ADVERTISEMENT

ಆಧಾರ್‌ ಮೂಲಕ ಭದ್ರತಾ ಪರಿಶೀಲನೆ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ಜಾರಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 20:02 IST
Last Updated 21 ಫೆಬ್ರುವರಿ 2017, 20:02 IST
ಆಧಾರ್‌ ಮೂಲಕ ಭದ್ರತಾ ಪರಿಶೀಲನೆ
ಆಧಾರ್‌ ಮೂಲಕ ಭದ್ರತಾ ಪರಿಶೀಲನೆ   

ಬೆಂಗಳೂರು: ಸ್ಮಾರ್ಟ್‌ ವಿಮಾನ ನಿಲ್ದಾಣ ವಾಗುವತ್ತ ದಾಪುಗಾಲಿಟ್ಟಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು  ಪ್ರಯಾಣಿಕರ ದಾಖಲೆ ಪರಿಶೀಲನೆ ನಡೆಸಲು ‘ಆಧಾರ್‌ ಆಧಾರಿತ ಬಯೋಮೆಟ್ರಿಕ್‌’ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.

ವಿಮಾನ ನಿಲ್ದಾಣ ಪ್ರವೇಶ ದ್ವಾರ, ಬ್ಯಾಗ್‌ ಡ್ರಾಪ್‌ ಅಥವಾ ಚೆಕ್‌ ಇನ್‌ ಕೌಂಟರ್‌, ಭದ್ರತಾ ವಿಭಾಗ ಹಾಗೂ ಬೋರ್ಡಿಂಗ್‌ ಪ್ರವೇಶದ್ವಾರದ ಬಳಿ ಆಧಾರ್‌ ಆಧಾರಿತ ಬಯೋಮೆಟ್ರಿಕ್‌ ವ್ಯವಸ್ಥೆ ಕಲ್ಪಿಸಲಾಗಿದೆ.

‘ಜೆಟ್‌ ಏರ್‌ವೇಸ್‌ ಸಂಸ್ಥೆಯ 9ಡಬ್ಲ್ಯು 816 ಸಂಖ್ಯೆಯ ಬೆಂಗಳೂರಿ ನಿಂದ ದೆಹಲಿಗೆ ಹೋಗುವ ವಿಮಾನಗಳ ಪ್ರಯಾಣಿಕರಿಗೆ ಮಾತ್ರ ಈ ಸೌಲಭ್ಯ ಲಭ್ಯ ಇದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಎಲ್ಲ ಪ್ರಯಾಣಿಕರಿಗೂ ವಿಸ್ತರಿಸುವ ಉದ್ದೇಶವಿದೆ’ ಎಂದು ಕೆಐಎಎಲ್ ಕಾರ್ಪೊರೇಟ್ ಸೇವೆಗಳ ವಿಭಾಗ ಸರೋಜ್ ಜೋಸೆಫ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ವ್ಯವಸ್ಥೆಯನ್ನು ಕೆಲ ದಿನಗಳ ಹಿಂದೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಯಿತು. ಬುಕ್ಕಿಂಗ್‌ ಸಂದರ್ಭದಲ್ಲಿ ಆಧಾರ್‌ ಸಂಖ್ಯೆ  ನೋಂದಾಯಿಸಿದ ಪ್ರಯಾಣಿಕರು ನಿಲ್ದಾಣದ ಪ್ರವೇಶ ದ್ವಾರದಲ್ಲಿ ಬಯೋಮೆಟ್ರಿಕ್‌ ಉಪಕರಣದ ಮೇಲೆ ಕೈ ಇಟ್ಟು ಒಳಗೆ ಹೋಗಬಹುದು’ ಎಂದರು.

‘ಈ ಹಿಂದೆ ಪ್ರಯಾಣಿಕರು ಟಿಕೆಟ್‌ ಪಡೆದ ಬಳಿಕ ಬೋರ್ಡಿಂಗ್‌ ಪಾಸ್‌ ಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಈಗ ಆನ್‌ಲೈನ್‌ ಮೂಲಕ ಇ–ಬೋರ್ಡಿಂಗ್‌ ಪಾಸ್‌ ಪಡೆಯಬಹುದು.  ಹೀಗಾಗಿ ಪ್ರಯಾಣಿಕರು ತಮ್ಮ ಮನೆಗಳಲ್ಲೇ ಆನ್‌ಲೈನ್‌ ಮೂಲಕ ಇ–ಬೋರ್ಡಿಂಗ್‌ ಪಾಸ್‌ ಪಡೆಯುತ್ತಾರೆ. ಈ ವೇಳೆ ಆಧಾರ್‌ ಸಂಖ್ಯೆಯನ್ನು ನೋಂದಾ ಯಿಸಬಹುದು’ ಎಂದರು. ‘ನಿಲ್ದಾಣದ ಪ್ರವೇಶ ದ್ವಾರದ ಬಳಿ ಪ್ರಯಾಣಿಕರು ಪಾಸ್‌ಪೋರ್ಟ್‌, ಪ್ಯಾನ್‌ ಕಾರ್ಡ್‌ ತೋರಿಸಬೇಕಿತ್ತು. ಇದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿತ್ತು. ಬಯೋಮೆಟ್ರಿಕ್‌ ಅಳವಡಿಕೆಯಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ’ ಎಂದರು.

‘ಆಧಾರ್‌ ಸಂಖ್ಯೆಯನ್ನು ನಮೂದಿಸದವರು ಸ್ಥಳದಲ್ಲೇ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಆಧಾರ್‌ ಇಲ್ಲದಿದ್ದರೆ, ಗುರುತಿನ ಚೀಟಿಯನ್ನು ಸಿಐಎಸ್‌ಎಫ್‌ ಸಿಬ್ಬಂದಿಗೆ ತೋರಿಸಬೇಕು’ ಎಂದು ಅವರು  ಹೇಳಿದರು.

ಏನಿದು ಆಧಾರ್‌ ಆಧಾರಿತ ಬಯೋಮೆಟ್ರಿಕ್‌?
ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಬಯೋಮೆಟ್ರಿಕ್‌ ಉಪಕರಣವನ್ನು ಅಳವಡಿಸಲಾಗಿದೆ. ಆಧಾರ್‌ ಸಂಖ್ಯೆ ನೋಂದಾಯಿಸಿದ ಪ್ರಯಾಣಿಕರು ಆ ಉಪಕರಣದ ಮುಂದೆ ಕೈ ಇಡಬೇಕು. ಆಗ ಕೈಯನ್ನು ಸ್ಕ್ಯಾನ್‌ ಮಾಡಿದ ಬಳಿಕ ಬಾಗಿಲು ತೆರೆದುಕೊಳ್ಳಲಿದೆ. ಇದರಿಂದ ಗುರುತಿನ ಚೀಟಿ ಪರಿಶೀಲನೆ ಕಿರಿಕಿರಿ ತಪ್ಪುತ್ತದೆ.

* ಪ್ರಯಾಣಿಕರ ಅನುಕೂಲಕ್ಕಾಗಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿಯೇ  ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೆ ತರಲಾಗಿದೆ.
-ಸರೋಜ್‌, ಕೆಐಎಎಲ್ ಕಾರ್ಪೊರೇಟ್ ಸೇವೆಗಳ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.