ADVERTISEMENT

ಆರ್ಥಿಕ ನೀತಿಗಳೇ ರೈತರ ಸಾವಿಗೆ ಕಾರಣ

ಬಹುಜನ ವಿದ್ಯಾರ್ಥಿ ಸಂಘದಿಂದ ರೈತರ ಆತ್ಮಹತ್ಯೆ ಕುರಿತು ದುಂಡು ಮೇಜಿನ ಚರ್ಚೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 20:12 IST
Last Updated 1 ಆಗಸ್ಟ್ 2015, 20:12 IST

ಬೆಂಗಳೂರು: ‘ಈವರೆಗೆ ಆಡಳಿತ ನಡೆಸಿದವರು ರೂಪಿಸಿದ ಆರ್ಥಿಕ ನೀತಿಗಳೇ ಇವತ್ತು ರೈತರನ್ನು ಸಂಕಷ್ಟಕ್ಕೆ ನೂಕಿವೆ. ಈ ಹಿಂದೆ ಅನುಕೂಲಕರವಾಗಿದ್ದ ರೈತರ ಬದುಕು ಇಂದು ಹಳಿತಪ್ಪಿದೆ. ಪರಿಣಾಮ   ರೈತ ಸಾವಿಗೆ ಶರಣಾಗುತ್ತಿದ್ದಾನೆ’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್‌. ಮಹೇಶ್‌ ಹೇಳಿದರು.

ಬಹುಜನ ವಿದ್ಯಾರ್ಥಿ ಸಂಘ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ರೈತರ ಆತ್ಮಹತ್ಯೆ: ಕಾರಣ, ಪರಿಣಾಮ ಮತ್ತು ಪರಿಹಾರ’ ಎಂಬ ವಿಷಯ ಕುರಿತ ದುಂಡು ಮೇಜಿನ ಚರ್ಚೆ ಉದ್ಘಾಟಿಸಿ ಅವರು ಮಾತನಾಡಿದರು.

‘ರೈತರ ಆತ್ಮಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ತುರ್ತಾಗಿ ಎಲ್ಲ ಬಗೆಯ ಸಾಂಸ್ಥಿಕ ಸಂಸ್ಥೆಗಳಿಂದ ರೈತರ ಸಾಲಗಳನ್ನು ಮನ್ನಾ ಮಾಡಬೇಕು. ಋಣಮುಕ್ತ ಕಾಯ್ದೆಯನ್ನು ಪುನಃ ಜಾರಿಗೆ ತರುವ ಮೂಲಕ ಲೇವಾದೇವಿ ಮತ್ತು ಇತರೆ ಸಾಲಗಾರರಿಂದ ರೈತರನ್ನು ಪಾರು ಮಾಡಬೇಕು’ ಎಂದು ಆಗ್ರಹಿಸಿದರು.

‘ಅಮೆರಿಕದಲ್ಲಿ ಶೇ 5 ಮತ್ತು ಜಪಾನ್‌ನಲ್ಲಿ ಶೇ 4 ರಷ್ಟು ಜನರು ಕೃಷಿ ಅವಲಂಬಿಸಿದ್ದಾರೆ. ಅಲ್ಲಿ ಅನುಕ್ರಮವಾಗಿ ಶೇ 26, ಶೇ 60 ಸಬ್ಸಿಡಿ ನೀಡಲಾಗುತ್ತಿದೆ. ಆದರೆ, ದೇಶದಲ್ಲಿ ಶೇ 60 ಜನ ಕೃಷಿಯಲ್ಲಿ ತೊಡಗಿದರೂ, ಕೇವಲ ಶೇ 2.33 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ವ್ಯಾಪಾರ ಸಂಘಟನೆ ಈ ಸಬ್ಸಿಡಿಯನ್ನೂ ತೆಗೆದು ಹಾಕುವಂತೆ ಸೂಚಿಸುತ್ತಿವೆ. ಇದು ಆತಂಕದ ವಿಷಯ’ ಎಂದು ಹೇಳಿದರು.

ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ‘ಮೇಲ್ನೊಟಕ್ಕೆ ಕಾಣುವಂತೆ ರೈತರದು ಆತ್ಮಹತ್ಯೆಯಲ್ಲ. ಅದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಪೋರೇಟ್ ಕುಳಗಳಿಗಾಗಿ ನಡೆಸುತ್ತಿರುವ ವ್ಯವಸ್ಥಿತ ಕೊಲೆ. ಈವರೆಗೆ ಆಡಳಿತ ನಡೆಸಿದ ಪಕ್ಷಗಳೇ ಈ ಕೊಲೆಯ ಆರೋಪಿಗಳು’ ಎಂದು ತಿಳಿಸಿದರು.

‘ಗ್ರಾಮೀಣ ಜನರನ್ನು ಒಕ್ಕಲೆಬ್ಬಿಸಿ, ಕೃಷಿ ಭೂಮಿಯನ್ನು ಕಾರ್ಪೋರೇಟ್‌ ಕುಳಗಳಿಗೆ ನೀಡುವ ಸಂಚು ಕಳೆದ ಮೂರ್ನಾಲ್ಕು ದಶಕಗಳಿಂದ ದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ. ಇದರ ಭಾಗವಾಗಿ ರೈತರಿಗೆ ಸಾಯಲೇ ಬೇಕಾದಂತಹ ಒತ್ತಡ ನಿರ್ಮಾಣ ಮಾಡುತ್ತ ಬರಲಾಗುತ್ತಿದೆ’ ಎಂದು ಆರೋಪಿಸಿದರು.

‘ದೇಶದಲ್ಲಿ ಕೃಷಿಯನ್ನೇ ಆಧರಿಸಿದ ಶೇ 75 ರಷ್ಟು  ಕೈಗಾರಿಕೆಗಳಿವೆ. ರಾಜ್ಯ ಮತ್ತು ಕೇಂದ್ರ ಸಂಗ್ರಹಿಸುವ ತೆರಿಗೆಯಲ್ಲಿ ಕೃಷಿಯದೇ ಸಿಂಹಪಾಲು. ದುರಂತವೆಂದರೆ, ಕೃಷಿ ಕುರಿತು ತಾತ್ಸಾರ ಭಾವನೆ ತೋರುತ್ತಿರುವ ಕೇಂದ್ರ ಸರ್ಕಾರ, ಕಳೆದ ಹತ್ತು ವರ್ಷದಲ್ಲಿ  ಕಾರ್ಪೋರೇಟ್‌ ವಲಯಕ್ಕೆ ₨45 ಲಕ್ಷ ಕೋಟಿ ಅನುದಾನ ನೀಡಿದೆ’ ಎಂದರು.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್‌ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಧಾನಿ ಮೋದಿ ರೈತರಿಗೆ ಶೂಲ ಭಾಗ್ಯ ಕೊಡುತ್ತಿದ್ದಾರೆ. ಕಳೆದ ಆರೇಳು ದಶಕಗಳಿಂದ ಭೂಹೀನರು ಭೂಮಿ ಕೇಳುತ್ತ ಬಂದರೂ ನೀಡಿಲ್ಲ. ಇದೀಗ ಅವರಿಗೆ ಅನ್ನಭಾಗ್ಯದ ಹೆಸರಿನಲ್ಲಿ ಅಕ್ಕಿ ನೀಡಲಾಗುತ್ತಿದೆ. ಒಂದೊಮ್ಮೆ, ಭೂಮಿ ಕೊಟ್ಟಿದ್ದರೆ ಜನರೇ ಸರ್ಕಾರಕ್ಕೆ ಅಕ್ಕಿ ಕೊಡುತ್ತಿದ್ದರು’ ಎಂದರು.
*
ರಾಜ್ಯದಲ್ಲಿ 89 ಲಕ್ಷ ಕೃಷಿ ಕುಟುಂಬಗಳ ಪೈಕಿ ಶೇ 29 ರಷ್ಟು ರೈತರಿಗೆ ಮಾತ್ರ ಸಾಂಸ್ಥಿಕ ಸಾಲ ದೊರೆಯುತ್ತಿದೆ. ಉಳಿದಂತೆ 50 ಲಕ್ಷ ರೈತರು ಖಾಸಗಿಯವರಿಂದ ಸಾಲ ಪಡೆಯುತ್ತಿದ್ದಾರೆ
-ಎನ್‌. ಮಹೇಶ್‌,
ಬಿಎಸ್‌ಪಿರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.