ADVERTISEMENT

ಅತ್ಯಾಚಾರಕ್ಕೆ ಯತ್ನ: ಆರೋಪಿ ಬಂಧನ

ಸಾಲ ಕೊಡಿಸುವ ಸೋಗಿನಲ್ಲಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 20:20 IST
Last Updated 30 ಜುಲೈ 2014, 20:20 IST

ಬೆಂಗಳೂರು: ಸಿದ್ಧ ಉಡುಪು ಕಾರ್ಖಾನೆ ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾ­ರಕ್ಕೆ ಯತ್ನಿಸಿದ ಆರೋಪದಡಿ ವಿಶ್ವೇಶ್ವ­ರಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯ (ವಿಐಟಿಸಿ) ಸೂಪರಿಂಟೆಂಡೆಂಟ್ ಲಕ್ಕಪ್ಪ­ನಾ­ಯಕ್ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಲಗ್ಗೆರೆ ಸಮೀಪದ ಚೌಡೇಶ್ವರಿನಗರದ ಮಹಿಳೆ ದೂರು ಕೊಟ್ಟಿದ್ದರು. ‘ಗೆಳತಿಯ ಮುಖಾಂತರ ಲಕ್ಕಪ್ಪನಾಯಕ್‌ ಅವರ ಪರಿಚಯವಾ­ಗಿತ್ತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ನನಗೆ, ಸಾಲ ಕೊಡಿಸುವುದಾಗಿ ಅವರು ನಂಬಿಸಿದ್ದರು. ಬುಧವಾರ ಗೆಳತಿ ಮನೆಗೆ ಬಂದ ಅವರು, ನನ್ನ ಜತೆ ಅನುಚಿತವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದರು’ ಎಂದು ಅವರು ಆರೋಪಿಸಿದ್ದಾರೆ.

‘ದೂರು ನೀಡಿದ ಮಹಿಳೆಗೆ ಪ್ರತಿದಿನ ಕರೆ ಮಾಡುತ್ತಿದ್ದ ಆರೋಪಿ, ಅಶ್ಲೀಲ­ವಾಗಿ ಮಾತನಾಡುತ್ತಿದ್ದ. ಅಲ್ಲದೆ, ಏಕಾಂಗಿ­ಯಾಗಿ ಭೇಟಿಯಾಗುವಂತೆ ಒತ್ತಾ­ಯಿಸುತ್ತಿದ್ದ. ಆತನ ಸಂಚಿನ ಬಗ್ಗೆ ಅರಿತ ಮಹಿಳೆ, ಆರೋಪಿಯನ್ನು ಸಾಕ್ಷ್ಯ ಸಮೇತ ಪೊಲೀಸರಿಗೆ ಹಿಡಿದು ಕೊಡಲು ನಿರ್ಧರಿಸಿದ್ದಳು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಎಂದಿನಂತೆ ಬುಧವಾರ ಬೆಳಿಗ್ಗೆಯೂ ಮಹಿಳೆಗೆ ಕರೆ ಮಾಡಿದ್ದ. ಆಗ ಗೆಳತಿ ಮನೆಗೆ ಬರುವಂತೆ ತಿಳಿಸಿದ ದೂರುದಾರರು, ಆತನ ವರ್ತನೆ­ಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಯೋಜನೆ ರೂಪಿಸಿದ್ದರು.  ಮಧ್ಯಾಹ್ನ 3 ಗಂಟೆಗೆ ಆತ ಮನೆಗೆ ಬರುತ್ತಿದ್ದಂತೆಯೇ ದೂರುದಾರರ ಗೆಳತಿ ಅಂಗಡಿಗೆ ಹೋಗಿ ಬರುವುದಾಗಿ ಹೊರಟರು. ಮನೆ­ಯಲ್ಲಿ ಒಬ್ಬರೇ ಇದ್ದ ಮಹಿಳೆ ಜತೆ ಆರೋಪಿ ಅನುಚಿತವಾಗಿ ವರ್ತಿ­ಸಲು ಆರಂಭಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇತ್ತ ಅಂಗಡಿಗೆ ಹೋಗುವುದಾಗಿ ಹೇಳಿದ್ದ ಗೆಳತಿ, ಕಿಟಕಿ ಮೂಲಕ ಮನೆ­ಯೊಳಗಿನ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಆರೋಪಿ ಅತ್ಯಾ­ಚಾ­ರಕ್ಕೆ ಯತ್ನಿಸುವಾಗ ಮಹಿಳೆ ಚೀರಿದ್ದರಿಂದ ಆತ ಹೊರಟಿ­ದ್ದಾನೆ. ನಂತರ ಆ ಮಹಿಳೆ, ಗೆಳತಿ ಜತೆ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ಅಲ್ಲದೇ, ಮೊಬೈಲ್‌ನಲ್ಲಿ ಚಿತ್ರೀಕರಿಸಿ­ಕೊಂಡಿರುವ ದೃಶ್ಯಗಳನ್ನೂ ವಶಕ್ಕೆ ಒಪ್ಪಿಸಿದ್ದಾರೆ. ಹೀಗಾಗಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ  ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.