ADVERTISEMENT

ಅಪಾಯಕಾರಿ ಅವಶೇಷಗಳ ತೆರವು

ಮಲ್ಲೇಶ್ವರದ ಮಂತ್ರಿ ಸ್ಕ್ವೇರ್‌ ಗೋಡೆ ಕುಸಿತ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:44 IST
Last Updated 18 ಜನವರಿ 2017, 19:44 IST

ಬೆಂಗಳೂರು: ಮಲ್ಲೇಶ್ವರದ ಮಂತ್ರಿ ಸ್ಕ್ವೇರ್‌ ಗೋಡೆ (ಪ್ಯಾರಾಪೆಟ್‌ ವಾಲ್‌) ಕುಸಿತದ ಜಾಗದಲ್ಲಿದ್ದ ಕಬ್ಬಿಣದ ರಾಡು, ಚೂಪಾದ ಕಲ್ಲುಗಳು ಸೇರಿದಂತೆ ಹಲವು ಅಪಾಯಕಾರಿ ಅವಶೇಷಗಳನ್ನು ಬುಧವಾರ ತೆರವುಗೊಳಿಸಲಾಯಿತು.

‘ಗೋಡೆಗೆ ಹೊಂದಿಕೊಂಡು ಕಬ್ಬಿಣದ ರಾಡುಗಳು ಹಾಗೂ ಚೂಪಾದ ಕಲ್ಲುಗಳು ಬಿದ್ದಿದ್ದವು.  ಅವುಗಳಿಂದ ಅಪಾಯ ಎದುರಾಗುವ ಸಾಧ್ಯತೆ ಇತ್ತು. ಅಂಥವುಗಳನ್ನು ಗುರುತಿಸಿ ಕತ್ತರಿಸಲಾಯಿತು’ ಎಂದು ಮಲ್ಲೇಶ್ವರ ಪೊಲೀಸರು ತಿಳಿಸಿದರು.

 ‘ಮಂತ್ರಿ ಸ್ಕ್ವೇರ್‌ ಕಟ್ಟಡದ ಮಾಲೀಕರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ವಿಶೇಷ ತಂಡದ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದು, ತನಿಖೆ ಬಳಿಕವೇ ಗೋಡೆ ಕುಸಿದಿದ್ದಕ್ಕೆ ನಿಖರ ಕಾರಣ ಗೊತ್ತಾಗಲಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದರು.

ಆದಷ್ಟು ಬೇಗ ಪುನಃ ಆರಂಭ: ‘ಪರಿಣಿತ ಎಂಜಿನಿಯರ್‌ ಸಲಹೆಯಂತೆ  ವೈಜ್ಞಾನಿಕವಾಗಿಯೇ ಕಟ್ಟಡ ನಿರ್ಮಿಸಿದ್ದೇವೆ. ಸದ್ಯ ಗೋಡೆ ಕುಸಿದಿದ್ದು ಕಟ್ಟಡದ ಶೇ 0.01 ಭಾಗವಷ್ಟೇ. ಉಳಿದ ಭಾಗವೆಲ್ಲ ಸುರಕ್ಷಿತವಾಗಿದೆ’ ಎಂದು ಮಂತ್ರಿ ಡೆವಲಪರ್ಸ್‌ನ ಸಿಇಒ ಆದಿತ್ಯಾ ಸಿಕ್ರಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಘಟನೆ ವೇಳೆ ಮಾಲ್‌ನ ರಕ್ಷಣಾ ಸಿಬ್ಬಂದಿ, ತ್ವರಿತವಾಗಿ ಸ್ಪಂದಿಸಿ 2,000 ಜನರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿದರು’ ಎಂದು ಹೇಳಿದ್ದಾರೆ. ‘ಮಂತ್ರಿ ಸ್ಕ್ವೇರ್‌ ಮರು ಆರಂಭಕ್ಕೆ ಅನುಮತಿ ನೀಡುವಂತೆ ಬಿಬಿಎಂಪಿಗೆ ಮನವಿ ಮಾಡಿದ್ದೇವೆ. ಆದಷ್ಟು ಬೇಗನೇ ಅಧಿಕಾರಿಗಳ ಒಪ್ಪಿಗೆ ಪಡೆದು ಮಾಲ್‌ ಪುನಃ ಆರಂಭಿಸುತ್ತೇವೆ’ ಎಂದು  ಆದಿತ್ಯಾ ತಿಳಿಸಿದ್ದಾರೆ.

ಉದ್ಯೋಗಿಗಳಿಗೆ ಸಂಬಳ ರಹಿತ ರಜೆ
ಘಟನೆಯಿಂದಾಗಿ ಮಂತ್ರಿ ಸ್ಕ್ವೇರ್‌ನಲ್ಲಿದ್ದ ಅಂಗಡಿಗಳ ಉದ್ಯೋಗಿಗಳಿಗೆ ರಜೆ ನೀಡಲಾಗಿದೆ. ‘ಮಾಲ್‌ನ ಮೂರನೇ ಮಹಡಿಯಲ್ಲಿರುವ ಪಾರ್ಲರ್‌ನಲ್ಲಿ 15 ಮಂದಿ ಕೆಲಸ ಮಾಡುತ್ತಿದ್ದೆವು. ಈಗ  ಪಾರ್ಲರ್‌ ಮಾಲೀಕರು ಸಂಬಳ ರಹಿತ ರಜೆ ನೀಡಿದ್ದು, ವೇತನ ನಂಬಿಕೊಂಡಿದ್ದ ನಾವೆಲ್ಲ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ಉದ್ಯೋಗಿಯೊಬ್ಬರು ತಿಳಿಸಿದರು.

‘ಮಾಲ್‌ನ ವಿವಿಧ ಅಂಗಡಿಗಳಲ್ಲಿ ಸುಮಾರು 1,500 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನಾಲ್ಕನೇ ಮಹಡಿಯಲ್ಲೇ 250 ಅಂಗಡಿಗಳು ಇವೆ. ಶೇ 95ರಷ್ಟು ಉದ್ಯೋಗಿಗಳಿಗೆ ಸಂಬಳ ರಹಿತ ರಜೆ ನೀಡಲಾಗಿದೆ’ ಎಂದರು.

‘ಆಹಾರ ಮಳಿಗೆಗೆ  ತಿಂಗಳಿಗೆ ₹1 ಲಕ್ಷ ಬಾಡಿಗೆ ಕೊಡುತ್ತಿದ್ದೆವು. ಈಗ ಮಾಲ್‌ ಬಂದ್‌ ಮಾಡಿದ್ದರಿಂದ ದಿನಕ್ಕೆ 10,000 ನಷ್ಟವಾಗಲಿದೆ.  ಹೀಗಾಗಿ ಕಾರ್ಮಿಕರಿಗೆ ರಜೆ ಕೊಟ್ಟು ಕಳುಹಿಸಿದ್ದೇವೆ’ ಎಂದು ಆಹಾರ ಮಳಿಗೆಯ ಅಧಿಕಾರಿ ತಿಳಿಸಿದರು.  ಕೆಲ ಅಂಗಡಿಗಳ ಮಾಲೀಕರು, ಬುಧವಾರ  ಅಂಗಡಿಯಲ್ಲಿದ್ದ ವಸ್ತುಗಳನ್ನು ಕೊಂಡ್ಯೊಯ್ದರು.

‘ಘಟನೆ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಿದ್ದಾರೆ. ಹೀಗಾಗಿ ಸಿಬ್ಬಂದಿಯನ್ನು ಬುಧವಾರ  ಸ್ಥಳಕ್ಕೆ ಕಳುಹಿಸಿಲ್ಲ. ವರದಿ ಬಂದ ಬಳಿಕವೇ ಉನ್ನತ ಅಧಿಕಾರಿಗಳ ಸೂಚನೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ಎಂಜಿನಿಯರ್‌ ಬೆಟ್ಟೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT