ADVERTISEMENT

ಉಕ್ಕಿನ ಸೇತುವೆ: ಬಿಡಿಎ ಸಭೆ ಒಪ್ಪಿಗೆ

ಪಾದಚಾರಿ ಮಾರ್ಗ, ಸೈಕಲ್‌ ಸವಾರರಿಗೆ ಪ್ರತ್ಯೇಕ ಪಥ ನಿರ್ಮಿಸಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2016, 19:30 IST
Last Updated 20 ಅಕ್ಟೋಬರ್ 2016, 19:30 IST
ಉಕ್ಕಿನ ಸೇತುವೆ: ಬಿಡಿಎ ಸಭೆ ಒಪ್ಪಿಗೆ
ಉಕ್ಕಿನ ಸೇತುವೆ: ಬಿಡಿಎ ಸಭೆ ಒಪ್ಪಿಗೆ   

ಬೆಂಗಳೂರು: ಬಸವೇಶ್ವರ ವೃತ್ತದಿಂದ ಹೆಬ್ಬಾಳ ಎಸ್ಟೀಮ್‌ ಮಾಲ್‌ವರೆಗೆ ಉಕ್ಕಿನ ಸೇತುವೆ ನಿರ್ಮಿಸುವ  ಯೋಜನೆಗೆ ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಗುರುವಾರ ಒಪ್ಪಿಗೆ ನೀಡಲಾಗಿದೆ.

‘ಕಾಮಗಾರಿ ಸಂದರ್ಭದಲ್ಲಿ ಸಂಚಾರ ದಟ್ಟಣೆ ಉಂಟಾಗುವುದನ್ನು ತಡೆಯಲು ಕ್ರಮ ಕೈಗೊಳಬೇಕು. ಕಾಮಗಾರಿಗೆ ಬೇಕಾದ ಸಾಮಗ್ರಿಗಳನ್ನು ರಾತ್ರಿ ವೇಳೆಯೇ  ಸಾಗಿಸಬೇಕು. ಈ ಯೋಜನೆಯ ಗುತ್ತಿಗೆ ಪಡೆದಿರುವ ಎಲ್‌ ಆ್ಯಂಡ್ ಟಿ ಕಂಪೆನಿಗೆ ಕೆಲವು ಷರತ್ತು ವಿಧಿಸಿ ಕಾರ್ಯಾದೇಶ ನೀಡಬಹುದು’ ಎಂದು ಬಿಡಿಎ ಅಧ್ಯಕ್ಷ ಮಹೇಂದ್ರ ಜೈನ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಾರ್ವಜನಿಕರ ಸಂದೇಹ ಬಗೆಹರಿಸಿ: ‘ಈ ಯೋಜನೆಗೆ ಈಗಾಗಲೇ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಹಾಗಾಗಿ ಯೋಜನೆ ಕೈಬಿಡುವ ಬಗ್ಗೆ ಬಿಡಿಎ ಸಭೆಯಲ್ಲಿ ಚರ್ಚಿಸಲು ಸಾಧ್ಯವಿಲ್ಲ. ಆದರೆ   ಈ ಯೋಜನೆ ಕುರಿತು ಸಾರ್ವಜನಿಕರಲ್ಲಿ ಗೊಂದಲಗಳಿವೆ. ಅವುಗಳನ್ನು ಬಗೆಹರಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು  ಸೂಚಿಸಲಾಗಿದೆ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

80 ಸಾವಿರ ಸಸಿ  ನೆಡಲು ತೀರ್ಮಾನ: ‘ಉಕ್ಕಿನ ಸೇತುವೆಗಾಗಿ ಕಡಿಯುವ 812 ಮರಗಳಿಗೆ ಪ್ರತಿಯಾಗಿ  60 ಸಾವಿರ ಸಸಿಗಳನ್ನು ಬೆಳೆಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಒಂದು ಮರ ಕಡಿದರೆ ಅದಕ್ಕೆ ಪ್ರತಿಯಾಗಿ 100 ಸಸಿಗಳನ್ನು ನೆಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.  ಅದರಂತೆ ಒಟ್ಟು  80 ಸಾವಿರ ಸಸಿಗಳನ್ನು ಬೆಳೆಸಲು ನಿರ್ಧಾರ ಕೈಗೊಂಡಿದ್ದೇವೆ’ ಎಂದು ಅವರು ತಿಳಿಸಿದರು.

ಸೈಕಲ್‌ಗೆ ಪ್ರತ್ಯೇಕ ಪಥ: ಉಕ್ಕಿನ ಸೇತುವೆ ನಿರ್ಮಾಣದ ಜೊತೆಗೆ ಈಗಿರುವ ರಸ್ತೆಯನ್ನೂ ಅಭಿವೃದ್ಧಿಪಡಿಸಬೇಕು. ಅದರಲ್ಲಿ ಪಾದಚಾರಿ ಮಾರ್ಗ ಹಾಗೂ ಸೈಕಲ್‌ ಸವಾರರಿಗೆ ಪ್ರತ್ಯೇಕ ಪಥವನ್ನು ಗೊತ್ತುಪಡಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗಿದೆ.

‘ಉಕ್ಕಿನ ಸೇತುವೆಯ ವೆಚ್ಚವನ್ನು ಬಿಡಿಎ ಭರಿಸಬೇಕಾಗಿದೆ. ಅದಕ್ಕೆ ಹಣ ಹೊಂದಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿಲ್ಲ’ ಎಂದು ಇನ್ನೊಬ್ಬ ಸದಸ್ಯ ತಿಳಿಸಿದರು.

ಬಿಡಿಎ ಆಯುಕ್ತ ರಾಜಕುಮಾರ್‌ ಖತ್ರಿ, ಉಪಾಯುಕ್ತ ಲಿಂಗಮೂರ್ತಿ, ಕಾರ್ಯದರ್ಶಿ ಬಸವರಾಜ್‌, ಶಾಸಕರಾದ ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜು, ಸದಸ್ಯ ಜಗದೀಶ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ರಾಜ್ಯಪಾಲರ ಮೊರೆಗೆ ನಿರ್ಧಾರ
ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ಉಕ್ಕಿನ ಸೇತುವೆ ನಿರ್ಮಿಸಲು ಮುಂದಾಗಿರುವ ಬಿಡಿಎ ಕ್ರಮದ ಬಗ್ಗೆ ರಾಜ್ಯಪಾಲ ವಜುಬಾಯಿ ವಾಲಾ ಅವರಿಗೆ ದೂರು ನೀಡಲು ‘ಉಕ್ಕಿನ ಸೇತುವೆ ವಿರೋಧಿ ನಾಗರಿಕರು’  ಸಂಘಟನೆ ಮುಂದಾಗಿದೆ.

‘ಶುಕ್ರವಾರ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ಉಕ್ಕಿನ ಸೇತುವೆ ಬಗ್ಗೆ ಸಾರ್ವಜನಿಕರು ಎದುರಿಸುತ್ತಿರುವ ಸಂದೇಹಗಳನ್ನು ಹಾಗೂ ಈ ಯೋಜನೆ ಅನುಷ್ಠಾನಗೊಳಿಸುವ ವಿಚಾರದಲ್ಲಿ ಸರ್ಕಾರ ಹಾಗೂ ಬಿಡಿಎ ನಡೆದುಕೊಂಡ ರೀತಿಯನ್ನು ಅವರ ಗಮನಕ್ಕೆ ತರುತ್ತೇವೆ. ಈ ಯೋಜನೆ ತಡೆಯಲು ಮಧ್ಯಪ್ರವೇಶ ಮಾಡುವಂತೆ ಒತ್ತಾಯಿಸುತ್ತೇವೆ’ ಎಂದು ಸಂಘಟನೆಯ ಸಂಚಾಲಕ ಶ್ರೀನಿವಾಸ ಅಲವಿಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮನೆಮನೆ ಭೇಟಿ ಚುರುಕು: ಉಕ್ಕಿನ ಸೇತುವೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನಾಭಿಪ್ರಾಯ ರೂಪಿಸುವ ಸಲುವಾಗಿ ಸಂಘಟನೆಯ 150ಕ್ಕೂ ಅಧಿಕ ಸ್ವಯಂಸೇವಕರು ನಗರದ ವಿವಿಧ ಕಡೆ ಮನೆ ಮನೆಗೆ ತೆರಳಿ ಮನವರಿಕೆ ಮಾಡಿದರು. ‘ಜಯನಗರ, ಬಸವನಗುಡಿ, ಸಿ.ವಿರಾಮನ್‌ ನಗರ, ವಸಂತನಗರ, ಶಾಂತಿನಗರ, ಮಲ್ಲೇಶ್ವರ ಮತ್ತಿತರ ಕಡೆಗಳಲ್ಲಿ ಮನೆಮನೆಗೆ ತೆರಳಿ, ಉಕ್ಕಿನ ಸೇತುವೆ ಬಗ್ಗೆ ಜನರಿಗೆ ವಿವರಿಸಿದ್ದೇವೆ. ಕೆಲವು ಕಡೆ ಕಚೇರಿಗಳಿಗೆ ತೆರಳಿ, ಸಿಬ್ಬಂದಿಯ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಸ್ವಯಂಸೇವಕರೊಬ್ಬರು ತಿಳಿಸಿದರು. 

ADVERTISEMENT

ಯೋಜನೆಗೆ ಕಾಂಗ್ರೆಸ್‌ ಬೆಂಬಲ
ಬೆಂಗಳೂರು:
ಉಕ್ಕಿನ ಸೇತುವೆ ನಿರ್ಮಿಸುವ ರಾಜ್ಯ ಸರ್ಕಾರದ ಯೋಜನೆಗೆ ಕಾಂಗ್ರೆಸ್‌ ಪಕ್ಷ ಬೆಂಬಲ ವ್ಯಕ್ತಪಡಿಸಿದೆ. ಬೆಂಗಳೂರು ಉತ್ತರ ಭಾಗದಲ್ಲಿ ಸಂಚಾರ ಒತ್ತಡ ಕಡಿಮೆ ಮಾಡಲು ಉಕ್ಕಿನ ಸೇತುವೆ ಅಗತ್ಯವಿದೆ. ಹೀಗಾಗಿ ಸರ್ಕಾರದ ನಿರ್ಧಾರಕ್ಕೆ ಪಕ್ಷದ ಸಹಮತವೂ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವ ಕೃಷ್ಣಬೈರೇಗೌಡ ಮತ್ತು ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಆರ್ಷದ್‌ ಗುರುವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಪ್ರತಿಪಾದಿಸಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ (2010) ಈ ಯೋಜನೆಗೆ ಅನುಮೋದನೆ ನೀಡಲಾಗಿದೆ. ಆ ಸಂದರ್ಭದಲ್ಲಿಯೆ ಪೂರ್ಣ ಯೋಜನಾ ವರದಿಯೂ (ಡಿಪಿಆರ್‌) ಸಿದ್ಧವಾಗಿದೆ. ಆದರೆ, ಈಗ ಅವರೇ ತಮ್ಮ ನಿಲುವು ಬದಲಿಸಿ ಮಾತನಾಡುತ್ತಿದ್ದಾರೆ’ ಎಂದು ಕೃಷ್ಣ ಬೈರೇಗೌಡ ಹೇಳಿದರು.

ದಿನೇಶ್‌ ಗುಂಡೂರಾವ್‌ ಮಾತನಾಡಿ, ‘ಸರ್ಕಾರ ಚುನಾವಣೆಗಾಗಿ ಉಕ್ಕಿನ ಸೇತುವೆ ಯೋಜನೆ ಮೂಲಕ  ₹500 ಕೋಟಿ ಸಂಗ್ರಹಿಸುತ್ತಿದೆ ಎಂದು ಬಿಜೆಪಿ ನಾಯಕ ಯಡಿಯೂರಪ್ಪ ಹೇಳಿದ್ದಾರೆ. ಅವರು ತಮ್ಮ ವೈಯಕ್ತಿಕ ಅನುಭವದಿಂದ ಇಂತಹ ಹೇಳಿಕೆ ನೀಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಕೆ
ಬೆಂಗಳೂರು:
ನಗರದ ಬಸವೇಶ್ವರ ವೃತ್ತದಿಂದ ಹೆಬ್ಬಾಳ ಜಂಕ್ಷನ್‌ ನಡುವೆ ಉಕ್ಕಿನ ಸೇತುವೆ ನಿರ್ಮಿಸಬೇಕೆಂಬ ಬೆಂಗಳೂರು ಅಭಿವೃದ್ಧಿ ಪ್ರಾಧಿ

ಕಾರದ (ಬಿಡಿಎ) ಉದ್ದೇಶಿತ ಯೋಜನೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ (ಎನ್‌ಬಿಎಫ್‌) ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್‌ ಅವರಿದ್ದ ವಿಭಾಗೀಯ ಪೀಠ ಗುರುವಾರ ಈ ಅರ್ಜಿ ವಿಚಾರಣೆ ನಡೆಸಿ ಇದೇ 25ಕ್ಕೆ ಮುಂದೂಡಿತು.

