ADVERTISEMENT

‘ಅರ್ಹತೆ, ಯೋಗ್ಯತೆ ಇದ್ದರೆ ವಂಶಪಾರಂಪರ್ಯ ಒಪ್ಪಬಹುದು’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 21:01 IST
Last Updated 24 ಮಾರ್ಚ್ 2017, 21:01 IST
ಮಲ್ಲೇಶ್ವರದಲ್ಲಿರುವ  ಬಿಜೆಪಿ ಕಚೇರಿಯಲ್ಲಿ ಎಸ್‌.ಎಂ.ಕೃಷ್ಣ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.  ಯಡಿಯೂರಪ್ಪ ಮತ್ತು ಶಾಸಕ ಆರ್‌.ಅಶೋಕ್‌ ಹಾರ ಹಾಕಿ ಸ್ವಾಗತಿಸಿದರು.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಎಸ್‌.ಎಂ.ಕೃಷ್ಣ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ಶಾಸಕ ಆರ್‌.ಅಶೋಕ್‌ ಹಾರ ಹಾಕಿ ಸ್ವಾಗತಿಸಿದರು.   

ಬೆಂಗಳೂರು: ‘ಅರ್ಹತೆ ಮತ್ತು ಯೋಗ್ಯತೆ ಇದ್ದರೆ ವಂಶಪಾರಂಪರ್ಯ ಆಡಳಿತ ಒಪ್ಪಬಹುದು. ಆದರೆ, ಕಾಂಗ್ರೆಸ್‌ನಲ್ಲಿ ಅದು ಕಾಣುವುದಿಲ್ಲ’ ಎಂದು ಹಿರಿಯ ರಾಜಕಾರಣಿ ಎಸ್‌.ಎಂ.ಕೃಷ್ಣ  ಹೇಳಿದರು.

ದೆಹಲಿಯಲ್ಲಿ ಗುರುವಾರ ಬಿಜೆಪಿ ಸೇರ್ಪಡೆಯಾದ ಬಳಿಕ ಶುಕ್ರವಾರ ರಾತ್ರಿ  ನಗರಕ್ಕೆ ಬಂದ ಕೃಷ್ಣ  ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಪರೋಕ್ಷವಾಗಿ ಟೀಕಾ ಪ್ರಹಾರ  ನಡೆಸಿದರು.

‘ನಾಲ್ಕು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿ ಇದ್ದೆ.   ನನ್ನನ್ನು ವಿದೇಶಾಂಗ ಸಚಿವ ಸ್ಥಾನದಿಂದ ತೆಗೆಯುವ ಮುನ್ನ ಒಂದು ಮಾತು ಹೇಳಬಹುದಿತ್ತು. ಕನಿಷ್ಠ ಸೌಜನ್ಯವನ್ನೂ ತೋರದೇ, ಏಕಾಏಕಿ ಕಿತ್ತು ಹಾಕಿದರು. ಅಲ್ಲಿ ನಾನು  ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿದೆ.   ಆ ಹಿಂಸೆಯಿಂದ ಹೊರಬರಲು ಬಿಜೆಪಿ ಸೇರಿದ್ದೇನೆ’ ಎಂದು ಹೇಳಿದರು.

ADVERTISEMENT

‘ಮೋದಿಯವರ ಆದರ್ಶ ಮತ್ತು ಅಭಿವೃದ್ಧಿ ಪರ ಚಿಂತನೆಗಳೇ ನಾನು ಬಿಜೆಪಿಗೆ ಸೇರಲು ಪ್ರೇರಣೆ. ನೋಟು ರದ್ದತಿ ಅಸಾಮಾನ್ಯವಾದುದು. ಇಂತಹ ದಿಟ್ಟ ನಿರ್ಧಾರ ಕೈಗೊಳ್ಳಲು ಗಟ್ಟಿ ಗುಂಡಿಗೆ ಬೇಕು’ ಎಂದರು.

‘ನಾನು ವಿದೇಶಾಂಗ ಸಚಿವನಾಗಿದ್ದಾಗ ಪಾಕಿಸ್ತಾನದ ಜತೆ ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಮಾತುಕತೆ ನಡೆಸಿದ್ದೆ. ಆಗ ನಮ್ಮ ಮಾತು ಅವರಿಗೆ ಅರ್ಥ ಆಗಿರಲಿಲ್ಲ. ಆದರೆ, ಮೋದಿ ಬಂದು ನಿರ್ದಿಷ್ಟ ದಾಳಿ ಮಾಡಿಯೇ ಪಾಕ್‌ಗೆ ಪಾಠ ಕಲಿಸಬೇಕಾಯಿತು’ ಎಂದರು.
‘ಬಿಜೆಪಿ ಶಿಸ್ತುಬದ್ಧ ಪಕ್ಷ ಎಂಬುದನ್ನು ಅನುಭವದಿಂದ ಬಲ್ಲೆ. ಯಾವುದೇ ನಿರೀಕ್ಷೆ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ.  ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ’ ಎಂದರು.

ಮುಂದಿನ ತಿಂಗಳು ನಡೆಯುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಅವರು ತಿಳಿಸಿದರು.

‘ನಿಮ್ಮ ಬಿಜೆಪಿ’ ಎಂದ ಕೃಷ್ಣ
ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಕೃಷ್ಣ ಅವರು, ‘ನಿಮ್ಮ ಬಿಜೆಪಿಯಲ್ಲಿ ’ಎಂದು ಒಂದೆರಡು ಬಾರಿ ಹೇಳಿದರು. ಆಗ ಬಿಜೆಪಿಯ ಹಿರಿಯ ನಾಯಕ ರಾಮಚಂದ್ರಗೌಡ ಅವರು, ‘ನಿಮ್ಮ ಬಿಜೆಪಿ ಎನ್ನಬೇಡಿ, ನಮ್ಮ ಬಿಜೆಪಿ ಎಂದು ಹೇಳಿ’ ಎಂದು ಕೃಷ್ಣ ಅವರನ್ನು ತಿದ್ದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.