ADVERTISEMENT

ಅಮಾನತ್‌ ಬ್ಯಾಂಕ್‌ ದಿವಾಳಿಯಾಗಲು ರೆಹಮಾನ್‌ ಖಾನ್‌ ಕಾರಣ: ಖುರೇಶಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ಬೆಂಗಳೂರು: ‘ಮುಸ್ಲಿಂ ಸಮುದಾಯದ ಮುಖಂಡರಿಂದಲೇ ಹೆಚ್ಚಿನ ವಕ್ಫ್‌ ಆಸ್ತಿ ಅತಿಕ್ರಮಣವಾಗಿದೆ’ ಎಂದು ಟಿಪ್ಪು ಸುಲ್ತಾನ್‌ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹಮದ್‌ ಖುರೇಶಿ ಆರೋಪಿಸಿದರು.

ನಗರದಲ್ಲಿ ಬುಧವಾರ ಏರ್ಪಡಿಸಿದ್ದ ‘ವಕ್ಫ್‌ ಆಸ್ತಿಗಳ ಸಂರಕ್ಷಣೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾನಾಡಿದರು.
‘ಸ್ವತಃ ವಕ್ಫ್‌ ಆಸ್ತಿ ಅತಿಕ್ರಮಣ ಮಾಡಿರುವ ಸಂಸದ ಕೆ.ರೆಹಮಾನ್‌ ಖಾನ್‌ ಅವರೇ ವಕ್ಫ್‌ ಆಸ್ತಿ ಸಂರಕ್ಷಣೆ ಬಗ್ಗೆ ಮಾತನಾಡುತ್ತಾರೆ. ಅಲ್ಲದೇ, ತಮ್ಮ ಕೆ.ಕೆ. ಎಜುಕೇಷನಲ್‌ ಅಂಡ್‌ ಚಾರಿಟಬಲ್‌ ಟ್ರಸ್ಟ್‌ ಮತ್ತು ವಕ್ಫ್‌ ಮಂಡಳಿ ಸಹಯೋಗದಲ್ಲಿ ಇತ್ತೀಚೆಗೆ ‘ಭಾರತದಲ್ಲಿ ವಕ್ಫ್‌’ ಕುರಿತ ಸಮಾವೇಶ ನಡೆಸಿದರು. ಇದು ತಮ್ಮ ಅಕ್ರಮಗಳನ್ನು ಮುಚ್ಚಿ ಹಾಕುವ ತಂತ್ರ’ ಎಂದು ಆರೋಪಿಸಿದರು. 

‘ಅಮಾನತ್ ಕೋ ಆಪರೇಟಿವ್‌ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ರೆಹಮಾನ್‌ ಖಾನ್‌ ಅವರ ವಿರುದ್ಧವೂ ಆರೋಪಗಳು ಕೇಳಿ ಬಂದಿವೆ. ಅಂತಹವರು ವಕ್ಫ್‌ ಆಸ್ತಿ ಸಂರಕ್ಷಣೆ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ’ ಎಂದು ಹೇಳಿದರು.

‘ಅಮಾನತ್ ಬ್ಯಾಂಕ್‌ ದಿವಾಳಿಯಾಗಲು ರೆಹಮಾನ್‌ ಅವರೇ ಕಾರಣ. ಅವರು ಬ್ಯಾಂಕ್‌ ಹೆಸರಿನಲ್ಲಿ 2.60  ಲಕ್ಷ ಗ್ರಾಹಕರಿಗೆ ವಂಚನೆ ಮಾಡಿದ್ದಾರೆ ಮತ್ತು ₨ 152 ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.