ಈಗಾಗಲೇ ಉದ್ದೇಶಿತ ಯೋಜನೆ ಪ್ರಶ್ನಿಸಿ ಎನ್‌ಬಿಎಫ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇದೇ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ಏತನ್ಮಧ್ಯೆ, ‘ಯೋಜನೆಗೆ ಸಂಬಂಧಿಸಿದಂತೆ ಬಿಡಿಎ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಅಂಶಗಳು ಸಮರ್ಪಕವಾಗಿಲ್ಲ’ ಎಂದು ಮಧ್ಯಂತರ ಅರ್ಜಿಯಲ್ಲಿ ತಿಳಿಸಲಾಗಿದೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಬಳ್ಳಾರಿ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಆರು ಪಥದ ಉಕ್ಕಿನ ಸೇತುವೆ ನಿರ್ಮಿಸಲು ಬಿಡಿಎ ಉದ್ದೇಶಿಸಿದೆ.  ಆದರೆ ₹ 1,800 ಕೋಟಿ ಮೊತ್ತದ ಈ ಬೃಹತ್‌ ಯೋಜನೆಗೆ ಸಾರ್ವಜನಿಕರ ಅಭಿಪ್ರಾಯ ಪಡೆದಿಲ್ಲ ಮತ್ತು ಇದರ ಬಳಕೆಯಿಂದ ಅಂದುಕೊಂಡಷ್ಟು ಪ್ರಯೋಜನವಿಲ್ಲ ಎಂಬುದು ಎನ್‌ಬಿಎಫ್‌ ಆರೋಪ.

ಎಲ್ಲಿಗೆ ಬಂತು ಸ್ವಾತಂತ್ರ್ಯ?
ಮಾಗಡಿ ರಸ್ತೆಯ ಚಿಕ್ಕ ಗೊಲ್ಲರಹಟ್ಟಿ ಪ್ರದೇಶದಲ್ಲಿ ರಸ್ತೆಗಳೇ ಇಲ್ಲ. ಜನರ ವಿರೋಧವಿದ್ದರೂ ಬಹು ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲು ಹೊರಟಿದೆ. ಇದನ್ನು ನೋಡಿದರೆ ನನಗೆ ಡಾ.ಸಿದ್ದಲಿಂಗಯ್ಯ ಅವರ ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ ಕವನ ನೆನಪಾಗುತ್ತದೆ
-ತೇಜಸ್, ಬೆಂಗಳೂರು

*

ಮಾರ್ಗ ಬದಲಿಸಿ
ವಿಮಾನ ನಿಲ್ದಾಣಕ್ಕೆ ಹೆಬ್ಬಾಳ, ತಿಮ್ಮಸಂದ್ರ, ಹಾಗೂ ಬಂಡೆ ಹೊಸೂರು... ಹೀಗೆ ಮೂರು ಮಾರ್ಗಗಳಲ್ಲಿ ತಲುಪಬಹುದು. ಹಾಗಾಗಿ ವಿಮಾನನಿಲ್ದಾಣಕ್ಕೆ ಹೋಗುವ ವಾಹನಗಳಿಗೆ ಯಾವುದಾದರೂ ಒಂದು ಮಾರ್ಗ ನಿಗದಿ ಮಾಡಿದರೆ ವಾಹನ ದಟ್ಟಣೆ ಕಡಿಮೆ ಆಗುತ್ತದೆ
-ಲಕ್ಷ್ಮೀ, ಯಶವಂತಪುರ

*

ಸರ್ಕಾರದ ಬಳಿ ಉತ್ತರವಿಲ್ಲ
ಉಕ್ಕಿನ ಸೇತುವೆಯಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದೇ ಎಂಬ  ಜನರ ಪ್ರಶ್ನೆಗೆ ಸರ್ಕಾರವಾಗಲಿ, ಬಿಡಿಎ ಅಧಿಕಾರಿಗಳಾಗಲೀ ಉತ್ತರ ನೀಡುತ್ತಿಲ್ಲ. ಇದು ಬೇಜವಾಬ್ದಾರಿತನಕ್ಕೆ ಉದಾಹರಣೆ      
-ಲಕ್ಷ್ಮೀಕಾಂತ್ ಶರ್ಮ, ಬೆಂಗಳೂರು.

