ADVERTISEMENT

ಆಸ್ಪತ್ರೆ ಬಸ್‌ಗೆ ಬೆಂಕಿ: ಸಿಬ್ಬಂದಿ ಪಾರು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 20:05 IST
Last Updated 1 ಸೆಪ್ಟೆಂಬರ್ 2014, 20:05 IST

ಬೆಂಗಳೂರು: ಬಳ್ಳಾರಿ ರಸ್ತೆಯ ಕಾವೇರಿ ಜಂಕ್ಷನ್‌ ಬಳಿ ಸೋಮವಾರ ರಾತ್ರಿ  ಫೋರ್ಟಿಸ್‌ ಆಸ್ಪತ್ರೆಯ ಮಿನಿ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಸುಟ್ಟುಹೋಗಿದೆ.

ಸಂಜಯನಗರದ ಹಾಸ್ಟೆಲ್‌ನಿಂದ ರಾತ್ರಿ ಪಾಳಿಯ 20 ಮಂದಿ ನರ್ಸ್‌­ಗಳನ್ನು ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿರುವ ಆಸ್ಪತ್ರೆಗೆ  ಕರೆತರುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ 7.30ರ ಸುಮಾರಿಗೆ ಬಸ್‌ ಕಾವೇರಿ ಜಂಕ್ಷನ್‌ ಬಳಿ ಬರುತ್ತಿದ್ದಂತೆ ಎಂಜಿನ್‌ನಿಂದ ಹೊಗೆ ಬರಲಾ­ರಂಭಿಸಿದೆ. ಕೂಡಲೇ ವಾಹನ ನಿಲ್ಲಿಸಿದ ಚಾಲಕ ಬಸ್‌ನಲ್ಲಿದ್ದ ನರ್ಸ್‌ಗಳನ್ನು ಕೆಳಗೆ ಇಳಿಯುವಂತೆ ಹೇಳಿದ್ದಾರೆ. ನಂತರ ಇಡೀ ಬಸ್‌ಗೆ ಬೆಂಕಿ ಹತ್ತಿ­ಕೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.

ನರ್ಸ್‌ಗಳನ್ನು ಬೇರೆ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಲಾಯಿತು. ಬಸ್‌ನ್ನು  (ಕೆ.ಎ. 04 ಸಿ 403) ಐದು ವರ್ಷ­ದಿಂದ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆದೊ­ಯ್ಯಲು ಬಳಸಲಾಗುತ್ತಿತ್ತು.  ಶಾರ್ಟ್‌ ಸರ್ಕಿಟ್‌ನಿಂದ ವಾಹನದ ಎಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು  ತಿಳಿಸಿದ್ದಾರೆ.

ಬಸ್‌ನಲ್ಲಿದ್ದ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ ಒಂದು ವಾಹನ ದಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಿಬ್ಬಂದಿ ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸಿದರು. ಬಸ್‌ ರಸ್ತೆ ಮಧ್ಯೆ ನಿಂತಿದ್ದರಿಂದ 1 ಗಂಟೆಗಳ ಕಾಲ ದಟ್ಟಣೆ ಉಂಟಾಗಿತ್ತು. ಇದರಿಂದಾಗಿ ಸವಾರರು ಪರದಾಡಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.