ADVERTISEMENT

ಆಸ್ಪತ್ರೆ ಎದುರು ಆಟೊ ಚಾಲಕನ ಹತ್ಯೆ

ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 20:01 IST
Last Updated 29 ಆಗಸ್ಟ್ 2016, 20:01 IST

ಬೆಂಗಳೂರು: ಗಲಾಟೆಯಲ್ಲಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಪಡೆಯಲು ಭಾನುವಾರ ತಡರಾತ್ರಿ ಕೆ.ಸಿ.ಜನರಲ್‌ ಆಸ್ಪತ್ರೆಗೆ ಹೋಗಿದ್ದ ಧರ್ಮ (28) ಎಂಬುವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

‘ಆಟೊ ಚಾಲಕರಾಗಿದ್ದ ಧರ್ಮ, ಪ್ರಕಾಶನಗರದಲ್ಲಿ ವಾಸವಿದ್ದರು. ಸ್ನೇಹಿತರೊಬ್ಬರಿಗೆ ಸಾಲ ಕೊಟ್ಟಿದ್ದ ಅವರು ವಸೂಲಿ ಮಾಡಲು ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿರುವ ಬಾರೊಂದರ ಬಳಿ ಹೋಗಿದ್ದರು’. 

‘ಆಟೊ ನಿಲುಗಡೆ ವಿಷಯವಾಗಿ ಬಾರ್‌ ಎದುರು ಗಲಾಟೆ ಆರಂಭವಾಗಿತ್ತು. ಆಗ ಕೆಲ ಯುವಕರು, ಧರ್ಮ ಅವರನ್ನು ಥಳಿಸಿದ್ದರು. ತಲೆ ಹಾಗೂ ಕೈಗೆ ಗಾಯವಾಗಿದ್ದರಿಂದ ಚಿಕಿತ್ಸೆ ಪಡೆಯಲು  ಕೆ.ಸಿ.ಜನರಲ್‌ ಆಸ್ಪತ್ರೆಗೆ ಹೋಗಿದ್ದರು. ಅವರನ್ನು ದುಷ್ಕರ್ಮಿಗಳು ಹಿಂಬಾಲಿಸಿದ್ದರು’ ಎಂದು ಮಲ್ಲೇಶ್ವರ ಪೊಲೀಸರು ತಿಳಿಸಿದರು.

‘ತಲೆ ಹಾಗೂ ಕೈಗೆ ಬ್ಯಾಡೇಜ್‌ ಹಾಕಿಸಿಕೊಂಡು ಆಸ್ಪತ್ರೆಯಿಂದ ಹೊರಬಂದ ಧರ್ಮ ಅವರೊಂದಿಗೆ ಪುನಃ ಜಗಳ ತೆಗೆದ ದುಷ್ಕರ್ಮಿಗಳು, ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದರು. ಈ ವೇಳೆ ರಕ್ತಸ್ರಾವವಾಗಿ ಅವರು ಸ್ಥಳದಲ್ಲಿ ಅಸುನೀಗಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಯಿತು. ಆರೋಪಿಗಳ ಪತ್ತೆಗೆ ಘಟನಾ ಸ್ಥಳದಲ್ಲಿರುವ ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.