ADVERTISEMENT

ಅವೈಜ್ಞಾನಿಕ ಕಾಮಗಾರಿ ನಿಲ್ಲಿಸಿ, ಮರ ಉಳಿಸಿ

ನೃಪತುಂಗ ರಸ್ತೆ ಮರಗಳ ಹನನ ಖಂಡಿಸಿ ಪರಿಸರವಾದಿಗಳಿಂದ ಮುಂದುವರಿದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST
ಮರಗಳ ನಾಶಕ್ಕೆ ಕಾರಣವಾಗುತ್ತಿರುವ ಟೆಂಡರ್‌ ಶ್ಯೂರ್‌ ಯೋಜನೆಯ ಕಾಮಗಾರಿ ವಿರುದ್ಧ ಪರಿಸರವಾದಿ ಸಂಘಟನೆಗಳ ಕಾರ್ಯಕರ್ತರು ಬಿಬಿಎಂಪಿ ಕಚೇರಿ ಎದುರು ಪ್ರತಿಭಟಿಸಿದರು    –ಪ್ರಜಾವಾಣಿ ಚಿತ್ರ
ಮರಗಳ ನಾಶಕ್ಕೆ ಕಾರಣವಾಗುತ್ತಿರುವ ಟೆಂಡರ್‌ ಶ್ಯೂರ್‌ ಯೋಜನೆಯ ಕಾಮಗಾರಿ ವಿರುದ್ಧ ಪರಿಸರವಾದಿ ಸಂಘಟನೆಗಳ ಕಾರ್ಯಕರ್ತರು ಬಿಬಿಎಂಪಿ ಕಚೇರಿ ಎದುರು ಪ್ರತಿಭಟಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಮರಗಳ ನಾಶಕ್ಕೆ ಕಾರಣವಾಗುತ್ತಿರುವ ಟೆಂಡರ್‌ ಶ್ಯೂರ್‌ ಯೋಜನೆಯ ಕಾಮಗಾರಿ ಕೂಡಲೇ ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪರಿಸರವಾದಿ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ನೃಪತುಂಗ ರಸ್ತೆಯಲ್ಲಿ ಟೆಂಡರ್‌ ಶ್ಯೂರ್‌ ಯೋಜನೆಯಡಿ ಫುಟ್‌ಪಾತ್‌ ನಿರ್ಮಾಣಕ್ಕಾಗಿ ಐದು ಮರಗಳನ್ನು ಕಡಿಯಲು ತೀರ್ಮಾನಿಸಿರುವ ಬಿಬಿಎಂಪಿ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಸಿರು ಉಸಿರು, ಗ್ರೀನ್‌ ಬೆಂಗಳೂರು ಕ್ಯಾಂಪೇನ್‌ ಹಾಗೂ ಫೋರಂ ಫಾರ್‌ ಅರ್ಬನ್‌ ಅಂಡ್‌ ಕಾಮನ್ಸ್ ಸಂಘಟನೆಗಳ ಕಾರ್ಯಕರ್ತರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರು  ಪ್ರತಿಭಟಿಸಿದರು.

‘ಸಾರ್ವಜನಿಕರ ಹಣ ಬಳಸಿಕೊಂಡು ಶ್ರೀಮಂತರಿಗಾಗಿ ಟೆಂಡರ್‌ ಶ್ಯೂರ್‌ ಯೋಜನೆ ಮಾಡುತ್ತಿದ್ದಾರೆ. ಒಂದು ಕಿ.ಮೀ ದೂರಕ್ಕೆ ₹18 ಕೋಟಿ ವೆಚ್ಚ ಮಾಡುತ್ತಿದ್ದಾರೆ. ಮೇಯರ್‌ಗೂ ಗೊತ್ತಿಲ್ಲದಂತೆ ಹಿಂದಿನ ಮುಖ್ಯಮಂತ್ರಿಗಳಿಂದ ಅನುಮತಿ ಪಡೆದಿದ್ದಾರೆ. ಇದು ಖಾಸಗಿಯವರಿಗೆ ಅನುಕೂಲ ಮಾಡಿಕೊಡುವ ಉದ್ದೇಶವಲ್ಲದೇ ಬೇರೇನೂ ಅಲ್ಲ’ ಎಂದು ಫೋರಂ ಫಾರ್‌ ಅರ್ಬನ್‌ ಅಂಡ್‌ ಕಾಮನ್ಸ್ ಸಂಘಟನೆಯ ಕಾರ್ಯಕರ್ತ ಕ್ಷಿತಿಜ್‌ ಅರಸ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಫುಟ್‌ಪಾತ್‌ ನೆಪದಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನು ಅಗೆದು, ನೀರು, ವಿದ್ಯುತ್‌, ದೂರಸಂಪರ್ಕ ಕೇಬಲ್‌ ಮಾರ್ಗ ಮಾಡುತ್ತಿದ್ದಾರೆ. ಮರಗಳ ಬುಡದಲ್ಲಿ ಗುಂಡಿ ತೆಗೆಯುವುದರಿಂದ ಬೇರುಗಳು ದುರ್ಬಲಗೊಳ್ಳುತ್ತವೆ. ಉತ್ತಮ ವೃಕ್ಷಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಒಂದೂವರೆ ವರ್ಷದಿಂದ ನಮ್ಮ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ’ ಎಂದು ಅವರು ಹೇಳಿದರು.