*
ಸೇತುವೆ  ಕಾಮಗಾರಿ ಸೇನೆಗೆ ವಹಿಸಿ
ಬಸವೇಶ್ವರ ವೃತ್ತ, ಕಾವೇರಿ ಜಂಕ್ಷನ್ ಮತ್ತು ಹೆಬ್ಬಾಳ ಜಂಕ್ಷನ್ ಬಳಿ ಮೇಲ್ಸೇತುವೆ ನಿರ್ಮಿಸಿದರೆ ವಾಹನ ದಟ್ಟಣೆಗೆ ಪರಿಹಾರ ಆಗುತ್ತದೆ. ಸರ್ಕಾರ ಕ್ಕೆ ಉಕ್ಕಿನ ಸೇತುವೇ ನಿರ್ಮಿಸಲೇ ಬೇಕು ಎಂದಾದರೆ, ಅದರ ಸಂಪೂರ್ಣ ಜವಾಬ್ದಾರಿಯನ್ನು ಸೇನೆಗೆ ವಹಿಸಿ. ಆಗ ನಿರ್ಮಾಣವೂ ಗುಣಮಟ್ಟದಿಂದ ಕೂಡಿರುತ್ತದೆ. ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆವರೆಗೆ ಸಿಗ್ನಲ್‌ ಮುಕ್ತ ರಸ್ತೆಯನ್ನಾಗಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ ವಾಹನಗಳ ದಟ್ಟಣೆ ಹೆಚ್ಚಿದ್ದರಿಂದ ಸಿಗ್ನಲ್‌ ಹಾಕಲಾಗಿದೆ. ನಾಳೆ ಉಕ್ಕಿನ ಸೇತುವೆಗೂ ಈ ಗತಿ ಬಂದರೆ?
-ಎಂ.ಪಿ. ಶ್ರೀಕಾಂತ್‌, ಹೆಬ್ಬಾಳ

*
ಕಡಿಮೆ ಆಗದು ದಟ್ಟಣೆ
ಒಂದಲ್ಲ, ಹತ್ತು ಉಕ್ಕಿನ ಸೇತುವೆ ನಿರ್ಮಿಸಿದರೂ ಸಂಚಾರ ದಟ್ಟಣೆ ಕಡಿಮೆ ಆಗದು. ನಗರಕ್ಕೆ ಬರುವ ವಲಸಿಗರಿಗೆ ಕಡಿವಾಣ ಬೀಳುವ ತನಕ ಈ ಸಮಸ್ಯೆ ನಿರಂತರ. ಅಧಿಕಾರಿಗಳಿಗೆ ದುಡ್ಡು ಮಾಡಲು ಇಂತಹ ಯೋಜನೆಗಳು ಒಂದು ನೆಪ. ಈ ಯೋಜನೆ ಜಾರಿಗೆ ಹಠ ಹಿಡಿದಿರುವವರಿಗೆ ವಿವೇಚನೆ ಇಲ್ಲವೇ?
–ಲಕ್ಷ್ಮೀಶ, ಪೀಣ್ಯ

*
ಬೇಡವೇ ಬೇಡ ಉಕ್ಕಿನ ಸೇತುವೆ 
10 ನಿಮಿಷದ ವಾಹನ ದಟ್ಟಣೆ ಸರಿಪಡಿಸಲು ಬರೊಬ್ಬರಿ ₹1,791 ಕೋಟಿ ಸಾರ್ವಜನಿಕರ ಹಣ ಏಕೆ ವ್ಯಯಿಸುತ್ತಿದ್ದಾರೆ. ಅಭಿವೃದ್ಧಿ ಜನಸ್ನೇಹಿ ಆಗಬೇಕು
–ಚಂದ್ರು, ಜಯನಗರ

*
ಇಲ್ಲಿಯವರೆಗೆ ಎಲ್ಲಿದ್ದಿರಿ?
ಉಕ್ಕಿನ ಸೇತುವೆ ವಿರೋಧಿಸುತ್ತಿರುವವರು 2013 ರಿಂದ ಏನು ಮಾಡುತ್ತಿದ್ದರು. ಯೋಜನೆ ಮಂಡನೆ ಆದಾಗಲೇ ವಿರೋಧಿಸಬೇಕಿತ್ತು. ಉಕ್ಕಿನ ಸೇತುವೆ ಯೋಜನೆಗೆ ನೀಲನಕ್ಷೆ ತಯಾರಿಸಿದ್ದು ಬಿಜೆಪಿ ಸರ್ಕಾರ. ಈಗ ಅವರೇ ವಿರೋಧಿಸುತ್ತಿದ್ದಾರೆ. ಒಂದು ವೇಳೆ ಈಗ ಕಾಂಗ್ರೆಸ್ ವಿರೋಧಪಕ್ಷವಾಗಿದ್ದರೆ ಅವರು ಸಹ ವಿರೋಧಿಸುತ್ತಿದ್ದರು
–ನಟರಾಜ, ಬೆಂಗಳೂರು

*
ಜೇಬು ತುಂಬುವ ಯೋಜನೆ
ಮೊದಲು ನಗರದ ರಸ್ತೆಗಳನ್ನು ಸರಿ ಮಾಡಿ. ಅವೈಜ್ಞಾನಿಕ ಹಂಪ್‌ಗಳನ್ನು ನಿರ್ಮಿಸಿರುವುದನ್ನು ಸರಿಗೊಳಿಸಿ. ಗುಂಡಿ ಮುಕ್ತ ರಸ್ತೆ ನಿರ್ಮಿಸಿ ನಂತರ ಚಿನ್ನದ ಸೇತುವೆಯನ್ನಾದರೂ ಮಾಡಿ. ಇದು ರಾಜಕಾರಣಿಗಳ ಜೇಬು ತುಂಬುವ ಯೋಜನೆ. ಅದಕ್ಕೆ ಸರ್ಕಾರ ಜನರ ಅಭಿಪ್ರಾಯಕ್ಕೆ ಕಿಂಚಿತ್ತೂ ಬೆಲೆ ನೀಡುತ್ತಿಲ್ಲ
–ಸಂಧ್ಯಾ, ಜಯನಗರ

*
ವಿರೋಧಿಸುವುದೇ ಪರಿಹಾರವಲ್ಲ
ಅಭಿವೃದ್ಧಿ ಕೆಲಸಗಳಿಗೆ ಎಲ್ಲರೂ ಸಹಕರಿಸಬೇಕು. ಪ್ರತಿದಿನ ಚಾಲುಕ್ಯ ವೃತ್ತದಿಂದ ಎಸ್ಟೀಮ್‌ ಮಾಲ್‌ವರೆಗೆ ಹೋಗುವಷ್ಟರಲ್ಲಿ ಸಾಕಾಗಿ ಹೋಗುತ್ತದೆ. ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚುತ್ತಲೇ ಇದೆ. ಮೆಟ್ರೊ ಪ್ರಾರಂಭಿಸುವಾಗಲೂ ಎಲ್ಲರೂ ವಿರೋಧಿಸಿದರು. ಆದರೆ ಅದಕ್ಕೆ ಈಗ ಎಲ್ಲರೂ ಒಗ್ಗಿ ಹೋಗಿದ್ದಾರೆ. ಆದರೆ ಉಕ್ಕಿನ ಸೇತುವೆ ಯೋಜನೆ ವೆಚ್ಚವನ್ನು ಮಾತ್ರ ಒಪ್ಪಲು ಸಾಧ್ಯವಿಲ್ಲ. ಅದರ ಪುನರ್‌ ಪರಿಶೀಲನೆ ಆಗಬೇಕು
–ಡಿ.ಕೆ. ಪ್ರದೀಪ್‌, ಬೆಂಗಳೂರು

ನೀವೂ ಬರೆಯಿರಿ
ಬಹುಕೋಟಿ ವೆಚ್ಚದ ಉಕ್ಕಿನ ಸೇತುವೆಯಿಂದ ಬಾಲಬ್ರೂಯಿ, ಕಾರ್ಲ್‌ಟನ್‌ ಹೌಸ್‌, ಬೆಂಗಳೂರು ಗಾಲ್ಫ್‌ ಕ್ಲಬ್‌, ನೆಹರೂ ತಾರಾಲಯವು ಜಾಗ ಕಳೆದು ಕೊಳ್ಳಲಿದೆ. ಈ ಬಗ್ಗೆ ಓದುಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಯೋಜನೆ ಬೇಕೆ, ಬೇಡವೆ? ಪರ್ಯಾಯವೇನು ಎನ್ನುವ ಬಗ್ಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. bangalore@prajavani.co.in, whatsap number- 95133 22930

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.