ADVERTISEMENT

ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಏಳು ವರ್ಷಗಳ ಹಿಂದೆ ನಡೆದಿದ್ದ ಮಹಿಳೆ ಕೊಲೆ ಪ್ರಕರಣ * 23 ಬಾರಿ ಚಾಕುವಿನಿಂದ ಇರಿತ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 19:48 IST
Last Updated 3 ಡಿಸೆಂಬರ್ 2016, 19:48 IST
ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ   

ಬೆಂಗಳೂರು: ರಾಜಾಜಿನಗರದಲ್ಲಿ ವಾಸವಿದ್ದ ರಾಜಸ್ತಾನ ಮೂಲದ ಸೀಮಾ (34) ಎಂಬುವರನ್ನು 23 ಬಾರಿ ಚಾಕುವಿನಿಂದ ಇರಿದು ಕೊಲೆಗೈದಿದ್ದ ಕಮರ್ಷಿಯಲ್‌ ಸ್ಟ್ರೀಟ್‌ನ ಮಹಮ್ಮದ್ ಆಸೀಫ್‌ (32) ಹಾಗೂ ಆತನ ಸ್ನೇಹಿತ ಇಮ್ರಾನ್‌ (28) ಎಂಬಾತನಿಗೆ ಜೀವಾವಧಿ ಶಿಕ್ಷೆ  ವಿಧಿಸಿ ನಗರದ 70ನೇ ಸಿಟಿ ಸಿವಿಲ್‌ ನ್ಯಾಯಾಲಯವು ಶನಿವಾರ ಆದೇಶ ಹೊರಡಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರಾಮಲಿಂಗೇಗೌಡ, ಆರೋಪಿಗಳ ಮೇಲಿನ ಆರೋಪಗಳು ಸಾಬೀತಾಗಿದ್ದರಿಂದ ಜೀವಾವಧಿ ಶಿಕ್ಷೆ  ಹಾಗೂ ತಲಾ ₹3 ಸಾವಿರ ದಂಡ ವಿಧಿಸಿ ಆದೇಶಿಸಿದರು.

ಸರ್ಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಚ್‌.ಆರ್‌.ಸತ್ಯವತಿ ಅವರು ವಾದ ಮಂಡಿಸಿದ್ದರು.

ADVERTISEMENT

ಆಗಿದ್ದೇನು?: ಉದ್ಯಮಿಯೊಬ್ಬರನ್ನು ಮದುವೆಯಾಗಿ ನಗರಕ್ಕೆ ಬಂದಿದ್ದ ಸೀಮಾ,  ರಾಜಾಜಿನಗರದ ಬಾಡಿಗೆ ಮನೆಯಲ್ಲಿ ನಾಲ್ವರು ಮಕ್ಕಳೊಂದಿಗೆ ವಾಸವಿದ್ದರು.

ಬ್ಲೌಸ್‌ ಹೊಲಿಸಲೆಂದು ಸೀಮಾ, ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿದ್ದ  ಮಹಮ್ಮದ್‌್ ಆಸೀಫ್‌ನ ಟೇಲರ್‌  ಅಂಗಡಿಗೆ ಹೋಗಿದ್ದರು. ಈ ವೇಳೆ ಅವರಿಬ್ಬರ ಮಧ್ಯೆ ಪರಿಚಯವಾಗಿತ್ತು. ಬಳಿಕ ಮಹಮ್ಮದ್, ಸೀಮಾ ಮನೆಗೆ ಆಗಾಗ ಬಂದು ಹೋಗುತ್ತಿದ್ದರು’ ಎಂದು ತನಿಖಾಧಿಕಾರಿ ತಿಳಿಸಿದರು.

‘ಸೀಮಾ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಇರುವುದನ್ನು ತಿಳಿದುಕೊಂಡ ಆಸೀಫ್‌, ತನ್ನ ಸ್ನೇಹಿತ ಇಮ್ರಾನ್‌ ಮೂಲಕ ಅವುಗಳನ್ನು ದೋಚಲು ಸಂಚು ರೂಪಿಸಿದ್ದ. ಅದರಂತೆ  ಅವರಿಬ್ಬರು 2009ರ ನವೆಂಬರ್‌ 21ರಂದು ಮನೆಗೆ ಹೋಗಿದ್ದರು’.

‘ಆಸೀಫ್‌ ಜತೆ ಮಾತನಾಡುತ್ತಿರುವಾಗಲೇ ಸೀಮಾ ಅವರ ಬಾಯಿಯನ್ನು  ಇಮ್ರಾನ್‌ ಬಟ್ಟೆಯಿಂದ ಮುಚ್ಚಿದ್ದ. ಆಗ ಆಸೀಫ್‌,  ಚಾಕುವಿನಿಂದ ದೇಹದ 23 ಕಡೆ ಇರಿದಿದ್ದ. ಸ್ಥಳದಲ್ಲೇ ಕುಸಿದು ಬಿದ್ದು ಸೀಮಾ ಮೃತಪಟ್ಟಿದ್ದರು. ಬಳಿಕ ಮನೆಯ ಬೀರುವಿನಲ್ಲಿದ್ದ ₹7 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹20 ಸಾವಿರ ನಗದು ದೋಚಿ ಪರಾರಿಯಾಗಿದ್ದರು’ ಎಂದು ವಿವರಿಸಿದರು.

ರಕ್ತಸಿಕ್ತ ಬಟ್ಟೆ ಸುಟ್ಟರು: ‘ಮನೆಯಿಂದ ಹೊರಬಂದ ಆರೋಪಿಗಳು, ದಾರಿ ಮಧ್ಯೆ ಸಿಕ್ಕಿದ್ದ ಕಾಲುವೆಯಲ್ಲಿ ಚಾಕು ಎಸೆದಿದ್ದರು. ಜತೆಗೆ ರಕ್ತಸಿಕ್ತವಾದ ಬಟ್ಟೆ ಹಾಗೂ ಶೂವನ್ನು ಕಾಲುವೆ ಪಕ್ಕವೇ ಪೆಟ್ರೋಲ್‌ ಸುರಿದು ಸುಟ್ಟು ಹಾಕಿದ್ದರು’ ಎಂದು ತನಿಖಾಧಿಕಾರಿ ತಿಳಿಸಿದರು.

‘ತನ್ನ ಮನೆಗೆ ಸಂಜೆ ಹೋದ ಆಸೀಫ್‌,  ಚಿನ್ನಾಭರಣವನ್ನು ಪೊಟ್ಟಣದಲ್ಲಿ ಕಟ್ಟಿ ನೀರಿನ ಸಂಪಿನಲ್ಲಿ ಹಾಕಿದ್ದ. ಹಲವು ದಿನಗಳವರೆಗೆ ಪೊಟ್ಟಣವು ನೀರಿನಲ್ಲೇ ಇತ್ತು’ ಎಂದು ವಿವರಿಸಿದರು.

ಮನೆಗೆ ಬಾರದಿದ್ದರಿಂದ ಅನುಮಾನ: ಸೀಮಾ ಜತೆ ಆಸೀಫ್‌ ಒಡನಾಟವಿಟ್ಟುಕೊಂಡಿದ್ದ ವಿಷಯ ಪತಿಗೂ ಗೊತ್ತಿತ್ತು. ಅಂತ್ಯಕ್ರಿಯೆ ಹಾಗೂ ಅದಾದ ನಂತರ ಆಸೀಫ್‌, ಮನೆಗೆ ಹೋಗುವುದನ್ನು ನಿಲ್ಲಿಸಿದ್ದ. ಅದರಿಂದ ಅನುಮಾನಗೊಂಡ ಪತಿಯು ಪೊಲೀಸರಿಗೆ ಮಾಹಿತಿ ನೀಡಿದ್ದರು.

‘ಆರಂಭದಲ್ಲಿ ಕೊಲೆ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಪತಿ ನೀಡಿದ ಮಾಹಿತಿ ಆಧರಿಸಿ ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು. ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು’ ಎಂದು ರಾಜಾಜಿನಗರ ಪೊಲೀಸರು ತಿಳಿಸಿದರು.

ಬಟ್ಟೆ ಅಂಗಡಿಯಲ್ಲಿ ನಷ್ಟ:‘ಸೀಮಾ ಹಾಗೂ  ಆರೋಪಿ ಆಸೀಫ್‌, ಪಾಲುದಾರಿಕೆಯಲ್ಲಿ ಬಟ್ಟೆ ಅಂಗಡಿ ತೆರೆದಿದ್ದರು. ವ್ಯಾಪಾರದಲ್ಲಿ ನಷ್ಟ ಉಂಟಾಗಿ ತಲಾ ₹1 ಲಕ್ಷ ಕಳೆದುಕೊಂಡಿದ್ದರು’

‘ಅದರಿಂದಾಗಿ ಆಸೀಫ್‌, ಆರ್ಥಿಕ ತೊಂದರೆಗೆ ಸಿಲುಕಿದ್ದ. ಹೀಗಾಗಿಯೇ ಸೀಮಾ ಅವರನ್ನು ಕೊಲೆ ಮಾಡಿ ಅವರ ಬಳಿಯ ಚಿನ್ನಾಭರಣ ಹಾಗೂ ನಗದು ದೋಚಲು ಮುಂದಾಗಿದ್ದ’ ಎಂದು ವಿವರಿಸಿದರು.

ದಿನಕ್ಕೆ ಹತ್ತಕ್ಕೂ ಹೆಚ್ಚು ಬಾರಿ ಕರೆ
‘ಆರೋಪಿ ಆಸೀಫ್‌, ಸೀಮಾ ಮೊಬೈಲ್‌ಗೆ ದಿನಕ್ಕೆ 10ಕ್ಕೂ ಹೆಚ್ಚು ಬಾರಿ ಕರೆ ಮಾಡುತ್ತಿದ್ದ. ಕರೆ ವಿವರ ಸಂಗ್ರಹಿಸಿದಾಗ ವಿಷಯ ಗೊತ್ತಾಯಿತು’ ಎಂದು ತನಿಖಾಧಿಕಾರಿ ತಿಳಿಸಿದರು.

‘ಕೊಲೆ ನಡೆಯುವುದಕ್ಕೂ  ಮುನ್ನಾದಿನ ತಡರಾತ್ರಿಯವರೆಗೂ ಸೀಮಾ ಅವರಿಗೆ 15 ಬಾರಿ ಕರೆ ಮಾಡಿದ್ದ. ಪತಿ ಅಂಗಡಿಗೆ ಹಾಗೂ ಮಕ್ಕಳು ಶಾಲೆಗೆ ಹೋಗಿದ್ದನ್ನು ಸೀಮಾ ಅವರಿಂದಲೇ ತಿಳಿದುಕೊಂಡು ಮನೆಗೆ ಹೋಗಿ ಕೃತ್ಯ ಎಸಗಿದ್ದ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.