ADVERTISEMENT

ಅಮಾನಿಕೆರೆಯಲ್ಲಿ ಹೆಚ್ಚುತ್ತಿದೆ ಕೊಳಚೆ ನೀರು

ಬೆಳ್ಳಂದೂರು ಕೆರೆ ನೀರು ಹರಿಯುವ ಯಮಲೂರು ಕೋಡಿಯಲ್ಲಿ ಮಣ್ಣು

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 19:53 IST
Last Updated 7 ಜುಲೈ 2015, 19:53 IST

ಬೆಂಗಳೂರು: ಬೆಳ್ಳಂದೂರು ಕೆರೆ ನೀರು ಹರಿಯುವ ಯಮಲೂರು ಕೋಡಿಯನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಜೂನ್‌ ಮೂರರಂದು ಮಣ್ಣು ತುಂಬಿಸಿ ಮುಚ್ಚಿ ಹಾಕಿದ ಪರಿಣಾಮ, ಅಮಾನಿಕೆರೆಗೆ ಹರಿಯುವ ಕೊಳಚೆ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಪ್ರಸ್ತುತ, ಬೆಳ್ಳಂದೂರು ಗ್ರಾಮದ ಅಮಾನಿಕೆರೆಯಲ್ಲಿ ದುರ್ನಾತ ಸೂಸುವ ಭಾರಿ ನೊರೆಯ ರಾಶಿ ಕಾಣಿಸಿಕೊಂಡಿರುವುದು  ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕಸದ ತೊಟ್ಟಿಯಾದ ಕೋಡಿ: ಯಮಲೂರು ಕೋಡಿಯನ್ನು ಮಣ್ಣಿನಿಂದ ಮುಚ್ಚಿದ ಬಳಿಕ ಕೋಡಿಯ ಸೇತುವೆಯ ಕೆಳಗಿನ ಕಾಲುವೆ ಪ್ರದೇಶ ಸಂಪೂರ್ಣವಾಗಿ ಕಸದ ತೊಟ್ಟಿಯಂತಾಗಿದೆ.

ನೀರಿಲ್ಲದ ಯಮಲೂರು ಕೋಡಿಯಲ್ಲಿ ದಿನವೂ ಸ್ಥಳೀಯ ಬಿಬಿಎಂಪಿ ಕಾರ್ಮಿಕರು ಕಸ ಸುರಿಯುತ್ತಿದ್ದಾರೆ. ಇದರಿಂದ, ಸಮಸ್ಯೆಗಳು ಉಂಟಾಗುತ್ತಿವೆ ಎಂದು ಗ್ರಾಮಸ್ಥರು ದೂರಿದರು.

ಯಮಲೂರು ಸಮೀಪದ ಕೆಂಪಾಪುರ, ಮಾರತಹಳ್ಳಿ, ವಿಮಾನಪುರದಲ್ಲಿರುವ ಕೋಳಿ ಮಾಂಸದ ಅಂಗಡಿಗಳು, ಬೇಕರಿ, ಹೋಟೆಲ್‌ಗಳಿಂದಲೂ ಕತ್ತಲಾಗುತ್ತಿದ್ದಂತೆ ತ್ಯಾಜ್ಯವನ್ನು ಮೂಟೆಗಳಲ್ಲಿ ತುಂಬಿಕೊಂಡು ತಂದು ಕೋಡಿಯಲ್ಲಿ ಸುರಿಯಲಾಗುತ್ತಿದೆ.

ಹೀಗಾಗಿ, ಕೋಡಿಯಲ್ಲಿ ದುರ್ವಾಸನೆಯ ನೊರೆ ಇಲ್ಲದಿದ್ದರೂ ಕಸದ ಕೊಳಕು ವಾಸನೆ ನೆಮ್ಮದಿಯನ್ನು ಕೆಡಿಸಿದೆ ಎಂದು ಯಮಲೂರು ಗ್ರಾಮಸ್ಥರು ಅಳಲು ತೋಡಿಕೊಂಡರು.

ಈಡೇರದ ಭರವಸೆ: ಐದಾರು ದಿನಗಳಲ್ಲಿ ಯಮಲೂರು ಕೋಡಿಯನ್ನು ಶುಚಿಗೊಳಿಸಿ, ಮಣ್ಣು ತೆರವು ಮಾಡಲಾಗುತ್ತದೆ ಎಂದು ಜೂ.3ರಂದು ಮಣ್ಣು ಮುಚ್ಚುವ ವೇಳೆ ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಅನಂತಸ್ವಾಮಿ ಹಾಗೂ ಶಾಸಕ ಅರವಿಂದ ಲಿಂಬಾವಳಿ ಅವರು ಭರವಸೆ ನೀಡಿದ್ದರು.

ಆದರೆ, ಕೋಡಿ ಮುಚ್ಚಿ ತಿಂಗಳು ಕಳೆದರೂ ಈವರೆಗೆ ಮಣ್ಣು ತೆಗೆದು  ಹಾಕಿಲ್ಲ ಎಂದು ಯಮಲೂರು ಗ್ರಾಮಸ್ಥರು ದೂರಿದರು.

ಖಾಸಗಿ ಬಹುಮಹಡಿ ಕಟ್ಟಡಗಳ ಬಳಿ ಹರಿಯುತ್ತಿದ್ದ ಕೊಳಕು ನೀರನ್ನು ತಡೆಗಟ್ಟಲು ಶಾಸಕರು, ಬಿಬಿಎಂಪಿ ಅಧಿಕಾರಿಗಳೊಂದಿಗೆ ಸೇರಿಕೊಂಡು ಕೋಡಿ ಸ್ವಚ್ಛಗೊಳಿಸುವ ನೆಪದಲ್ಲಿ ಮುಚ್ಚಿದ್ದಾರೆ. ಕೋಡಿ ಕೆಳಗಿರುವ  ರಾಜಕಾಲುವೆಗಳು ಒತ್ತುವರಿಯಾಗಿವೆ. ಅವುಗಳನ್ನು ತೆರವು ಮಾಡಲಾಗುತ್ತದೆ ಎಂದು ತಹಶೀಲ್ದಾರ್‌ ಹರೀಶ ನಾಯ್ಕ  ಭರವಸೆ ನೀಡಿದ್ದರು. ಈವರೆಗೆ ಆ ಕೆಲಸ ಕೂಡ ಆಗಿಲ್ಲ ಎಂದರು.

‘ಕೋಡಿಯಲ್ಲಿರುವ ಮಣ್ಣನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ’ ಪಾಲಿಕೆ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.