದಿಂದಲೇ ಆಡಳಿತ ನಡೆಸುತ್ತೇವೆ
ಎಚ್‌.ಡಿ.ಕುಮಾರಸ್ವಾಮಿ
ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.