ADVERTISEMENT

ಅಸ್ವಾಭಾವಿಕ ಸಂಭೋಗಕ್ಕೆ ಸಹಕರಿಸದ ಪತ್ನಿಗೆ ಬ್ಲ್ಯಾಕ್‌ಮೇಲ್

ಎಂ.ಸಿ.ಮಂಜುನಾಥ
Published 7 ಮೇ 2017, 19:39 IST
Last Updated 7 ಮೇ 2017, 19:39 IST

ಬೆಂಗಳೂರು: ಅಸ್ವಾಭಾವಿಕ ಸಂಭೋಗಕ್ಕೆ ಸಹಕರಿಸದಿದ್ದರೆ ಲೈಂಗಿಕ ಕ್ರಿಯೆ ದೃಶ್ಯಗಳನ್ನು ವಾಟ್ಸ್‌ಆ್ಯಪ್‌ ಮೂಲಕ ತಂದೆ ಮೊಬೈಲ್‌ಗೆ ಕಳುಹಿಸುವುದಾಗಿ ಪತ್ನಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಕ್ಕೆ ಸಿಲುಕಿರುವ ಸಾಫ್ಟ್‌ವೇರ್ ಎಂಜಿನಿಯರ್ ಬಂಧನಕ್ಕೆ ವಿವೇಕನಗರ ಪೊಲೀಸರು ಬಲೆ ಬೀಸಿದ್ದಾರೆ.

ಈ ಸಂಬಂಧ ಸಂತ್ರಸ್ತೆ ಏ.21ರಂದು ಛತ್ತೀಸಗಡದ ರಾಯಪುರ ಠಾಣೆಗೆ ದೂರು ಕೊಟ್ಟಿದ್ದರು.  ಅಲ್ಲಿನ ಪೊಲೀಸರು ಪ್ರಕರಣವನ್ನು ದಾಖಲಿಸಿ ಮೇ 4ರಂದು ವಿವೇಕನಗರ ಠಾಣೆಗೆ ವರ್ಗಾಯಿಸಿದ್ದಾರೆ. ಪೊಲೀಸರು ಕರೆ ಮಾಡಿ ವಿಚಾರಣೆಗೆ ಕರೆಯುತ್ತಿದ್ದಂತೆಯೇ ಗಂಡ ಪರಾರಿಯಾಗಿದ್ದಾರೆ.

‘ಸಂತ್ರಸ್ತೆ ರಾಯಪುರ ಜಿಲ್ಲೆಯವರಾಗಿದ್ದು, ಆರು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ, 2015ರ ಜೂನ್ 17ರಂದು ವಿವಾಹವಾಗಿತ್ತು. ನಂತರ ದಂಪತಿ ಈಜೀಪುರದಲ್ಲಿ ನೆಲೆಸಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಮೊಬೈಲ್‌ನಲ್ಲಿ ಚಿತ್ರೀಕರಣ: ‘ಆರಂಭದಲ್ಲಿ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಗಂಡ, ನಂತರದ ದಿನಗಳಲ್ಲಿ ಅಸಹಜ ಲೈಂಗಿಕಕ್ರಿಯೆಗೆ ಒತ್ತಾಯಿಸಿದರು. ಒಂದೆರಡು ಬಾರಿ ಒಪ್ಪಿಕೊಂಡಿದ್ದೆ. ಆ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡರು. ಕ್ರಮೇಣ ಅದೇ ರೀತಿಯ ಲೈಂಗಿಕಕ್ರಿಯೆಗೆ ಪೀಡಿಸಿದರು. ಒಪ್ಪದಿದ್ದಾಗ ನಾನಾ ರೀತಿ ಕಿರುಕುಳ ನೀಡಿ ವಿಕೃತ ಆನಂದಪಡುತ್ತಿದ್ದರು’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

‘ಕಿರುಕುಳದ ಬಗ್ಗೆ ಮಾವನ ಹತ್ತಿರ ಹೇಳಿಕೊಳ್ಳಲು ಮುಜುಗರವಾಯಿತು. ಅತ್ತೆ ಬಳಿ ಹೇಳಿದಾಗ ತಲೆಕೆಡಿಸಿಕೊಳ್ಳಲಿಲ್ಲ. ಇದೀಗ ಪತಿ, ‘ನಾನು ಹೇಳಿದ ರೀತಿಯಲ್ಲಿ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ, ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ವಿಡಿಯೊಗಳನ್ನು ಅಪ್ಪನಿಗೆ ಕಳುಹಿಸುತ್ತೇನೆ’ ಎನ್ನುತ್ತಿದ್ದಾರೆ. ಹೀಗಾಗಿ, ಗಂಡನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ. ‘ನಂತರ ಅತ್ತೆ ಕೂಡ ಕಿರುಕುಳ ನೀಡಿದ್ದರಿಂದ ಮಾರ್ಚ್‌ನಲ್ಲಿ ತವರಿಗೆ ಹೋದೆ. ಆದರೆ, ಅಲ್ಲಿಗೂ ಕರೆ ಮಾಡಿ ತೊಂದರೆ ಕೊಡುತ್ತಿದ್ದಾರೆಎಂದಿದ್ದಾರೆ.

‘ಟೆಕಿ ವಿರುದ್ಧ ಅಸ್ವಾಭಾವಿಕ ಲೈಂಗಿಕಕ್ರಿಯೆ (ಐಪಿಸಿ377), ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಇ ಹಾಗೂ 67ರ (ಅಶ್ಲೀಲ ದೃಶ್ಯ ರವಾನೆ) ಅಡಿ ಹಾಗೂ ತಾಯಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಛತ್ತೀಸ್‌ಗಡ ಡಿಜಿಪಿ ಪತ್ರ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ವಿರುದ್ಧ ಕ್ರಮಕ್ಕೆ ಛತ್ತೀಸ್‌ಗಡ ಡಿಜಿಪಿ ಎ.ಎನ್.ಉಪಾಧ್ಯಾಯ ಅವರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

‘ಸದ್ಯ ಸಂತ್ರಸ್ತೆ ತವರು ಮನೆಯಲ್ಲೇ ಉಳಿದಿದ್ದಾರೆ. ಫೋನ್ ಮೂಲಕ ಹೇಳಿಕೆ ಪಡೆಯಲಾಗಿದೆ. ಆರೋಪಿ ಪತ್ತೆಗೆ ಕಬ್ಬನ್‌ಪಾರ್ಕ್‌ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.