ADVERTISEMENT

ಅಂತಿಮಗೊಳ್ಳದ ನಿಯಮ: ತಪ್ಪದ ಕಿರುಕುಳ

ಜಾರಿಗೆ ಬಂದೂ ಬಾರದಂತಿರುವ ‘ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣಾ ಕಾಯ್ದೆ’

ಶಶಿಕಾಂತ್ ಎಸ್. ಶೆಂಬೆಳ್ಳಿ
Published 7 ಅಕ್ಟೋಬರ್ 2015, 19:41 IST
Last Updated 7 ಅಕ್ಟೋಬರ್ 2015, 19:41 IST

ಬೆಂಗಳೂರು: ‘ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣಾ ಕಾಯ್ದೆ’ ಜಾರಿಗೆ ಬಂದು ಹದಿನೇಳು ತಿಂಗಳಾದರೂ ಇಲ್ಲಿಯವರೆಗೆ ಅದಕ್ಕೆ ಸಂಬಂಧಿಸಿದ ನಿಯಮಗಳೇ ಅಂತಿಮಗೊಂಡಿಲ್ಲ. ಇದರಿಂದ ವ್ಯಾಪಾರಿಗಳಿಗೆ ಇನ್ನೂ ಪರವಾನಗಿ ಪತ್ರ   ಸೇರಿದಂತೆ ಯಾವುದೇ ಸೌಲಭ್ಯಗಳು ಸಿಕ್ಕಿಲ್ಲ.

ಬೀದಿ ಬದಿ ವ್ಯಾಪಾರಿಗಳ ಹಿತ ಕಾಯುವ ಉದ್ದೇಶದಿಂದ ಈ ಹಿಂದಿನ ಕಾಂಗ್ರೆಸ್‌ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರ 2014ರ ಮೇ ತಿಂಗಳಲ್ಲಿ ಕಾಯ್ದೆ ಜಾರಿಗೆ ತಂದಿತ್ತು.

ಬೀದಿ ಬದಿ ವ್ಯಾಪಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ  ಸಮಿತಿಯ ಸದಸ್ಯರು ಪರಸ್ಪರ ಚರ್ಚಿಸಿ ನಿಯಮಗಳನ್ನು ರಚಿಸಬೇಕೆಂದು ಕಾಯ್ದೆ ಹೇಳುತ್ತದೆ. ಆದರೆ ಈ ನಿಟ್ಟಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಪ್ರಗತಿಯಾಗಿಲ್ಲ.

ನಿಯಮ, ಯೋಜನೆಯ ಮಾದರಿ ಹಾಗೂ ಉಪನಿಯಮಗಳು ಅಂತಿಮಗೊಳ್ಳದ ಹೊರತು ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಕಾರ್ಯ, ವ್ಯಾಪಾರಿಗಳ ಸಮಿತಿ ರಚನೆ, ಪರವಾನಗಿ ಪತ್ರ, ಗುರುತಿನ ಚೀಟಿ ಹಂಚಿಕೆ ಸೇರಿದಂತೆ ಏನೂ ಮಾಡುವಂತಿಲ್ಲ. ಪೌರಾಡಳಿತ ನಿರ್ದೇಶನಾಲಯವು (ಡಿಎಂಎ) ನಿಯಮ ರಚಿಸುವ ಸಂಬಂಧ ಇಲ್ಲಿಯವರೆಗೆ 4–5 ಸಭೆಗಳನ್ನು ನಡೆಸಿದೆ. ಆದರೆ ಯಾವುದೇ ಒಮ್ಮತಕ್ಕೆ ಬರಲು ಅದಕ್ಕೆ ಸಾಧ್ಯವಾಗಿಲ್ಲ.

ಇದರಿಂದ ಕಾಯ್ದೆ ಜಾರಿಗೆ ಬಂದರೂ ಬೀದಿ ವ್ಯಾಪಾರಿಗಳಿಗೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಈಗಲೂ ಅವರು ತೊಂದರೆ ಅನುಭವಿಸುತ್ತಿದ್ದಾರೆ. ಸಂಚಾರ ಪೊಲೀಸರು, ಕರ ವಸೂಲಿಗಾರರಿಂದ ಬೀದಿ ವ್ಯಾಪಾರಿಗಳು ನಿತ್ಯ ಅನುಭವಿಸುತ್ತಿದ್ದ ತೊಂದರೆ ತಪ್ಪಿಸುವುದೇ ಕಾಯ್ದೆಯ ಮುಖ್ಯ  ಉದ್ದೇಶವಾಗಿದೆ. ಆದರೆ ಕಾಯ್ದೆ ಅನುಷ್ಠಾನಕ್ಕೆ ಬಾರದ ಕಾರಣ ಅವರ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ.

