ADVERTISEMENT

ಆರೋಪಿಗಳ ಕಾಲಿಗೆ ಪೊಲೀಸರ ಗುಂಡೇಟು

ಪಿಎಸ್‌ಐಗೆ ಚಾಕುವಿನಿಂದ ಇರಿದು ಪರಾರಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:34 IST
Last Updated 22 ಸೆಪ್ಟೆಂಬರ್ 2017, 19:34 IST
ಪೊಲೀಸರ ಗುಂಡೇಟಿನಿಂದ ಗಾಯಗೊಂಡ ಆರೋಪಿ
ಪೊಲೀಸರ ಗುಂಡೇಟಿನಿಂದ ಗಾಯಗೊಂಡ ಆರೋಪಿ   

ಬೆಂಗಳೂರು: ವಿದ್ಯಾರಣ್ಯಪುರ ಠಾಣೆಯ ಪಿಎಸ್‌ಐ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಕಳ್ಳತನದ ಆರೋಪಿಗಳಾದ ಅಶೋಕ (25) ಹಾಗೂ ನಾರಾಯಣಸ್ವಾಮಿ (32) ಎಂಬುವರ ಮೇಲೆ ಇನ್‌ಸ್ಪೆಕ್ಟರ್‌ ಪುನೀತ್‌ಕುಮಾರ್‌ ಗುಂಡು ಹಾರಿಸಿದ್ದಾರೆ.

ಆರೋಪಿಗಳಿಬ್ಬರ ಕಾಲಿಗೆ ಗುಂಡು ತಗುಲಿದ್ದು, ಅವರನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಪಿಎಸ್‌ಐ ಅಣ್ಣಯ್ಯ ಅವರು ಅದೇ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ಒಂದೇ ತಿಂಗಳಿನಲ್ಲಿ 20 ಅಂಗಡಿಗಳಲ್ಲಿ ಕಳ್ಳತನವಾಗಿತ್ತು. ಶೆಟರ್‌ ಮೀಟಿ ಒಳನುಗ್ಗಿದ್ದ ಕಳ್ಳರು, ನಗದು ಹಾಗೂ ಆಭರಣಗಳನ್ನು ಕದ್ದುಕೊಂಡು ಹೋಗಿದ್ದರು. ಅಂಗಡಿಯ ಮಾಲೀಕರು ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು’ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ADVERTISEMENT

‘ಇಬ್ಬರು ಆರೋಪಿಗಳು ಗುರುವಾರ ರಾತ್ರಿ ಮಾಡರ್ನ್‌ ಕ್ಲಿನಿಕ್‌ ಔಷಧಿ ಮಳಿಗೆಯ ಶೆಟರ್‌ ಮೀಟಿ ಒಳಗೆ ನುಗ್ಗಿದ್ದರು. ಆ ಬಗ್ಗೆ ಸ್ಥಳೀಯರೊಬ್ಬರು ನೀಡಿದ ಮಾಹಿತಿಯಂತೆ ಇನ್‌ಸ್ಪೆಕ್ಟರ್‌ ಪುನೀತ್‌ಕುಮಾರ್‌ ನೇತೃತ್ವದ ತಂಡವು ಸ್ಥಳಕ್ಕೆ ಹೋಗಿತ್ತು. ಮಳಿಗೆಯಿಂದ ಹೊರಬಂದ ಆರೋಪಿಗಳಿಗೆ ಶರಣಾಗುವಂತೆ ಹೇಳಿದ್ದರು. ಅದೇ ವೇಳೆ ಆರೋಪಿಗಳನ್ನು ಹಿಡಿದುಕೊಳ್ಳಲು ಹೋದ ಪಿಎಸ್‌ಐ ಅಣ್ಣಯ್ಯ ಅವರಿಗೆ ಚಾಕುವಿನಿಂದ ಇರಿದಿದ್ದರು. ಅವರು ಕುಸಿದು ಬೀಳುತ್ತಿದ್ದಂತೆ ಸ್ಥಳದಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಪ್ರಯತ್ನಿಸಿದ್ದರು.’

‘ಅವರನ್ನು ಬೆನ್ನಟ್ಟಿದ್ದ ಇನ್‌ಸ್ಪೆಕ್ಟರ್‌ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದರು. ಈ ವೇಳೆ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್‌, ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದರು. ಬಳಿಕ ಅವರನ್ನು ಪೊಲೀಸರೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ’ ಎಂದು ಹೇಳಿದರು.

‘ಆರೋಪಿಗಳ ವಿರುದ್ಧ ಕಳ್ಳತನ, ಹಲ್ಲೆ, ಹಲ್ಲೆಗೆ ಯತ್ನ ಪ್ರಕರಣಗಳು ದಾಖಲಾಗಿವೆ. ಅವರು ಸದ್ಯ ಆಸ್ಪತ್ರೆಯಲ್ಲಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಬಳಿಕ ಬಂಧಿಸಿ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಹಿರಿಯ ಅಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.