ADVERTISEMENT

ಉಪಮೇಯರ್ ಸ್ಥಾನ ಒಕ್ಕಲಿಗರಿಗೆ ಇಲ್ಲ ?

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:48 IST
Last Updated 24 ಸೆಪ್ಟೆಂಬರ್ 2017, 19:48 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಮುಂದುವರಿಯಲಿದ್ದು, ಈ ಬಾರಿ ಉಪಮೇಯರ್‌ ಸ್ಥಾನ ಒಕ್ಕಲಿಗರಲ್ಲದವರಿಗೆ ಸಿಗುವ ಸಾಧ್ಯತೆ ಇದೆ.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ಗೃಹಸಚಿವ ರಾಮಲಿಂಗಾರೆಡ್ಡಿ ಮಧ್ಯೆ ಭಾನುವಾರ ಬೆಳಿಗ್ಗೆ ನಡೆದ ಸಭೆಯಲ್ಲಿ ಸ್ಥಾನ ಹಂಚಿಕೆಯ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

‘ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳನ್ನು ಬಿಟ್ಟುಕೊಡಲು ಕಾಂಗ್ರೆಸ್‌ ಒಪ್ಪಿಕೊಂಡಿದೆ. ಆದರೆ, ಉಪಮೇಯರ್ ಸ್ಥಾನವನ್ನು ಈ ಬಾರಿ ಒಕ್ಕಲಿಗರಲ್ಲದವರಿಗೆ ನೀಡಬೇಕು ಎಂದು ತೀರ್ಮಾನಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಗೃಹ ಸಚಿವ ರಾಮಲಿಂಗಾರೆಡ್ಡಿ ನಿವಾಸದಲ್ಲಿ ಜೆಡಿಎಸ್‌ ಮುಖಂಡ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಮೈತ್ರಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ಕುಪೇಂದ್ರ ರೆಡ್ಡಿ  ಪಕ್ಷದ ಬೇಡಿಕೆಗಳನ್ನು ಮುಂದಿಟ್ಟರು. ಮೈತ್ರಿಗೆ ಇಬ್ಬರೂ ಸಮ್ಮತಿಸಿದ ಬಳಿಕ ದೇವೇಗೌಡರ ನಿವಾಸಕ್ಕೆ ತೆರಳಿ ಮಾಹಿತಿ ನೀಡಿದರು. ಜೆಡಿಎಸ್‌ಗೆ ನಗರ ಯೋಜನೆ, ಲೆಕ್ಕಪತ್ರ, ಶಿಕ್ಷಣ ಮತ್ತು ವಾರ್ಡ್‌ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿಗಳನ್ನು ಬಿಟ್ಟುಕೊಡಲು ಸಚಿವ ರೆಡ್ಡಿ ಒಪ್ಪಿಕೊಂಡರು ಎಂದು ಮೂಲಗಳು ಹೇಳಿವೆ.

ಉಪಮೇಯರ್‌ಗೆ ಪೈಪೋಟಿ:
ಉಪಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ನೇತ್ರಾ ನಾರಾಯಣ, ಮಂಜುಳಾ ನಾರಾಯಣಸ್ವಾಮಿ ಮತ್ತು ರಮಿಳಾ ಉಮಾಶಂಕರ್‌ ಸ್ಪರ್ಧೆಯಲ್ಲಿ ಇದ್ದಾರೆ.  ಉಪ ಮೇಯರ್‌ ಯಾರಾಗುತ್ತಾರೆ ಎಂಬುದನ್ನು ಇದೇ 27 ರಂದು ತೀರ್ಮಾನಿಸಲಾಗುವುದು ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಪ್ರಾಥಮಿಕ ಚರ್ಚೆ:
‘ಇವತ್ತಿನ ಮಾತುಕತೆಯಲ್ಲಿ ಸ್ಥಾಯಿ ಸಮಿತಿಗಳ ಬಗ್ಗೆ ಪ್ರಾಥಮಿಕ ಚರ್ಚೆ ನಡೆಸಿದ್ದೇವೆ. ಈ ಹಿಂದೆ ಕೆಲವು ಕಾಂಗ್ರೆಸ್‌ ಶಾಸಕರಿಂದ ನಮ್ಮ ಸದಸ್ಯರಿಗೆ ಆದ ನೋವು ಮತ್ತು ಕಾಂಗ್ರೆಸ್‌ನ ಉದಾಸೀನ ಪ್ರವೃತ್ತಿ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಗಮನಕ್ಕೆ ತಂದಿದ್ದೇನೆ’ ಎಂದು ದೇವೇಗೌಡ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಉಪಮೇಯರ್‌ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎಂಬುದನ್ನು ಕುಮಾರಸ್ವಾಮಿ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಬಿಬಿಎಂಪಿಯಲ್ಲಿ ಮೈತ್ರಿ ಸುಗಮವಾಗಿ ನಡೆಯಲು ಸಮನ್ವಯ ಸಮಿತಿ ರಚಿಸಬೇಕು. ಆ ಸಮಿತಿಯಲ್ಲಿ ಆಗುವ ನಿರ್ಣಯಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಕಾಂಗ್ರೆಸ್‌ಗೆ ತಿಳಿಸಿದ್ದೇನೆ’ ಎಂದರು.

ಕುಪೇಂದ್ರ ರೆಡ್ಡಿ  ಪಕ್ಷದ ಬೇಡಿಕೆಗಳನ್ನು ಮುಂದಿಟ್ಟರು. ಮೈತ್ರಿಗೆ ಇಬ್ಬರೂ ಸಮ್ಮತಿಸಿದ ಬಳಿಕ ದೇವೇಗೌಡರ ನಿವಾಸಕ್ಕೆ ತೆರಳಿ ಮಾಹಿತಿ ನೀಡಿದರು. ಜೆಡಿಎಸ್‌ಗೆ ನಗರ ಯೋಜನೆ, ಲೆಕ್ಕಪತ್ರ, ಶಿಕ್ಷಣ ಮತ್ತು ವಾರ್ಡ್‌ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿಗಳನ್ನು ಬಿಟ್ಟುಕೊಡಲು ಸಚಿವ ರೆಡ್ಡಿ ಒಪ್ಪಿಕೊಂಡರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT