ADVERTISEMENT

ಊಟವಾಯಿತೆ? ನಿಲ್ಲಿ, ತಟ್ಟೆ–ಬಟ್ಟಲನ್ನೂ ತಿನ್ನಿ!

ಪ್ರವೀಣ ಕುಲಕರ್ಣಿ
Published 18 ಫೆಬ್ರುವರಿ 2017, 5:19 IST
Last Updated 18 ಫೆಬ್ರುವರಿ 2017, 5:19 IST
ಊಟವಾಯಿತೆ? ನಿಲ್ಲಿ, ತಟ್ಟೆ–ಬಟ್ಟಲನ್ನೂ ತಿನ್ನಿ!
ಊಟವಾಯಿತೆ? ನಿಲ್ಲಿ, ತಟ್ಟೆ–ಬಟ್ಟಲನ್ನೂ ತಿನ್ನಿ!   

ಬೆಂಗಳೂರು: ಊಟ ಮುಗಿಸಿದ ಮೇಲೆ ಅದಕ್ಕೆ ಬಳಸಿದ ತಟ್ಟೆ–ಬಟ್ಟಲು ಚಾಕು, ಫೋರ್ಕ್‌ ಹಾಗೂ ಚಮಚವನ್ನು ಏನು ಮಾಡುತ್ತೀರಿ? ತೊಳೆಯೋಕೆ ಇಲ್ಲವೆ ಬೀಸಾಡೋಕೆ ಬುಟ್ಟಿಗೆ ಹಾಕುತ್ತೀರಿ ತಾನೆ? ಆದರೆ, ಈ ತಟ್ಟೆ ಹಾಗೂ ಉಳಿದ ಪರಿಕರಗಳನ್ನು ಬುಟ್ಟಿಗೆ ಎಸೆಯುವಂತಿಲ್ಲ, ನೇರವಾಗಿ ಹೊಟ್ಟೆಗೆ ಇಳಿಸಬೇಕು!

ಹೌದು, ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‌ಎಲ್‌) ಇಂತಹ ಊಟದ ಪರಿಕರಗಳನ್ನು ಶೋಧಿಸಿದೆ.
ಸಿಯಾಚಿನ್‌ನಂತಹ ಸೂಕ್ಷ್ಮ ವಲಯದಲ್ಲಿ ಕಾರ್ಯನಿರ್ವಹಿಸುವ ಸೇನಾ ಸಿಬ್ಬಂದಿಗೆ ಸ್ಟೀಲ್‌ ತಟ್ಟೆಗಳನ್ನು ಉಪಯೋಗಿಸಿ ತೊಳೆಯುತ್ತಾ ಕೂರಲು ಸಮಯವಿಲ್ಲ. ಪ್ಲಾಸ್ಟಿಕ್‌ ಸಲಕರಣೆಗಳನ್ನು ಬಳಸಿ ಪರಿಸರ ಮಾಲಿನ್ಯಗೊಳಿಸಲು ಮನಸ್ಸಿಲ್ಲ.

ಸೇನಾಧಿಕಾರಿಗಳು ತಮ್ಮ ಈ ಸಂಕಟವನ್ನು ಡಿಎಫ್‌ಆರ್‌ಎಲ್‌ ಸಂಶೋಧಕರ ಮುಂದೆ ಹೇಳಿಕೊಂಡಾಗ ತಿನ್ನುವಂತಹ ತಟ್ಟೆ–ಬಟ್ಟಲುಗಳನ್ನು ತಯಾರಿಸುವ ಯೋಚನೆ ಮೊಳಕೆ ಒಡೆಯಿತು. ‘ಐಸ್‌ಕ್ರೀಂ ತಿಂದಬಳಿಕ ಅದನ್ನು ಹಾಕಿಕೊಟ್ಟ ಕೋನನ್ನೂ ನಾವು ತಿನ್ನುವುದಿಲ್ಲವೆ, ಅದೇ ರೀತಿಯಲ್ಲಿ ಈ ಪರಿಕರಗಳನ್ನು ತಿನ್ನಲು ಅನುಕೂಲವಾಗುವಂತೆ ರೂಪಿಸಲಾಗಿದೆ’ ಎಂದು  ಡಿಎಫ್‌ಆರ್‌ಎಲ್‌ನ ತಾಂತ್ರಿಕ ಅಧಿಕಾರಿ ಎಸ್‌.ಶ್ರೀಹರಿ ಪಂಡಿತ್‌ ಹೇಳುತ್ತಾರೆ.
‘ವಿವಿಧ ಧಾನ್ಯಗಳ ಹಿಟ್ಟು ಹಾಗೂ ರವೆಯಿಂದ ಈ ಪರಿಕರಗಳನ್ನು ತಯಾರಿಸಲಾಗಿದೆ. ಎಷ್ಟೇ ಬಿಸಿಯಾದ ಪದಾರ್ಥವನ್ನೂ ಈ ತಟ್ಟೆಯಲ್ಲಿ ಹಾಕಿಕೊಂಡು ತಿನ್ನಬಹುದು. ಚಾಕು ಹಾಗೂ ಫೋರ್ಕ್‌ಗಳು ಸಹ ಬೇಯಿಸಿದ ಮಾಂಸವನ್ನು ಕತ್ತರಿಸುತ್ತವೆ’ ಎಂದು ಅಭಿಮಾನದಿಂದ ವಿವರಿಸುತ್ತಾರೆ.