‘ಮೊದಲ ಹಂತವಾಗಿ 50 ರಸ್ತೆಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಬೆಂಗಳೂರಿನಲ್ಲಿ ಮಾಡಿದಂತೆ ಹುಬ್ಬಳ್ಳಿ–ಧಾರವಾಡ ನಗರಗಳಲ್ಲೂ ಟೆಂಡರ್‌ ಶ್ಯೂರ್‌ ಯೋಜನೆಯಡಿ ಫುಟ್‌ಪಾತ್‌ ನಿರ್ಮಾಣಕ್ಕೆ ಉದ್ದೇಶಿಸಿದ್ದಾರೆ. ಹಾಗಾಗಿ ಇಂಥ ಅವೈಜ್ಞಾನಿಕ ಯೋಜನೆಯನ್ನು ಕೈಬಿಟ್ಟು, ಜನಸಾಮಾನ್ಯರೊಂದಿಗೆ ಚರ್ಚಿಸಿ ಯೋಗ್ಯವಾದ ಕೆಲಸ ಮಾಡಲಿ’ ಎಂದು ಹಸಿರು ಉಸಿರು ಸಂಘಟನೆಯ ಕಾರ್ಯಕರ್ತ ವಿನಯ್ ಶ್ರೀನಿವಾಸ್‌  ಸಲಹೆ ನೀಡಿದರು.

‘ಜಯನಗರದಲ್ಲಿ ಈಗಾಗಲೇ 10 ಮರಗಳನ್ನು ಕಡಿದಿದ್ದಾರೆ. ನೃಪತುಂಗ ರಸ್ತೆಯಲ್ಲಿ ಐದು ಮರ ಬಲಿ ಕೊಡಲು ಮುಂದಾಗಿದ್ದಾರೆ. ಯೋಜನೆಗೆ ಸಂಬಂಧಿಸಿದ ವಿವರಗಳೆಲ್ಲ ಗೌಪ್ಯವಾಗಿವೆ.   ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯ್ದೆ, ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಾಗಿದೆ. ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ಪಾದಚಾರಿಸ್ನೇಹಿ ಫುಟ್‌ಪಾತ್‌ ನಿರ್ಮಿಸಿ ಇಲ್ಲವೇ ಕಾಮಗಾರಿ ಸ್ಥಗಿತಗೊಳಿಸಿ’ ಎಂದರು.

‘ಗಾರ್ಡನ್‌ ಸಿಟಿ ಕಾಂಕ್ರೀಟ್‌ ಸಿಟಿ ಆಯ್ತು. ನಂತರ ಗಾರ್ಬೇಜ್‌ ಸಿಟಿ ಆಗಿದೆ. ಮುಂದಿನ 10 ವರ್ಷಗಳಲ್ಲಿ ಬೆಂಗಳೂರು ಸತ್ತ ನಗರವಾಗಬಹುದು’ ಎಂದು ಮಾನವ ಹಕ್ಕುಗಳ ಹೋರಾಟಗಾರ ನರಸಿಂಹಮೂರ್ತಿ ಬೇಸರ ವ್ಯಕ್ತಪಡಿಸಿದರು. ‘ಪರಿಸರ ಮಾಲಿನ್ಯ ತಡೆಗೆ, ಹಲವು ವರ್ಷಗಳಿಂದ ಪಕ್ಷಿಗಳು ನೆಲೆಸಲು  ಸಹಾಯವಾಗಿರುವ ಮರಗಳಿಗೆ ಕೊಡಲಿ ಏಟು ಹಾಕಿದರೆ ಹೇಗೆ’ ಎಂದು ಅವರು  ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ಮಕ್ಕಳೂ ಪಾಲ್ಗೊಂಡಿದ್ದರು. ಕಾರ್ಯಕರ್ತರು ಹಲವು ಹಕ್ಕೊತ್ತಾಯಗಳ ಈಡೇರಿಕೆಗೆ ಒತ್ತಾಯಿಸಿ ಬಿಬಿಎಂಪಿ ಆಡಳಿತ ವಿಭಾಗದ ಹೆಚ್ಚುವರಿ ಆಯುಕ್ತರಿಗೆ ಮನವಿ ಸಲ್ಲಿಸಿದರು.

* ಮೇಯರ್‌ ಆಗಿರದಿದ್ದರೆ ನಾನು ಸಹ ನಿಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಪರಿಸರದ ಬಗ್ಗೆ ನನಗೂ ಕಾಳಜಿ ಇದೆ. ನಾನೂ ನಿಮ್ಮ ಹೋರಾಟದ ಪರವಾಗಿದ್ದೇನೆ
–ಬಿ.ಎನ್‌. ಮಂಜುನಾಥ ರೆಡ್ಡಿ, ಮೇಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.