ಬೆಂಗಳೂರು: ‘ಆಟೊ ಗ್ಯಾಸ್ ದರ ಮತ್ತೆ ಇಳಿದರೆ ಆಟೊ ಪ್ರಯಾಣ ದರವನ್ನು ಇಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಆಟೊ ಚಾಲಕರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ್ ಹೇಳಿದ್ದಾರೆ.
‘ಸದ್ಯ ಗ್ಯಾಸ್ ದರ ಲೀಟರ್ಗೆ ₨ 46 ಇದೆ. ಈ ಹಿಂದೆ ಗ್ಯಾಸ್ ದರ ಹೆಚ್ಚಳವಾಗಿದ್ದರಿಂದ ಆಟೊ ದರವನ್ನು ಹೆಚ್ಚಿಸಲಾಗಿತ್ತು. ನ.30ರಂದು ಗ್ಯಾಸ್ ದರದಲ್ಲಿ ₨ 3–4 ಇಳಿಕೆಯಾಗುವ ಸಾಧ್ಯತೆ ಇದೆ. ದರ ಇಳಿಕೆಯಾದರೆ ಆಟೊ ಪ್ರಯಾಣ ದರವನ್ನು ಕಿ.ಮೀಗೆ ₨ 2 ಇಳಿಸುವ ಬಗ್ಗೆ ನಿರ್ಧರಿಸಲಾ ಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಟೊ ಪ್ರಯಾಣ ದರ ಕಿ.ಮೀ.ಗೆ ₨ 13 ಇದೆ. ಆಟೊ ದರಕ್ಕಿಂತ ಟ್ಯಾಕ್ಸಿ ಪ್ರಯಾಣ ದರ ಕಡಿಮೆ ಇರುವುದರಿಂದ ಆಟೊದಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಹಲವು ಆಟೊ ಚಾಲಕರು ದೂರಿದ್ದಾರೆ. ನ.29ರಂದು ಎಲ್ಲ ಆಟೊ ಚಾಲಕರ ಒಕ್ಕೊಟಗಳ ಸಭೆ ಕರೆದು ಈ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.
ಬೆಂಬಲ ಇಲ್ಲ
‘ಆಟೊ ಪ್ರಯಾಣ ದರ ಇಳಿಕೆ ಮಾಡಲು ಸಾಧ್ಯವಿಲ್ಲ. ಚಾಲಕರ ಸೌಹಾರ್ದ ಸಹಕಾರ ಸಂಘವು ದರ ಇಳಿಸುವ ನಿರ್ಧಾರ ಕೈಗೊಂಡರೆ ಅದಕ್ಕೆ ಬೆಂಬಲ ನೀಡುವುದಿಲ್ಲ. ದರ ಇಳಿಕೆ ಯಿಂದಾಗಿ ಚಾಲಕರಿಗೆ ತೊಂದರೆ ಯಾಗುತ್ತದೆ. ಅಲ್ಲದೇ, ಪ್ರಯಾಣಿಕರು ಕರೆದ ಕಡೆಗೆ ಹೋಗಲು ಚಾಲಕರು ಒಪ್ಪುವುದಿಲ್ಲ.
–ರುದ್ರಮೂರ್ತಿ, ಆಟೊ ರಿಕ್ಷಾ ಚಾಲಕರ ಒಕ್ಕೂಟದ (ಎಆರ್ಡಿಯು) ಪ್ರಧಾನ ಕಾರ್ಯದರ್ಶಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.