ADVERTISEMENT

ಆ.15ಕ್ಕೆ 125 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭ

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 20:34 IST
Last Updated 21 ಜುಲೈ 2017, 20:34 IST
ಆ.15ಕ್ಕೆ 125 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭ
ಆ.15ಕ್ಕೆ 125 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭ   

ಬೆಂಗಳೂರು: ಮಹಾನಗರಪಾಲಿಕೆಯ 125 ವಾರ್ಡ್‌ಗಳಲ್ಲಿ ಆ.15ರಂದು ಇಂದಿರಾ ಕ್ಯಾಂಟೀನ್ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ  ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

‘106 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳು ಸಿದ್ಧವಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಆದರೆ,  125 ವಾರ್ಡ್‌ಗಳಲ್ಲಿ ಕ್ಯಾಂಟೀನ್ ಆರಂಭ ಆಗಬೇಕೆಂದು  ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

ADVERTISEMENT

ಜಾಗದ ಸಮಸ್ಯೆ ಇರುವ 73 ವಾರ್ಡ್‌ಗಳಲ್ಲಿ ಅಕ್ಟೋಬರ್‌ 2ರಂದು  ಕ್ಯಾಂಟೀನ್‌ಗಳು ಆರಂಭವಾಗಲಿವೆ. 28   ಅಡುಗೆ ಮನೆಗಳನ್ನು ತೆರೆಯಬೇಕಿದ್ದು, ಈ ಪೈಕಿ 21 ಅಡುಗೆ ಮನೆಗಳ ಕೆಲಸ ಮುಗಿದಿದೆ’ ಎಂದು ಅವರು ಹೇಳಿದರು.

‘ಒಂದು ಕ್ಯಾಂಟೀನ್‌ಗೆ 900 ಚದರ ಅಡಿ ಜಾಗ ಸಾಕೆಂದು ಅಂದಾಜಿಸಿದ್ದೆವು. ಆದರೆ, 1,500 ಚದರ ಅಡಿ ಜಾಗ ಅಗತ್ಯವಿದೆ. ಕೆಲವು ಕಡೆ ಕಿರಿದಾದ ರಸ್ತೆಗಳಿರುವ ಕಾರಣ ಲಾರಿ ಮತ್ತು ಕ್ರೇನ್‌ಗಳು ಸ್ಥಳಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಳಂಬವಾಗಿದೆ’ ಎಂದು ಅವರು ಹೇಳಿದರು.

‘ನಿಮ್ಹಾನ್ಸ್‌ಗೆ ಸೇರಿಸಬೇಕು’

‘ಇಂದಿರಾ ಕ್ಯಾಂಟೀನ್‌ ಯೋಜನೆಯಲ್ಲಿ  ಸಿವಿಲ್‌ ಕಾಮಗಾರಿ₹73 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಇದರಲ್ಲಿ ₹65 ಕೋಟಿ ಅವ್ಯವಹಾರ ಆಗಿದೆ ಎಂದರೆ ನಂಬುವುದು ಹೇಗೆ’ ಎಂದುಕೆ.ಜೆ. ಜಾರ್ಜ್‌ ಪ್ರಶ್ನಿಸಿದರು.

‘ಕೆಲವರು ಆಧಾರರಹಿತ ಆರೋಪ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ. ಅಂತಹವರನ್ನು ನಿಮ್ಹಾನ್ಸ್‌ಗೆ ಸೇರಿಸುವುದು ಸೂಕ್ತ’ ಎಂದು ಅವರು ಸಲಹೆ ನೀಡಿದರು. ಸರ್ಕಾರಕ್ಕೆ ಒಳ್ಳೆ ಹೆಸರುಬರುವ ಯೋಜನೆಗಳಿಗೆ ಅಡಚಣೆ ಮಾಡುವುದು ಸ್ವಾಭಾವಿಕ. ಇದು ರಾಜಕೀಯ ದುರುದ್ದೇಶದ ಆರೋಪ ಎಂದು ಆಹಾರ ಸಚಿವಯು.ಟಿ. ಖಾದರ್‌ ಹೇಳಿದರು.

ಬಹಿರಂಗ ಸವಾಲು

‘ಇಂದಿರಾ ಕ್ಯಾಂಟೀನ್‌ ಯೋಜನೆಯಲ್ಲಿ ಅವ್ಯವಹಾರ ನಡೆದಿರುವುನ್ನು ಸಾಬೀತು ಮಾಡಲಿ, ಇದು ಬಹಿರಂಗ ಸವಾಲು’ ಎಂದು ಬಿಬಿಎಂಪಿ (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ) ಆಯುಕ್ತ ಎನ್‌. ಮಂಜುನಾಥ ಪ್ರಸಾದ್ ಪ್ರತಿಕ್ರಿಯಿಸಿದರು. ಯೋಜನೆಯ ಸಂಪೂರ್ಣ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅವ್ಯವಹಾರ ನಡೆದಿದೆ ಎಂಬುದು ಸುಳ್ಳು ಆರೋಪ ಎಂದು ಹೇಳಿದರು.

ಮುಖ್ಯಾಂಶಗಳು

* 73 ವಾರ್ಡ್‌ಗಳಲ್ಲಿ ಜಾಗದ ಸಮಸ್ಯೆಯಿಂದ ವಿಳಂಬ
*  ಗಾಂಧಿ ಜಯಂತಿಯಂದು ಉಳಿದ ಕ್ಯಾಂಟೀನ್‌ಗಳು ಆರಂಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.