ADVERTISEMENT

ಅರ್ಕಾವತಿ ನದಿಗೆ ಮತ್ತೆ ಜೀವ!

ಮಂಚನಬೆಲೆ ಜಲಾಶಯದಿಂದ ಹರಿದ ನೀರು

ಆರ್.ಜಿತೇಂದ್ರ
Published 22 ಮಾರ್ಚ್ 2017, 20:10 IST
Last Updated 22 ಮಾರ್ಚ್ 2017, 20:10 IST
ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದ ಕ್ರೆಸ್ಟ್‌ ಗೇಟ್‌ ಮೂಲಕ ಬುಧವಾರ ಹೊರಗೆ ಹರಿದ ನೀರು
ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದ ಕ್ರೆಸ್ಟ್‌ ಗೇಟ್‌ ಮೂಲಕ ಬುಧವಾರ ಹೊರಗೆ ಹರಿದ ನೀರು   
ರಾಮನಗರ: ಬರದಿಂದ ಕಂಗೆಟ್ಟಿರುವ ಜಿಲ್ಲೆಯ ಜನ–ಜಾನುವಾರುಗಳಿಗೆ ನೆರವಾಗುವ ಸಲುವಾಗಿ ಮಂಚನಬೆಲೆ ಜಲಾಶಯದಿಂದ ಅರ್ಕಾವತಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಬತ್ತಿ ಹೋದಂತೆ ಇರುವ ಅರ್ಕಾವತಿಗೆ ಮತ್ತೆ ಜೀವಕಳೆ ಬಂದಿದೆ.
 
ಕಳೆದ 18ರಿಂದಲೇ ನದಿಗೆ ನೀರು ಹರಿಸಲಾಗುತ್ತಿದ್ದು, ಮಂಗಳವಾರ ರಾತ್ರಿಯಿಂದ ಈ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಮಾಗಡಿ ತಾಲ್ಲೂಕಿನಲ್ಲಿ ಇರುವ ಜಲಾಶಯದಲ್ಲಿ ಮೂರು ಕ್ರೆಸ್ಟ್‌ ಗೇಟುಗಳಿದ್ದು, ಈ ಪೈಕಿ ಸದ್ಯ ಒಂದು ಗೇಟಿನ ಮೂಲಕ ನೀರು ಹೊರಹೋಗುತ್ತಿದೆ. ಬೇಸಿಗೆಯಲ್ಲಿ ನದಿಯಲ್ಲಿ ನೀರು ಹರಿದಿರುವುದನ್ನು ಕಂಡು ಜನರು ಪುಳಕಗೊಂಡಿದ್ದಾರೆ. 
 
‘ಜಲಾಶಯದಲ್ಲಿ ಸದ್ಯ 0.7 ಟಿಎಂಸಿ ನೀರು ಸಂಗ್ರಹವಿದೆ. ಇದರಲ್ಲಿ ಸದ್ಯ 50 ಎಂಸಿಎಫ್‌ಟಿ ನೀರನ್ನು ನದಿಗೆ ಹರಿಸಲಾಗುವುದು. ಸದ್ಯ ನದಿಯ ನೀರು ಕೈಲಾಂಚವರೆಗೆ ತಲುಪಿರುವ  ಮಾಹಿತಿ ಇದೆ.
 
ಕನಕಪುರ ಪಟ್ಟಣಕ್ಕೆ ಸಮೀಪ ಮೈಸೂರು–ಬೆಂಗಳೂರು ಹೆದ್ದಾರಿಯ ಸೇತುವೆಯವರೆಗೆ ನೀರು ತಲುಪುವವರೆಗೂ ಜಲಾಶಯದಿಂದ ನೀರು ಬಿಡಲಾಗುವುದು. ಅದಕ್ಕೆ ಇನ್ನೂ ಎರಡು ದಿನ ಬೇಕಾಗಬಹುದು.
 
ನೀರು ಅಲ್ಲಿಗೆ ತಲುಪಿರುವುದು ಖಾತ್ರಿಯಾದ ಬಳಿಕ ಜಲಾಶಯದಿಂದ ನೀರಿನ ಹರಿವು ಸ್ಥಗಿತಗೊಳ್ಳಲಿದೆ’ ಎಂದು  ಕಾವೇರಿ ನೀರಾವರಿ ನಿಗಮದ ಮಂಚನಬೆಲೆ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ರವಿಶಂಕರ್‌  ತಿಳಿಸಿದರು.
 
ತಮಿಳುನಾಡಿಗೆ ನೀರು ಹರಿಸಿದ ವದಂತಿ!
ತಮಿಳುನಾಡಿಗೆ ನಿತ್ಯ ಎರಡು ಸಾವಿರ ಕ್ಯುಸೆಕ್‌ ನೀರು ಬಿಡುವಂತೆ ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಮಂಚನಬೆಲೆ ಜಲಾಶಯದಿಂದ ಅರ್ಕಾವತಿ ನದಿ ಮೂಲಕ ನೆರೆ ರಾಜ್ಯಕ್ಕೆ  ನೀರು ಬಿಡಲಾಗುತ್ತಿದೆ ಎಂದು ವದಂತಿ ಹಬ್ಬಿದ್ದು, ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ಬಗ್ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು ‘ಜಿಲ್ಲೆಯ ಜನರ ಹಿತದೃಷ್ಟಿಯಿಂದ ಮಾತ್ರ ನದಿಗೆ ನೀರು ಬಿಡಲಾಗುತ್ತಿದೆ. ಕನಕಪುರ ಗಡಿಗೆ ನೀರು ತಲುಪುತ್ತಲೇ ಜಲಾಶಯದ ಕ್ರೆಸ್ಟ್‌ ಗೇಟುಗಳು ಬಂದ್ ಆಗಲಿವೆ. ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂಬುದು ಬರೀ ವದಂತಿ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.