ADVERTISEMENT

ಉಪನ್ಯಾಸಕ್ಕೆ ತಜ್ಞರಿಗೂ ಅವಕಾಶ

ಸರ್ಕಾರಿ ಶಾಲೆ ಅಭಿವೃದ್ಧಿಗೆ ‘ಶಾಲೆಗೆ ಬನ್ನಿ ಶನಿವಾರ’ ಕಾರ್ಯಕ್ರಮ ಪರಿಚಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 19:33 IST
Last Updated 30 ಜೂನ್ 2015, 19:33 IST

ಬೆಂಗಳೂರು: ವಿವಿಧ ಕ್ಷೇತ್ರಗಳ ವಿಷಯ ತಜ್ಞರು ಇನ್ನು ಮುಂದೆ ತಮಗಿಷ್ಟವಾದ ಶಾಲೆಗಳಲ್ಲಿ ಪ್ರತಿ ಶನಿವಾರ ಉಪನ್ಯಾಸ ನೀಡಲು ಪ್ರಾಥಮಿಕ ಮತ್ತು ಪ್ರೌಢಶಾಲಾ ಇಲಾಖೆ ಅವಕಾಶ ಕಲ್ಪಿಸುತ್ತಿದೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ  ಇಲಾಖೆಯು ‘ಶಾಲೆಗೆ ಬನ್ನಿ ಶನಿವಾರ’ ಎಂಬ ವಿಶೇಷ ಕಾರ್ಯಕ್ರಮವನ್ನು ಪರಿಚಯಿಸುತ್ತಿದ್ದೂ ಇದಕ್ಕೆ ವಿವಿಧ ಕ್ಷೇತ್ರಗಳಲ್ಲಿನ ಶಿಕ್ಷಣಾಸಕ್ತರು ಮತ್ತು ಪರಿಣಿತರು ಕೈಜೋಡಿಸಬೇಕೆಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕ  ಎಸ್.ಜಯಕುಮಾರ್ ಮನವಿ ಮಾಡಿದರು.

ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ನಗರದ ಶಿಕ್ಷಕರ ಸದನದಲ್ಲಿ  ಮಂಗಳವಾರ ಏರ್ಪಡಿಸಿದ್ದ ‘ಸರ್ಕಾರಿ ಶಾಲೆಗಳ ಸಬಲೀಕರಣದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಪಾತ್ರ’ ಕುರಿತ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಗೆ ಬನ್ನಿ ಶನಿವಾರ ಕಾರ್ಯಕ್ರಮ ವಿನೂತನವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಶನಿವಾರದಂದು ತಮ್ಮ ಹತ್ತಿರದ ಸರಕಾರಿ ಶಾಲೆಗೆ ತೆರಳಿ ಮಕ್ಕಳಿಗೆ ಪಾಠ ಮಾಡಬಹುದು. ಶಾಲೆಯ ಸಿಬ್ಬಂದಿಗೆ  ಶಾಲಾ ಸುದಾರಣೆ ಬಗ್ಗೆ  ಸಲಹೆ ಕೊಡಬಹುದೆಂದು ಅವರು ತಿಳಿಸಿದರು.

ಇದರ ಜೊತೆಗೆ ಶೈಕ್ಷಣಿಕ ಪ್ರಶ್ನೋತ್ತರ, ಶೈಕ್ಷಣಿಕ ದಾನ ಮತ್ತು ಸ್ಪಂದನದಂತಹ ಕಾರ್ಯಕ್ರಮಗಳನ್ನೂ ಅಳವಡಿಸಿ ಸರ್ಕಾರಿ ಶಾಲೆಗಳ ಏಳ್ಗೆಗೆ ಶ್ರಮಿಸಬಹುದು ಎಂದು ಅವರು ಹೇಳಿದರು. ಶಿಕ್ಷಣತಜ್ಞ ಡಾ.ವಿ.ಪಿ.  ನಿರಂಜನಾರಾಧ್ಯ ಮಾತನಾಡಿ, ‘ಹಲವಾರು ನಿಯಮಗಳನ್ನು ರಚಿಸುವ ಮೂಲಕ ಸರ್ಕಾರ, ಶಾಲಾಭಿವೃದ್ಧಿ ಸಮಿತಿಯ ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದು ಸರಿಯಲ್ಲ’ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ, ಗ್ರಾಮ ಪಂಚಾಯ್ತಿ ಸದಸ್ಯರಿಗೆ ಸಿಗುವಂತಹ ಸೌಲಭ್ಯಗಳು ಶಾಲಾಭಿವೃದ್ಧಿ ಸಮಿತಿಗಳ ಸದಸ್ಯರಿಗೂ ಸಿಗಬೇಕು ಎಂದರು.
*
ಮುಖ್ಯಾಂಶಗಳು
* ಸಂಪನ್ಮೂಲಗಳ ಕೊರತೆ ಅನುಭವಿಸುತ್ತಿರುವ ಸರ್ಕಾರಿ ಶಾಲೆಗಳು
* ರಾಜ್ಯದಲ್ಲಿ ಶೇ 14ರಷ್ಟು  ಏಕ ಉಪಧ್ಯಾಯ ಶಾಲೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.