ADVERTISEMENT

ಇಂಗ್ಲಿಷ್‌ನಷ್ಟೇ ಸಂಸ್ಕೃತವೂ ಜನಪ್ರಿಯ ಭಾಷೆ: ಅನಂತಕುಮಾರ್

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 19:44 IST
Last Updated 19 ನವೆಂಬರ್ 2017, 19:44 IST
ಸಮ್ಮೇಳನ ಸಮಿತಿ ಅಧ್ಯಕ್ಷ ಎಂ.ನರಸಿಂಹನ್ ಅವರೊಂದಿಗೆ ಅನಂತಕುಮಾರ್ ಮಾತುಕತೆ ನಡೆಸಿದರು. ನರಸಿಂಹಲು ಶ್ರೇಷ್ಠಿ, ಡಿ.ಎಚ್.ಶಂಕರಮೂರ್ತಿ ಹಾಗೂ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ಇದ್ದರು. –ಪ್ರಜಾವಾಣಿ ಚಿತ್ರ
ಸಮ್ಮೇಳನ ಸಮಿತಿ ಅಧ್ಯಕ್ಷ ಎಂ.ನರಸಿಂಹನ್ ಅವರೊಂದಿಗೆ ಅನಂತಕುಮಾರ್ ಮಾತುಕತೆ ನಡೆಸಿದರು. ನರಸಿಂಹಲು ಶ್ರೇಷ್ಠಿ, ಡಿ.ಎಚ್.ಶಂಕರಮೂರ್ತಿ ಹಾಗೂ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ಇದ್ದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜಗತ್ತಿನ 270 ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಭಾಷೆಯ ಅಧ್ಯಯನ ನಡೆಯುತ್ತಿದೆ. ಇಂಗ್ಲಿಷ್‌ ನಂತರ ಅತಿ ಹೆಚ್ಚು ಜನರು ಸಂಸ್ಕೃತ ಅಭ್ಯಾಸ ಮಾಡುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದರು.

ಸಂಸ್ಕೃತ ಭಾರತೀ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸಂಸ್ಕೃತ ಗಂಗಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ದೇಶದಲ್ಲಿ ಬೇರೆ ಭಾಷೆಗಳ ಅಧ್ಯಯನಕ್ಕಾಗಿ ಒಂದೊಂದೇ ವಿಶ್ವವಿದ್ಯಾಲಯವಿದೆ. ಆದರೆ, ಸಂಸ್ಕೃತ ಭಾಷೆಯೊಂದಕ್ಕೇ 16 ವಿಶ್ವವಿದ್ಯಾಲಯಗಳಿವೆ. ಈ ಮೂಲಕ ಸಂಸ್ಕೃತದ ಶ್ರೀಮಂತಿಕೆಯ ಅರಿವಾಗುತ್ತದೆ’ ಎಂದರು.

ADVERTISEMENT

‘ಸಂಸ್ಕೃತವನ್ನು ರಾಜಭಾಷೆಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಡಾ. ಬಿ.ಆರ್. ಅಂಬೇಡ್ಕರ್ ಅವರು 1949ರಲ್ಲಿ ಸಂಸತ್‌ನಲ್ಲಿ ಸಂಸ್ಕೃತದಲ್ಲಿಯೇ ಭಾಷಣ ಮಾಡಿದ್ದರು’ ಎಂದು ವಿವರಿಸಿದರು.

45 ಲಕ್ಷ ಸಂಸ್ಕೃತ ತಾಳೆ ಗ್ರಂಥ: ‘ದೇಶದ 4 ಸಾವಿರ ಗ್ರಂಥಾಲಯಗಳಲ್ಲಿ 45 ಲಕ್ಷ ಸಂಸ್ಕೃತ ತಾಳೆಗರಿಗಳ ಸಂಗ್ರಹವಿದೆ. ಆ ತಾಳೆಗರಿಯಲ್ಲಿರುವ ಮೀಮಾಂಸೆ, ಪುರಾಣ, ಕಾವ್ಯ ಪ್ರಕಾರಗಳನ್ನು ಗಣಕೀಕರಣಗೊಳಿಸಿದ ಹೆಗ್ಗಳಿಕೆ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ’ ಎಂದರು.

ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ‘45 ವರ್ಷಗಳ ಹಿಂದೆ ಇಂಗ್ಲಿಷ್‌ ಭಾಷೆಯ ಪ್ರಭಾವವನ್ನು ತಗ್ಗಿಸಲು ಹಿಂದಿ ಹೇರಿಕೆಯನ್ನು ಪ್ರಾರಂಭಿಸಿದರು. ಹಿಂದಿಯನ್ನು ಈ ರಾಷ್ಟ್ರದ, ರಾಜ್ಯದ ಭಾಷೆಯನ್ನಾಗಿ ಮಾಡಬೇಕೆಂದು ಸಾಕಷ್ಟು ಪ್ರಯತ್ನ ಮಾಡಲಾಯಿತು. ಅದನ್ನು ವಿರೋಧಿಸಿ ಸಾಕಷ್ಟು ಪ್ರತಿಭಟನೆಗಳು ನಡೆದವು’ ಎಂದು ತಿಳಿಸಿದರು.

‘ಅದರ ಪರಿಣಾಮ ಈಗ ಎಲ್ಲಾ ರಾಜ್ಯದ ಭಾಷೆಗಳಿಗೂ ತೊಂದರೆ ಎದುರಾಗಿದೆ. ಕನ್ನಡದ ಪರಿಸ್ಥಿತಿಯಂತೂ ಚಿಂತಾಜನಕವಾಗಿದೆ. ಕನ್ನಡ ಕಲಿಯಿರಿ, ಕನ್ನಡದ ಶಾಲೆಗಳಿಗೆ ಕಳುಹಿಸಿ ಎಂದು ಕೋರುವ ಸ್ಥಿತಿಗೆ ಬಂದಿದ್ದೇವೆ’ ಎಂದರು.

‘ಚರಿತ್ರೆ, ಭಾಷೆ, ಸಂಗೀತ, ವೈಜ್ಞಾನಿಕ ಪರಂಪರೆ... ಹೀಗೆ ಭಾರತದ ಭವ್ಯತೆ ಹೇಗಿತ್ತು ಎನ್ನುವುದನೇ ನಾವು ಮರೆತಿದ್ದೇವೆ, ಈಗ ಹೇಗಿದ್ದೇವೆ ಎಂಬ ಬಗ್ಗೆ ಚರ್ಚಿಸುತ್ತಿಲ್ಲ, ಮುಂದಿನ ನಡೆಯೂ ತಿಳಿದಿಲ್ಲ. ಒಟ್ಟಿನಲ್ಲಿ ಅತಂತ್ರವಾಗಿ ಬದುಕುತ್ತಿದ್ದೇವೆ’ ಎಂದು ಅಭಿಪ್ರಾಯಪಟ್ಟರು.

ಗಾಂಧಿ ಕೇಂದ್ರದ ನಿರ್ದೇಶಕ ಪ್ರೊ. ಎಸ್‌. ಬಾಲಚಂದ್ರ ರಾವ್‌ ಅವರು ‘ಸಂಸ್ಕೃತದ ಪುಸ್ತಕಗಳಲ್ಲಿ ಖಗೋಳದ ವಿಷಯಗಳು’ ಕುರಿತು ಮಾತನಾಡಿದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆರಾಧನಾ ಆನಂದ್‌ ‘ಸಿದ್ಧಾಂತ ಶಿರೋಮಣಿ’ಯ ಆಯ್ದ ಭಾಗಗಳನ್ನು ವಾಚನ ಮಾಡಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.