ADVERTISEMENT

ಆರ್‌ಬಿಐ ಕಚೇರಿಗೆ ಮುತ್ತಿಗೆ: ಬಂಧನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:58 IST
Last Updated 19 ಜನವರಿ 2017, 19:58 IST
ಕಾಂಗ್ರೆಸ್‌ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು   – ಪ್ರಜಾವಾಣಿ ಚಿತ್ರ
ಕಾಂಗ್ರೆಸ್‌ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ವಿರೋಧಿಸಿ ಗುರುವಾರ ಆರ್‌ಬಿಐ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್‌ ಮುಖಂಡರು ಸೇರಿ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು. ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಳಿಗ್ಗೆ ಸೇರಿದ್ದ ಕಾರ್ಯಕರ್ತರು, ಕೆಲ ಹೊತ್ತು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಗೃಹಸಚಿವ ಜಿ.ಪರಮೇಶ್ವರ್‌, ‘ನೋಟು ರದ್ದತಿಯಿಂದ ದೇಶದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡವರು, ಸಣ್ಣ ವ್ಯಾಪಾರಿಗಳು  ಆರ್ಥಿಕವಾಗಿ ಕುಗ್ಗಿದ್ದಾರೆ’ ಎಂದು ದೂರಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ  ಪೃಥ್ವಿರಾಜ್ ಚೌಹಾಣ್, ‘ಮೋದಿ ಅವರ ತಾಳಕ್ಕೆ ತಕ್ಕಂತೆ ಆರ್‌ಬಿಐ ಕುಣಿಯುತ್ತಿದೆ. ಪೂರ್ವ ಸಿದ್ಧತೆ ಇಲ್ಲದೆ ನೋಟು ರದ್ದು ಮಾಡಲಾಗಿದೆ. ಕಮಿಷನ್‌ ಆಧಾರದಲ್ಲಿ ನಗದುರಹಿತ ವ್ಯವಹಾರ ನಡೆಯುತ್ತಿದ್ದು, ಆ ಹಣವೆಲ್ಲ ಆರ್‌ಬಿಐ ಪಾಲಾಗುತ್ತಿದೆ. ಹೀಗಾಗಿ ಆರ್‌ಬಿಐ ಅಧಿಕಾರಿಗಳು ಮೌನವಾಗಿದ್ದಾರೆ’ ಎಂದು ಕಿಡಿಕಾರಿದರು.

ಸಭೆ ಬಳಿಕ ಮುಖಂಡರು ಹಾಗೂ ಕಾರ್ಯಕರ್ತರು, ಮೆರವಣಿಗೆ ಮೂಲಕ ನೃಪತುಂಗ ರಸ್ತೆಯಲ್ಲಿರುವ ಆರ್‌ಬಿಐ ಕಚೇರಿಯತ್ತ ಹೊರಟರು. ಈ ವೇಳೆ ಶೇಷಾದ್ರಿ ರಸ್ತೆಯಲ್ಲಿ ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ವಾಪಸ್‌ ಹೋಗುವಂತೆ ಮನವಿ ಮಾಡಿದರು.

ಅದಕ್ಕೆ ಸ್ಪಂದಿಸದಿದ್ದಾಗ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.