ADVERTISEMENT

ಅನಿಲ ಸೋರಿಕೆ: ರಸ್ತೆ ಬದಿಯಲ್ಲಿ ಹೊತ್ತಿ ಉರಿದ ಬೆಂಕಿ

ಗ್ಯಾಸ್‌ ಪೈಪ್‌ ಸೋರಿಕೆಯಿಂದ ಅವಘಡ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 20:07 IST
Last Updated 29 ಏಪ್ರಿಲ್ 2017, 20:07 IST
ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಬೆಂಕಿ
ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಬೆಂಕಿ   

ಬೆಂಗಳೂರು: ಹೊಸೂರು ರಸ್ತೆಯ ಬಂಡೆಪಾಳ್ಯದಲ್ಲಿ ನೆಲದಡಿ ಹಾಕಿದ್ದ ಗ್ಯಾಸ್‌ ಪೈಪ್‌ಲೈನ್‌ನಿಂದ ಶನಿವಾರ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತು. ಇದರಿಂದಾಗಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಮುಖ್ಯರಸ್ತೆಯ ಸಿಗ್ನಲ್‌ ಬಳಿ ಕಳೆದ ತಿಂಗಳು ರಸ್ತೆ ಅಗೆದು 6 ಅಡಿ ಕೆಳಭಾಗದಲ್ಲಿ ಗ್ಯಾಸ್‌ ಪೈಪ್‌ಲೈನ್ ಅಳವಡಿಸಲಾಗಿತ್ತು. ಅದೇ ಸ್ಥಳದಲ್ಲಿ ‘ಜಿ.ಜಿ.ಎಲ್‌ ಗ್ಯಾಸ್‌ ಪೈಪ್‌ಲೈನ್‌’ ಎಂಬ ಬರಹವುಳ್ಳ ನಾಮಫಲಕ ನಿಲ್ಲಿಸಿ, ರಸ್ತೆ ಅಗೆಯದಂತೆ ಎಚ್ಚರಿಕೆ ನೀಡಲಾಗಿದೆ.

‘ನಾಮಫಲಕವಿದ್ದರೂ ಮುಖ್ಯರಸ್ತೆ ಬದಿಯಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಕೆಲ ದಿನಗಳಿಂದ ಜಲಮಂಡಳಿಯ ಗುತ್ತಿಗೆದಾರರು ರಸ್ತೆ ಅಗೆಯಲು ಆರಂಭಿಸಿದ್ದರು. ಈ ವೇಳೆ ಗ್ಯಾಸ್‌ ಪೈಪ್‌ಲೈನ್‌ಗೆ ಹಾನಿಯಾಗಿದ್ದು, ಅದರಿಂದಲೇ ಬೆಂಕಿ ಕಾಣಿಸಿಕೊಂಡಿದೆ’ ಎಂದು ಸ್ಥಳೀಯರು ದೂರಿದರು.

‘ಶನಿವಾರ ಬೆಳಿಗ್ಗೆ ಪುನಃ ರಸ್ತೆ ಅಗೆಯಲು ಜಲಮಂಡಳಿಯ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರು. ಮಧ್ಯಾಹ್ನ ಬಿಸಿಲು ಹೆಚ್ಚಿದ್ದರಿಂದ ತಗ್ಗಿನಿಂದ ಏಕಾಏಕಿ ಬೆಂಕಿ ಬರಲಾರಂಭಿಸಿತು. ಕ್ರಮೇಣ ಅದರ ಕೆನ್ನಾಲಗೆ ಹೆಚ್ಚಾಯಿತು’ ಎಂದು ವಿವರಿಸಿದರು.

ಮನೆಯಿಂದ ಹೊರಬಂದ ನಿವಾಸಿಗಳು: ಬೆಂಕಿ ಹೊತ್ತಿಕೊಂಡ ಸುದ್ದಿ ತಿಳಿದ ನಿವಾಸಿಗಳು, ಮನೆಯಿಂದ ಹೊರಬಂದು ರಸ್ತೆಯ ಮಧ್ಯೆ ಸೇರಿದರು. ರಸ್ತೆಯುದ್ದಕ್ಕೂ ನೆಲದಡಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸಿದ್ದರಿಂದ ಅಲ್ಲೆಲ್ಲ ಬೆಂಕಿ ಹೊತ್ತಿಕೊಳ್ಳಬಹುದು ಎಂಬ ಆತಂಕದಲ್ಲಿ ಅವರಿದ್ದರು.

ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ಹೊಂದಿಕೊಂಡಿದ್ದ ಅಂಗಡಿಗಳ ಬಾಗಿಲು ಬಂದ್‌ ಮಾಡಲಾಯಿತು. ನೀರು ಹಾಕಿದರೆ ಬೆಂಕಿ ಹೆಚ್ಚಾಗಬಹುದು ಎಂದು ಸ್ಥಳೀಯರು ನೀರು ಎರಚಲಿಲ್ಲ.

‘ಮಧ್ಯಾಹ್ನ 2ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಮನೆಯ ಅಡುಗೆ ಅನಿಲ ಸಿಲಿಂಡರ್‌ ಹಾಗೂ ವಿದ್ಯುತ್‌ ಮೀಟರ್‌ ಆಫ್‌ ಮಾಡಿ ಹೊರಗೆ ಬಂದೆವು’ ಎಂದು ಸ್ಥಳೀಯ ನಿವಾಸಿ ಲಕ್ಷ್ಮಮ್ಮ ತಿಳಿಸಿದರು.

ಬೆಂಕಿ ನಂದಿಸಿದ ಪೊಲೀಸರು: ನಂತರ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಿದರು. ‘ಜಲಮಂಡಳಿ ಸಿಬ್ಬಂದಿಯೇ ಸ್ಥಳಕ್ಕೆ ಬಂದು ತಗ್ಗು ಮುಚ್ಚಿದ್ದಾರೆ. ಈಗ ಬೆಂಕಿ ಬರುವುದು ಸಂಪೂರ್ಣ ನಿಂತಿದೆ. ಘಟನೆ ಬಗ್ಗೆ ಗೇಲ್‌ನ ಜಿ.ಜಿ.ಎಲ್‌ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೇವೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವಂತೆ ತಿಳಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಪೈಪ್‌ಲೈನ್‌ಗೆ ಹಾನಿ: ಎಫ್‌ಐಆರ್‌ ದಾಖಲು
ಕೊಳವೆ ಮೂಲಕ ನಗರದ ಮನೆಗಳಿಗೆ ನೈಸರ್ಗಿಕ ಅನಿಲ ಪೂರೈಕೆ ಮಾಡುವ ಉದ್ದೇಶದಿಂದ ಜಿ.ಜಿ.ಎಲ್‌ ಕಂಪೆನಿ ವತಿಯಿಂದ ವಿವಿಧೆಡೆ ನೆಲದಡಿ ಪೈಪ್‌ಲೈನ್ ಅಳವಡಿಸಲಾಗಿದೆ. ಇಂಥ ಜಾಗದಲ್ಲಿ ಖಾಸಗಿ ಮೊಬೈಲ್‌ ಕಂಪೆನಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಪದೇ ಪದೇ ರಸ್ತೆ ಅಗೆಯುತ್ತಿದ್ದಾರೆ. ಇದರಿಂದ ಅನಿಲ ಸೋರಿಕೆಯಾಗುತ್ತಿದೆ. ಬೆಂಕಿ ಹೊತ್ತಿಕೊಳ್ಳುವ ಆತಂಕವೂ ಸ್ಥಳೀಯರನ್ನು ಕಾಡುತ್ತಿದೆ.

‘ಎಚ್‌.ಎಸ್‌.ಆರ್‌ ಬಡಾವಣೆಯ 17ನೇ ಅಡ್ಡರಸ್ತೆಯಿಂದ 19ನೇ ಮುಖ್ಯರಸ್ತೆಯವರೆಗೆ ಪೈಪ್‌ಲೈನ್‌ ಅಳವಡಿಸಲಾಗಿದೆ. ಇದೇ ರಸ್ತೆಯ ಮೈ ಮಾರ್ಟ್‌ ಸ್ಟೋರ್‌ ಎದುರು ಏರ್‌ಟೆಲ್‌ ಕಂಪೆನಿಯ ಗುತ್ತಿಗೆದಾರರು ಏ.12ರಂದು ರಸ್ತೆ ಅಗೆದಿದ್ದಾರೆ.

ADVERTISEMENT

ಈ ವೇಳೆ ಗ್ಯಾಸ್‌ ಪೈಪ್‌ಲೈನ್‌ಗೆ ಹಾನಿಯಾಗಿದೆ’ ಎಂದು ಗೇಲ್‌ ಗ್ಯಾಸ್‌ ಕಂಪೆನಿಯ ಪ್ರತಿನಿಧಿ ಎಂ.ಎಡುಕೊಂಡಲು ದೂರು ಕೊಟ್ಟಿದ್ದರು. ಅದರನ್ವಯ ಎಚ್‌.ಎಸ್‌.ಆರ್‌ ಬಡಾವಣೆ ಠಾಣೆಯಲ್ಲಿ ಎಫ್‌ಐಆರ್‌ ಸಹ ದಾಖಲಾಗಿದೆ.

*
ಸೋರಿಕೆ ಬಗ್ಗೆ ಎರಡು ದಿನದ ಹಿಂದೆಯೇ ಗ್ಯಾಸ್‌ ಕಂಪೆನಿಗೆ ಹೇಳಿದ್ದೆವು. ಕ್ರಮ ಕೈಗೊಂಡಿಲ್ಲ. ಬೆಂಕಿ ಕಾಣಿಸಿಕೊಂಡ ಮೇಲೆ ತಗ್ಗು ಮುಚ್ಚಿಸಿದ್ದು, ಗ್ಯಾಸ್‌ ಆಫ್‌ ಮಾಡಿಸಲಾಗಿದೆ.
-ಶೋಭಾ ಜಗದೀಶ್‌ ಗೌಡ,
ಪಾಲಿಕೆ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.