ADVERTISEMENT

ಆಧಾರಸ್ತಂಭ ಬಿದ್ದಿದೆ, ಮನೆಯ ದೀಪ ಆರಿಹೋಗಿದೆ

ಹೆಬ್ಬಾಳ ರಸ್ತೆ ಅಪಘಾತದಲ್ಲಿ ಮೃತಪಟ್ಟ ಆನಂದ್‌ ಮನೆಯಲ್ಲಿ ಆಕ್ರಂದನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2015, 20:08 IST
Last Updated 27 ಫೆಬ್ರುವರಿ 2015, 20:08 IST
ಆನಂದ್‌ನ ತಂದೆ ಸಂಪಂಗಿರಾಮಯ್ಯ ಮತ್ತು ಸಂಬಂಧಿಕರು
ಆನಂದ್‌ನ ತಂದೆ ಸಂಪಂಗಿರಾಮಯ್ಯ ಮತ್ತು ಸಂಬಂಧಿಕರು   

ಚಿಕ್ಕಬಳ್ಳಾಪುರ: ‘ಮನೆಗೆ ಆಧಾರಸ್ತಂಭ­ವಾಗಿದ್ದ, ಆತನಿಂದಲೇ ಸಂಸಾರ ನಡೆ­ಯು­ತ್ತಿತ್ತು. ಮನೆ ದೀಪವೇ ಆರಿ ಹೋದ ಮೇಲೆ ಇನ್ನೇನು ಉಳಿದಿದೆ? ಏನು ಮಾಡ­ಬೇಕು ಅಂತ ದಿಕ್ಕು ತೋಚುತ್ತಿಲ್ಲ. ಮುದ್ದಿನಿಂದ ಸಾಕಿದ್ದ ದೊಡ್ಡ ಮಗನೇ ಹೋದ. ನಮ್ಮನ್ನು ನೋಡಿಕೊಳ್ಳುವವರು ಯಾರು?’

ಹೆಬ್ಬಾಳ ಸಮೀಪದ ಕೆಂಪಾಪುರ ಜಂಕ್ಷನ್‌ನಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಿ.ಎಸ್.ಆನಂದ್ (27) ಮೃತಪಟ್ಟ ಸುದ್ದಿ ಇಡೀ ಕುಟುಂಬಕ್ಕೆ ಬರಸಿಡಿಲಿನಂತೆ ಬಡಿದಿದೆ.

ತಾಲ್ಲೂಕಿನ ರೆಡ್ಡಗೊಲ್ಲಾರಹಳ್ಳಿ ಬಳಿಯ ಬಯ್ಯಪ್ಪನಹಳ್ಳಿ ಮನೆಯಲ್ಲಿ ಆತನ ತಂದೆ ಸಂಪಂಗಿರಾಮಯ್ಯ ದಿಕ್ಕು ತೋಚದಂ­ತಾಗಿ­ದ್ದಾರೆ. ಆನಂದ್‌ ಭಾವ­ಚಿತ್ರದ ಪಕ್ಕ ಕೂತಿದ್ದ ಅವರಿಗೆ ಆಘಾತ­ದಿಂದ ಮಾತಾಡಲು ಸಹ ಸಾಧ್ಯ­ವಾಗು­ತ್ತಿಲ್ಲ. ಒಮ್ಮೆ ಮಗನ ಭಾವಚಿತ್ರ, ಮತ್ತೊಮ್ಮೆ ಮನೆ, ಇನ್ನೊಮ್ಮೆ ಬೀದಿ­ಯತ್ತ ಏನನ್ನೋ ನಿರೀಕ್ಷಿಸುವಂತೆ ಕೂತಿದ್ದಾರೆ.

