ADVERTISEMENT

ಅರ್ಜಿ ಇತ್ಯರ್ಥಕ್ಕೆ ಗಡುವು

ಬಲಿಜರಿಗೆ ಶೈಕ್ಷಣಿಕ 2ಎ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2016, 20:05 IST
Last Updated 9 ಫೆಬ್ರುವರಿ 2016, 20:05 IST

ಬೆಂಗಳೂರು: ಶೈಕ್ಷಣಿಕ ಉದ್ದೇಶಕ್ಕಾಗಿ ಬಲಿಜ ಸಮುದಾಯವನ್ನು ‘3 ಎ’ ನಿಂದ ‘2 ಎ’  ಗೆ ಸೇರಿಸಿ ಹೊರಡಿಸಿರುವ ಅಧಿಸೂಚನೆ ರದ್ದುಗೊಳಿಸುವ ಬೇಡಿಕೆ ಬಗ್ಗೆ ಆರು ತಿಂಗಳ ಒಳಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ಈ ಬಗ್ಗೆ ಕರ್ನಾಟಕ ಪ್ರದೇಶ ಕುರುಬರ ಸಂಘ, ಈಡಿಗರ ಸಂಘ, ವಿಶ್ವಕರ್ಮ ಸಮಾಜ, ಸವಿತಾ ಸಮಾಜ, ಮಡಿವಾಳ ಮಾಚಿದೇವ ಟ್ರಸ್‌್ಟ , ತಿಗಳರ ವಿದ್ಯಾಭಿವೃದ್ಧಿ ಸಂಘ, ದೊಂಬಿದಾಸರ ಕ್ಷೇಮಾಭಿವೃದ್ಧಿ ಸಂಘಗಳು  ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅದು ವಿಲೇವಾರಿ ಮಾಡಿದೆ.

ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ವಿಭಾಗೀಯ ಪೀಠವು, ‘ಅರ್ಜಿದಾರರು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಮೂರು ವಾರಗಳ ಒಳಗೆ ಮನವಿ ಸಲ್ಲಿಸಬೇಕು’ ಎಂದು ಸೂಚಿಸಿದೆ.

‘ಕಾರ್ಯದರ್ಶಿಯವರು ಹಿಂದುಳಿದ ವರ್ಗಗಳ ಆಯೋಗದಿಂದ ಸೂಕ್ತ ವರದಿ ತರಿಸಿಕೊಳ್ಳಬೇಕು. ಈ ಅಧಿಸೂಚನೆ ಸರಿಯಿದೆಯೊ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು’ ಎಂದು ತಾಕೀತು ಮಾಡಿದೆ.

ಅರ್ಜಿದಾರರ ವಾದ
2011ರ ಜುಲೈ 16ರಂದು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿ ಬಲಿಜ ಸಮುದಾಯಕ್ಕೆ 2ಎ ನಲ್ಲಿ ಶಿಕ್ಷಣ ಸೌಲಭ್ಯ ಪಡೆಯಲು ಆದೇಶಿಸಿತ್ತು.

‘ಇದು ಅವೈಜ್ಞಾನಿಕವಾಗಿದೆ. ಆದೇಶ ಹೊರಡಿಸುವ ಮುನ್ನ ಬಲಿಜ ಸಮುದಾಯದ  ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ಕುರಿತಂತೆ ಯಾವುದೇ ವರದಿ ತರಿಸಿಕೊಂಡಿಲ್ಲ ಮತ್ತು ಹಿಂದುಳಿದ ವರ್ಗಗಳ ಆಯೋಗದಿಂದಲೂಯಾವುದೇ ಮಾಹಿತಿ ಪಡೆದಿಲ್ಲ. ಆದ್ದರಿಂದ ಅಧಿಸೂಚನೆ ರದ್ದು ಮಾಡಬೇಕು’ ಎಂದು ಅರ್ಜಿದಾರರು ಕೇಳಿದ್ದರು. ಅರ್ಜಿದಾರರ ಪರವಾಗಿ ಎಚ್.ಕೆ.ರವಿ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT