ADVERTISEMENT

ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ

ಮಂಡೂರಿಗೆ ತ್ಯಾಜ್ಯ ವಿಲೇವಾರಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2014, 19:30 IST
Last Updated 22 ನವೆಂಬರ್ 2014, 19:30 IST
ಸಿ.ಎಂ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿ, ತ್ಯಾಜ್ಯ ವಿಲೇವಾರಿ ಕುರಿತು ಚರ್ಚೆ ನಡೆಸಿ­ದರು. ಮೇಯರ್‌ ಶಾಂತಕುಮಾರಿ, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು, ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮಿನಾರಾಯಣ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು
ಸಿ.ಎಂ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿ, ತ್ಯಾಜ್ಯ ವಿಲೇವಾರಿ ಕುರಿತು ಚರ್ಚೆ ನಡೆಸಿ­ದರು. ಮೇಯರ್‌ ಶಾಂತಕುಮಾರಿ, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು, ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮಿನಾರಾಯಣ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು   

ಬೆಂಗಳೂರು: ನಗರದ ತ್ಯಾಜ್ಯವನ್ನು ಮಂಡೂರಿಗೆ ಹಾಕುವುದನ್ನು ಸ್ಥಗಿತ­ಗೊಳಿಸಿದ ನಂತರದ ಬೆಳವಣಿಗೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳೀಯ ಜನಪ್ರತಿನಿಧಿಗಳು,  ಬಿಬಿಪಿಎಂ ಮೇಯರ್‌, ಅಧಿಕಾರಿ­ಗಳೊಂದಿಗೆ ಶನಿವಾರ ಚರ್ಚೆ ನಡೆಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮಂಡೂರಿನಲ್ಲಿ ಕಸ ಹಾಕುವುದನ್ನು ನಿಲ್ಲಿಸಿದ ಬಳಿಕ ತ್ಯಾಜ್ಯ ವಿಲೇವಾರಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಅವರು,  ಮುಂದೆ ಯಾವುದೇ ಕಾರಣಕ್ಕೂ ಸಮಸ್ಯೆ­ಯಾಗದಂತೆ ನೋಡಿ­ಕೊಳ್ಳು­ವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತ­ನಾಡಿದ ಸಿದ್ದರಾಮಯ್ಯ, ‘ಮಂಡೂರು ಜನರಿಗೆ ಕೊಟ್ಟ ಮಾತಿನಂತೆ ನಾವು ನಡೆದುಕೊಂಡಿ­ದ್ದೇವೆ. ಬಿಜೆಪಿಯವರು ಬೆಂಗಳೂರನ್ನು ಗೊಬ್ಬರ ಮಾಡಿದ್ದರು. ನಾವು ಅದನ್ನು ಸರಿ ಮಾಡುತ್ತಿದ್ದೇವೆ. ಮುಂದಿನ ಆರು ತಿಂಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಯಲಿದೆ’ ಎಂದರು.

‘ನೆಲಸಮಗೊಳಿಸಿದ ಕಟ್ಟಡಗಳ ಅವಶೇಷಗಳನ್ನು ಕಲ್ಲು ಕ್ವಾರಿಗಳಿಗೆ ತುಂಬಲು ಕ್ರಮ ಕೈಗೊಳ್ಳಲಾಗಿದೆ. ಹೋಟೆಲ್‌ ಮತ್ತು ಮಾಲ್‌ಗಳಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯದ ಸಂಸ್ಕರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ತ್ಯಾಜ್ಯ ಸಂಗ್ರಹ ಪ್ರಮಾಣ 3 ಸಾವರಿ ಟನ್‌ಗೆ ಇಳಿದಿದೆ’ ಎಂದು ಅವರು ಹೇಳಿದರು.

ಮಾಗಡಿ ತಾಲ್ಲೂಕಿನ ಗೋರೂರು ಬಳಿ ಸಾವಿರ ಟನ್‌ ಸಾಮರ್ಥ್ಯದ ಕಸ ಸಂಸ್ಕರಣಾ ಘಟಕ ಸ್ಥಾಪಿಸಲು ‘ಎಸ್‌ಇಟಿಎಆರ್‌­ಎಎಂ’ ಕಂಪೆನಿ ಮುಂದೆ ಬಂದಿದೆ. ಅತ್ಯಂತ ವೈಜ್ಞಾನಿಕವಾಗಿ ಇಲ್ಲಿ ಕಸ ಸಂಸ್ಕರಣೆಯಾಗಲಿದ್ದು, ಪರಿಸರಕ್ಕೆ ತೊಂದರೆಯಾಗದು. ಆದರೆ, ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ಮಾತುಕತೆ ಮೂಲಕ ಮನ ಒಲಿಸಲಾಗುವುದು ಎಂದರು.

ವರದಿ ನಂತರ ನಿರ್ಧಾರ: ಬಿಬಿಎಂಪಿ ವಿಭಜನೆಯ ಕುರಿತಂತೆ ರಚಿಸಿರುವ ಸಮಿತಿ ವರದಿ ನೀಡಿದ ನಂತರ ಪಾಲಿಕೆ ಚುನಾವಣೆ ಬಗ್ಗೆ ನಿರ್ಧರಿಸಲಾ­ಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ  ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.