ಸಂಪಂಗಿರಾಮಯ್ಯ ಅವರ ಕಣ್ಣಲ್ಲಿ ನೋವಿನಿಂದ ನೀರು ಜಿನುಗುತ್ತಿದ್ದರೆ, ಕಣ್ಣೀರು ಹಾಕುತ್ತಿದ್ದ ಸಂಬಂಧಿಕರನ್ನು ಸಂತೈಸುವುದು ನೆರೆಹೊರೆ­ಯ­ವ­ರಿಗೆ ಬಹಳ ಕಷ್ಟವಾ­ಗಿತ್ತು. ‘ರೆಡ್ಡಗೊಲ್ಲಾ­ರ­ಹಳ್ಳಿ ಸರ್ಕಾರಿ ಶಾಲೆ-­ಯಲ್ಲಿ ಓದಿದ ಆನಂದ್‌ ಬಾಗೇ­ಪ­ಲ್ಲಿ­­ಯಲ್ಲಿ ಪಾಲಿ­ಟೆ­ಕ್ನಿಕ್‌ ಕಾಲೇ­ಜಿನಲ್ಲಿ ಶಿಕ್ಷಣ ಪೂರೈಸಿದ್ದ. ಇಲ್ಲಿಯೇ ಕೆಲ ಕಂಪೆನಿ­ಗಳಲ್ಲಿ ಕೆಲಸ ಮಾಡುತ್ತಿದ್ದ ಆತ, ಚಿಕ್ಕ­ಬಳ್ಳಾಪುರದಲ್ಲಿ ಸರ್ವೀಸ್‌ ಸೆಂಟರ್‌ ಆರಂಭಿ­ಸ­ಬೇಕು ಎಂದಿದ್ದ. ಆ ಬಗ್ಗೆ ಮಾತ-ನಾ­ಡಲು ಬೆಂಗಳೂರಿಗೆ ಹೋಗಿದ್ದ. ಸಂಜೆ ಮನೆಗೆ ಮರಳುವುದಾಗಿ ಹೇಳಿದ್ದ. ಆದರೆ ಜೀವಂತವಾಗಿ ಬರಲಿಲ್ಲ’ ಎಂದು ಸಂಪಂಗಿರಾಮಯ್ಯ ಕಣ್ಣೀರಾದರು.

ಕುಟುಂಬದ ಹೊಣೆ ನಿರ್ವಹಿಸುತ್ತಿದ್ದ ಆನಂದ್‌ ಭವಿಷ್ಯದ ಬಗ್ಗೆ ಹಲ ಕನಸು­ಗಳನ್ನು ಕಟ್ಟಿದ್ದ. ಆರ್ಥಿಕ ಸಮಸ್ಯೆ ನೀಗಿಸಿ­ಕೊಂಡು ಎಲ್ಲರನ್ನೂ ಚೆನ್ನಾಗಿ ನೋಡಿ­ಕೊಳ್ಳುತ್ತೇನೆ ಎನ್ನುತ್ತಿದ್ದ. ಈಗ ಬದುಕಿಲ್ಲ ಎಂದರೆ ನಂಬಲು ಆಗುತ್ತಿಲ್ಲ ಎಂದು ಆನಂದ್‌ ಚಿಕ್ಕಮ್ಮ ವೆಂಕಟಲಕ್ಷ್ಮಮ್ಮ ಕಣ್ಣೀರು ಹಾಕಿದರು.

ಸ್ನೇಹಿತ ಸುಮಂತ್‌ ಜತೆ ಬೈಕ್‌ನಲ್ಲಿ ಕೂತಿದ್ದ ಆನಂದ್‌ ಸಿಗ್ನಲ್‌ ದೀಪವಿದ್ದ ಕಾರಣ ಅಲ್ಲಿ ನಿಲ್ಲಿಸಿದ್ದರು. ಆದರೆ ಹಿಂಬದಿ­ಯಿಂದ ವೇಗವಾಗಿ ಬಂದ ಟ್ಯಾಂಕರ್‌ ರಸ್ತೆ ದಾಟುತ್ತಿದ್ದ ಪಾದಚಾರಿ­ಗಳ ಮೇಲೆ, ಬೈಕ್‌ನಲ್ಲಿ ಕೂತಿದ್ದ ಅವರಿಬ್ಬರ ಮೇಲೆಯೂ ಚಲಿಸಿತು. ಸುಮಂತ್‌ಗೆ ತೀವ್ರವಾದ ಗಾಯಗಳಾ­ದರೆ, ಆನಂದ್‌ ಸ್ಥಳದಲ್ಲೇ ಪ್ರಾಣಬಿಟ್ಟ. ಆತ ಮೃತಪಟ್ಟಿದ್ದಾನೆ ಎಂದು ಈಗಲೂ ನಂಬಲು ಆಗುತ್ತಿಲ್ಲ ಎಂದು ಆನಂದ್‌ ಸ್ನೇಹಿತ ವಿನಯ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.