ADVERTISEMENT

‘ಹಾಗಾದರೆ ಈ ತಟ್ಟೆ, ಬಟ್ಟಲುಗಳನ್ನು ತಿನ್ನುವುದು ಹೇಗೆ’ ಎಂದು ಪ್ರಶ್ನಿಸಿದರೆ, ‘ಬಿಸಿನೀರಿನಲ್ಲಿ ಅದ್ದಿದರೆ ಸಾಕು, ಅವುಗಳು ಚಪಾತಿಯಂತೆ ಮೆತ್ತಗಾಗುತ್ತವೆ. ಪಲ್ಯ ಇಲ್ಲವೆ ಸಾಸ್‌ ಯಾವುದನ್ನು ಬೇಕಾದರೂ ಸವರಿ ಚಪ್ಪರಿಸಬಹುದು’ ಎಂದು ಉತ್ತರಿಸುತ್ತಾರೆ.
‘ಊಟದಿಂದಲೇ ಹೊಟ್ಟೆ ತುಂಬಿದೆ ಎಂದಾದರೆ ತಟ್ಟೆ–ಬಟ್ಟಲನ್ನು ಹಾಗೇ ಎಸೆದರೆ ಪಶು–ಪಕ್ಷಿಗಳಿಗೆ ಅದು ಆಹಾರವಾಗುತ್ತದೆ’ ಎನ್ನುತ್ತಾರೆ ಮತ್ತೊಬ್ಬ ತಾಂತ್ರಿಕ ಅಧಿಕಾರಿ ಪಿ.ಮುರುಗನ್‌.

‘ತಿನ್ನಬಹುದಾದಂತಹ ಈ ತಟ್ಟೆ–ಬಟ್ಟಲನ್ನು ತಯಾರಿಸಲು ವರ್ಷದ ಹಿಂದೆಯೇ ಸಂಶೋಧನೆ ಶುರುವಾಗಿತ್ತು. ವಿಭಿನ್ನ ಪದಾರ್ಥಗಳ ಮೂಲಕ ಪ್ರಯೋಗ ಮಾಡಲಾಗಿತ್ತು. ಕೊನೆಗೆ ಆಹಾರದ ಬಿಸಿಯನ್ನು ತಾಳಿಕೊಳ್ಳುವ, ಊಟದ ಬಳಿಕ ಬಿಸಿನೀರಿಗೆ ಮೆದುವಾಗುವ ಫಾರ್ಮುಲಾ ಕಂಡು ಹಿಡಿಯಲಾಯಿತು’ ಎಂದು ವಿವರಿಸುತ್ತಾರೆ.

‘ಸೇನಾಪಡೆಗೆ ಈ ತಟ್ಟೆಗಳ ಪೂರೈಕೆ ಇನ್ನೇನು ಆರಂಭವಾಗಲಿದೆ. ಖಾಸಗಿಯವರು ಮುಂದೆ ಬಂದರೆ ತಂತ್ರಜ್ಞಾನ ನೀಡಲೂ ಸಂಸ್ಥೆ ಸಿದ್ಧವಿದೆ’ ಎಂದು ಹೇಳುತ್ತಾರೆ.

