ADVERTISEMENT

ಆನ್‌ಲೈನ್‌ ವ್ಯಾಪಾರ ವಿರೋಧಿಸಿ ಬಂದ್‌

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 19:38 IST
Last Updated 24 ನವೆಂಬರ್ 2014, 19:38 IST

ಬೆಂಗಳೂರು: ರಿಯಾಯಿತಿ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಆನ್‌ಲೈನ್‌ ವಹಿವಾಟು ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಫೆಡರೇಷನ್‌ ಆಫ್‌ ಐಟಿ ಡೀಲರ್ಸ್‌ ಅಸೋಸಿಯೇಶನ್‌ ಕರ್ನಾ­ಟಕ (ಎಫ್‌ಐಟಿಡಿಎಕೆ) ಹಾಗೂ ಅಸೋ­ಸಿ­ಯೇಶನ್‌ ಫಾರ್‌ ಇನ್‌ಫರ್ಮೆಷನ್‌ ಟೆಕ್ನಾಲಜಿ (ಎಐಟಿ) ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಕಂಪ್ಯೂಟರ್‌ ಹಾರ್ಡ್‌ವೇರ್ ಅಂಗಡಿಗಳು ಬಂದ್‌ ನಡೆಸಿ ವಹಿವಾಟು ಸ್ಥಗಿತಗೊಳಿಸಿದವು.

ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ,  ಎಲೆಕ್ಟ್ರಾನಿಕ್‌, ಹಾರ್ಡ್‌ವೇರ್‌ ಉಪಕ­ರಣ­ಗಳ ಮಾರಾಟ ಹಾಗೂ ಸೇವೆಗೆ ಸಂಬಂಧಿಸಿದ  2,500 ಅಂಗಡಿಗಳು ಇವೆ. ನಗರದ ಎಸ್‌.ಪಿ. ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ 700ಕ್ಕೂ ಅಧಿಕ ಅಂಗಡಿಗಳು ಇವೆ. ಈ ಅಂಗಡಿಗಳ ಮಾಲೀಕರು ಬಂದ್‌ ನಡೆಸಿದರು. ಆನ್‌ಲೈನ್ ಕಂಪೆನಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಂಗಡಿಗಳ ಮಾಲೀಕರು ನಗರದ ಪುರಭವನದ ಎದುರು ಪ್ರತಿಭಟನೆ ನಡೆಸಿದರು.

ಎಫ್‌ಐಟಿಡಿಎಕೆ ಅಧ್ಯಕ್ಷ ಬಿ.ಆನಂದ ರಾವ್‌ ಮಾತನಾಡಿ, ‘ಕಳೆದ ಕೆಲವು ಸಮಯದಿಂದ ಆನ್‌ಲೈನ್‌ ವ್ಯಾಪಾರ ವಹಿವಾಟು ಗಣನೀಯವಾಗಿ ಹೆಚ್ಚಾ­ಗಿದೆ. ಇದರಿಂದಾಗಿ ಕಂಪ್ಯೂಟರ್‌ ಹಾಗೂ ಎಲೆಕ್ಟ್ರಾನಿಕ್‌ ಅಂಗಡಿಗಳ ಮೇಲೆ ಭಾರಿ ಹೊಡೆತ ಬಿದ್ದಿದೆ. ಎಲ್ಲ ವಸ್ತುಗಳನ್ನೂ ಹೀಗೆ ಮಾರಾಟ ಮಾಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಅಂಗಡಿಗಳನ್ನು ಮುಚ್ಚಬೇಕಾಗುತ್ತದೆ’ ಎಂದರು.
‘ಫ್ಲಿಪ್‌ಕಾರ್ಟ್, ಅಮೆಜಾನ್‌ ಸೇರಿದಂತೆ ಇ– ಕಾಮರ್ಸ್‌ ಕಂಪೆನಿಗಳು ಸಾಂಪ್ರದಾಯಿಕ ಮಾರುಕಟ್ಟೆಯನ್ನು ನಾಶ ಮಾಡುತ್ತಿವೆ. ಉದ್ದೇಶಪೂರ್ವ­ಕವಾಗಿ ರಿಯಾಯಿತಿ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿವೆ. ಈ ಸಂಸ್ಥೆಗಳಿಗೆ ವಿದೇಶಿ ಬಂಡವಾಳದ ನೆರವು ದೊರಕುತ್ತಿದೆ. ಸಣ್ಣ ಪುಟ್ಟ ಅಂಗಡಿಗಳನ್ನು ನಿರ್ಮೂಲನೆ ಮಾಡುವ ಗುರಿ ಹೊಂದಿವೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಇ–ಕಾಮರ್ಸ್‌ ಕಂಪೆನಿಗಳ ಮಾರು­ಕಟ್ಟೆ ತಂತ್ರದಿಂದಾಗಿ ಅಂಗಡಿಗಳಿಗೆ ಗ್ರಾಹಕರು ಬರುತ್ತಿಲ್ಲ. ಈ ಕಂಪೆನಿಗಳು ಸ್ಪರ್ಧೆ ನಡೆಸಿದರೆ ಕೆಲವೇ ದಿನಗಳಲ್ಲಿ ಅಂಗಡಿಗೆ ಬಾಗಿಲು ಹಾಕಬೇಕಾಗುತ್ತದೆ. ಇಂತಹ ವಹಿವಾಟಿನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಾಣಿಜ್ಯ ತೆರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದು ಅವರು ತಿಳಿಸಿದರು.

ಎಐಟಿ ಅಧ್ಯಕ್ಷ ಎ. ಸತ್ಯಪ್ರಸಾದ್‌ ಮಾತನಾಡಿ, ‘ದಿನದಿಂದ ದಿನಕ್ಕೆ ಇ–ಕಾಮರ್ಸ್‌ ಕಂಪೆನಿಗಳ ರಿಯಾಯಿತಿ ಜಾಸ್ತಿ ಆಗುತ್ತದೆ. ಆನ್‌ಲೈನ್‌ ವಹಿವಾಟಿನಿಂದಾಗಿ ಅಂಗಡಿಗಳ ಮೇಲೆ ಈಗಾಗಲೇ ಹೊಡೆತ ಬಿದ್ದಿದೆ. ಅನೇಕ ಅಂಗಡಿಗಳು ಸಿಬ್ಬಂದಿಗಳ ಸಂಖ್ಯೆಯನ್ನು ಕಡಿಮೆ ಮಾಡಿವೆ. ಗಿರಾಕಿಗಳೇ ಬಾರದೆ ಇದ್ದಲ್ಲಿ ಸಿಬ್ಬಂದಿಯನ್ನು ಇಟ್ಟುಕೊಂಡು ನಾವೇನು ಮಾಡುವುದು’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.