ADVERTISEMENT

ಉದ್ಯಮಿಯ ಎದೆ ಹೊಕ್ಕ ರಿವಾಲ್ವರ್‌ ಗುಂಡು

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:57 IST
Last Updated 20 ಜುಲೈ 2017, 19:57 IST

ಬೆಂಗಳೂರು: ಎಚ್‌.ಎ.ಎಲ್‌ ಬಳಿಯ ದೊಡ್ಡನೆಕ್ಕುಂದಿಯಲ್ಲಿ ಗುರುವಾರ ರಿವಾಲ್ವರ್‌ನ ಗುಂಡು ಎದೆಗೆ ಹೊಕ್ಕಿದ್ದರಿಂದ ನವೀನ್‌ ಚಂದ್ರ ರೆಡ್ಡಿ (37) ಎಂಬುವರು ಗಾಯಗೊಂಡಿದ್ದಾರೆ.

ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

‘ಕೋಟೆ ನಿವಾಸಿಯಾದ ನವೀನ್‌, ರಿಯಲ್‌ ಎಸ್ಟೇಟ್‌ ಉದ್ಯಮಿ. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದಾರೆ. ಅವರು ಪರವಾನಗಿ ಪಡೆದು ಜರ್ಮನ್ ಕಂಪೆನಿಯ 0.22 ಎಂ.ಎಂ. ರಿವಾಲ್ವರ್ ಇಟ್ಟುಕೊಂಡಿದ್ದರು’ ಎಂದು ಎಚ್ಎಎಲ್ ಪೊಲೀಸರು ತಿಳಿಸಿದರು.

ADVERTISEMENT

‘ಗುರುವಾರ ಬೆಳಿಗ್ಗೆ ಅದೇ ರಿವಾಲ್ವರ್‌ನಿಂದ ಹಾರಿದ್ದ ಗುಂಡು ಅವರ ಎದೆಯ ಎಡಭಾಗಕ್ಕೆ ಹೊಕ್ಕು, ದೇಹದಿಂದ ಹೊರ ಬಂದು ಗೋಡೆಗೆ ಅಪ್ಪಳಿಸಿದೆ’ ಎಂದರು.

‘ಗುಂಡಿನ ಶಬ್ದ ಕೇಳಿ ಸ್ಥಳಕ್ಕೆ ಬಂದ ಕುಟುಂಬಸ್ಥರು ಹಾಗೂ ಸ್ಥಳೀಯರು, ರಕ್ತದ ಮಡುವಿನಲ್ಲಿ ಬಿದ್ದಿದ್ದ ನವೀನ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.  ಅವರ ಶ್ವಾಸಕೋಶಕ್ಕೆ ಗಂಭೀರವಾಗಿ ಹಾನಿಯಾಗಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ’ ಎಂದು ವಿವರಿಸಿದರು.  

ಗೊಂದಲದ ಹೇಳಿಕೆ: ‘ಗುಂಡು ಹಾರಿದ್ದು ಹೇಗೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಬಟ್ಟೆಯಿಂದ ರಿವಾಲ್ವರ್‌ ಸ್ವಚ್ಛ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದೆ ಎಂದು ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ.  ಆದರೆ ಸ್ಥಳೀಯರು, ನವೀನ್‌ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಹೇಳುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.