ಬೃಹತ್‌ ಬೆಂಗಳೂರು ಬೀದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ವಿರೋಧದ ಮಧ್ಯೆ ಪೌರಾಡಳಿತ ನಿರ್ದೇಶನಾಲಯವು (ಡಿಎಂಎ) ಇತ್ತೀಚೆಗೆ ನಿಯಮದ ಕರಡನ್ನು  ಕಾನೂನು ಇಲಾಖೆಗೆ ಕಳುಹಿಸಿಕೊಟ್ಟಿತ್ತು. ಕೆಲ ಮಾರ್ಪಾಡುಗಳನ್ನು ಮಾಡುವಂತೆ ಕಾನೂನು ಇಲಾಖೆ ಡಿಎಂಎಗೆ ಕಳುಹಿ ಸಿತ್ತು. ಡಿಎಂಎ ಸಣ್ಣ ಬದಲಾವಣೆಗಳೊಂದಿಗೆ ಅದನ್ನು ಕಾನೂನು ಇಲಾಖೆ ಹಾಗೂ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಒಂದೂವರೆ ಲಕ್ಷ ಬೀದಿ ವ್ಯಾಪಾರಿಗಳು ಇದ್ದಾರೆ. ಅವರು ನಿತ್ಯ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಡಿಎಂಎ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ’ ಎಂದು ಬೃಹತ್‌ ಬೆಂಗಳೂರು ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಿನಯ್‌ ಕೆ. ಶ್ರೀನಿವಾಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೆಕ್ಷನ್‌ 3(3)ರ ಪ್ರಕಾರ, ನಿಯಮ ಆಗುವವರೆಗೆ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವಂತಿಲ್ಲ. ಆದರೆ ಕಾನೂನಿನ ಬಗ್ಗೆ ತಿಳಿವಳಿಕೆ ಇಲ್ಲದ ಕಾರಣ ಪೊಲೀಸರು, ಬಿಬಿಎಂಪಿಯವರು ವ್ಯಾಪಾರಿಗಳಿಗೆ ತೊಂದರೆ ಕೊಡುತ್ತಿದ್ದಾರೆ’ ಎಂದೂ ಆರೋಪಿಸಿದರು. ‘ಎಂ.ಎನ್‌.ರೆಡ್ಡಿ ಅವರು ಬೆಂಗಳೂರು ಪೊಲೀಸ್‌ ಕಮಿಷನರ್‌ ಆಗಿದ್ದಾಗ  ಸುತ್ತೋಲೆ ಹೊರಡಿಸಿದ್ದರು. ಆದರೆ ಅದು ಇನ್ನೂ ಡಿಸಿಪಿ ಮಟ್ಟದಲ್ಲೆ ಇದೆ. ಎಲ್ಲ ಠಾಣೆಗಳಿಗೂ ತಲುಪಿಲ್ಲ. ಇದರಿಂದಾಗಿ ನಗರದ ಅನೇಕ ಕಡೆ ಪೊಲೀಸರು ಬೀದಿ ವ್ಯಾಪಾರಿಗಳನ್ನು ಈಗಲೂ ತೆರವುಗೊಳಿಸುತ್ತಿದ್ದಾರೆ’ ಎಂದರು.

‘2014ರ ಸೆಪ್ಟೆಂಬರ್‌ನಲ್ಲಿ ಪೌರಾಡಳಿತ ನಿರ್ದೇಶನಾಲಯವು ಸಭೆ ಕರೆದಿತ್ತು. ರಾಜ್ಯದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಸಮಸ್ಯೆಗಳನ್ನು ವ್ಯಾಪಾರಿಗಳು ಎದುರಿಸುತ್ತಿದ್ದಾರೆ. ಅವರೆಲ್ಲರ ಸಲಹೆ ಪಡೆಯಬೇಕು ಎಂದು ಹೇಳಿದರೆ ಅದನ್ನು ತಲೆಗೆ ಹಾಕಿಕೊಂಡಿಲ್ಲ’ ಎಂದು ಆರೋಪಿಸಿದರು.

‘ಸಚಿವ ರಾಮಲಿಂಗಾರೆಡ್ಡಿ ಅವರು ಇತ್ತೀಚೆಗೆ  ಸಭೆ ಕರೆದು ವ್ಯಾಪಾರಿಗಳ ಸಮೀಕ್ಷೆ ಕಾರ್ಯ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಕೆಲಸ ಆಗಿಲ್ಲ’ ಎನ್ನುತ್ತಾರೆ ಶಿವಾಜಿನಗರ ಬೀದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಸೈಯದ್‌ ಜಮೀರ್‌.

‘ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸಂಬಂಧಿಸಿ ಇತ್ತೀಚೆಗೆ ಪ್ರತಿಭಟನೆ ನಡೆಸಿದಾಗ ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು.  ಆದರೆ ಈಗಲೂ ನಗರದ ಅನೇಕ ಕಡೆ ವ್ಯಾಪಾರಿಗಳಿಗೆ ಪೊಲೀಸರು ಹಾಗೂ ಪಾಲಿಕೆಯವರು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ’ ಎಂದು ವಿಜಯನಗರ ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಅಧ್ಯಕ್ಷ ಎಸ್‌. ಬಾಬು ಆರೋಪಿಸಿದರು.

‘ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿಯಮ ರಚನೆ ಸೇರಿದಂತೆ ಇತರ ಕಾರ್ಯ ವಿಳಂಬವಾಗುತ್ತಿದೆ. ಕಾಯ್ದೆ ಇದ್ದರೂ ಬೀದಿ ವ್ಯಾಪಾರಿಗಳ ಬವಣೆ ತಪ್ಪಿಲ್ಲ’ ಎಂದು ಗಾಂಧಿನಗರ ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು.

*
ಬೀದಿ ಬದಿ ವ್ಯಾಪಾರಿಗಳಿಗೆ ಸಂಬಂಧಿಸಿದ ಕಾಯ್ದೆ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಸಂಬಂಧ ಇಲ್ಲಿಯವರೆಗೆ ಯಾರೊಬ್ಬರೂ ನನ್ನನ್ನು ಸಂಪರ್ಕಿಸಿಲ್ಲ.
–ಎನ್‌.ಎಸ್‌. ಮೇಘರಿಕ್‌,
ಬೆಂಗಳೂರು ಪೊಲೀಸ್‌ ಕಮಿಷನರ್‌

*
ದೆಹಲಿಯಲ್ಲಿ ಈಗಾಗಲೇ ನಿಯಮ ರಚಿಸಲಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ಈ ನಿಟ್ಟಿನಲ್ಲಿ ಯಾವುದೇ ಕೆಲಸ ಆಗಿಲ್ಲ.
–ವಿನಯ್‌ ಕೆ. ಶ್ರೀನಿವಾಸ್‌,
ಬೃಹತ್‌ ಬೆಂಗಳೂರು ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ

*
ಕಾನೂನು ಇಲಾಖೆಯ ನಿರ್ದೇಶನದ ಮೇರೆಗೆ ಕರಡಿನಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಅದರ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇವೆ.
–ಸುಪ್ರಸನ್ನ,
ಹಂಗಾಮಿ ಜಂಟಿ ನಿರ್ದೇಶಕ, ಪೌರಾಡಳಿತ ನಿರ್ದೇಶನಾಲಯ

*
ಬೀದಿ ಬದಿ ವ್ಯಾಪಾರಿಗಳಿಗೆ ಎಲ್ಲಿ ಜಾಗ ಕೊಡಬೇಕು ಎನ್ನುವುದಕ್ಕೆ ಸಂಬಂಧಿಸಿ ಸಮಿತಿ ರಚಿಸಲಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ಗೆ ಮಾಹಿತಿಯೂ ನೀಡಲಾಗಿದೆ.
–ಬಿಬಿಎಂಪಿ ಕಾನೂನು ಕೋಶದ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.