‘ಪ್ರತಿ ಫೋರ್ಕ್‌, ಚಾಕು, ಚಮಚ ತಯಾರಿಕೆಗೆ ₹ 2 ಹಾಗೂ ತಟ್ಟೆ–ಬಟ್ಟಲಿಗೆ ₹ 3 ವ್ಯಯವಾಗಲಿದೆ. ತಯಾರಿಕೆ ಪ್ರಮಾಣ ಹೆಚ್ಚಿದಂತೆ ವೆಚ್ಚ ಗಣನೀಯ ಪ್ರಮಾಣದಲ್ಲಿ ತಗ್ಗಲಿದೆ. ಸಗಟು ಪ್ರಮಾಣದಲ್ಲಿ ಈ ಸಲಕರಣೆಗಳ ಉತ್ಪಾದನೆಗಾಗಿ ಯಂತ್ರಗಳ ವಿನ್ಯಾಸ ಮಾಡಲಾಗಿದೆ’ ಎಂದು ತಿಳಿಸಿದರು.

ಸಿದ್ಧ ಆಹಾರದ ಪಾಕೆಟ್‌ಗಳೇ ಬೇಕೆಂಬುದು ಜಲಪಡೆಯ ಬೇಡಿಕೆ. ಪೌಷ್ಠಿಕಾಂಶವುಳ್ಳ ಚಪಾತಿ, ಪಲ್ಯ, ಹಲ್ವಾ, ಪುಲಾವ್‌ (ಇಲ್ಲವೆ ಬಿರಿಯಾನಿ) ಹೊಂದಿದ ಆಹಾರದ ಪಾಕೆಟ್‌ಗಳನ್ನು ಡಿಎಫ್‌ಆರ್‌ಎಲ್‌ ಸಿದ್ಧಪಡಿಸಿಕೊಟ್ಟಿದೆ. ಬೆನ್ನಚೀಲದಲ್ಲಿ ಈ ಪಾಕೆಟ್‌ ಇಟ್ಟು ಬ್ಯಾಟರಿ ‘ಆನ್‌’ ಮಾಡಿದರೆ ಮುಗಿಯಿತು, ಮೂರು ನಿಮಿಷದಲ್ಲಿ ಊಟಕ್ಕೆ ಕೂರಬಹುದು. ಆಹಾರ ಬಿಸಿ ಮಾಡುವ ಬೆನ್ನಚೀಲವನ್ನೂ ಡಿಎಫ್‌ಆರ್‌ಎಲ್‌ ತಯಾರಿಸಿದೆ.

ದುರ್ಗಮ ಪ್ರದೇಶದಲ್ಲಿ ದೇಶ ಕಾಯುವವರಿಗಾಗಿ ಚಿಕನ್‌ ಒದಗಿಸಲು ಈ ಸಂಸ್ಥೆ ಹೊಸ ಫಾರ್ಮುಲಾವೊಂದನ್ನು ಶೋಧಿಸಿದೆ. ಮಸಾಲೆ ಬೆರೆಸಿದ ಚಿಕನ್‌ ಪುಡಿಯನ್ನು ಅದು ಸಿದ್ಧಪಡಿಸಿದೆ. ಆ ಪುಡಿಯನ್ನು ಬಿಸಿನೀರಿಗೆ ಹಾಕಿದರೆ ರುಚಿಯಾದ ಚಿಕನ್‌ ಬಿರಿಯಾನಿ ಸವಿಯಲು ಸನ್ನದ್ಧ!

ಶೀತವಲಯದಲ್ಲಿ ತಾಪಮಾನ ಮೈನಸ್‌ 30 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದರೂ ಸೇನಾಶಿಬಿರಗಳಲ್ಲಿ ಮೊಸರು ತಯಾರು ಮಾಡುವಂತಹ ಯಂತ್ರವೊಂದನ್ನು ಈ ಸಂಸ್ಥೆ ಶೋಧಿಸಿದೆ. ಈ ಯಂತ್ರದಲ್ಲಿ ಹಾಲು ಹಾಕಿಟ್ಟ ಕೇವಲ ಒಂದು ಗಂಟೆಯಲ್ಲಿ ಮೊಸರು ತಯಾರಾಗುತ್ತದೆ. ಸೈನ್ಯದಲ್ಲಿರುವ ದಕ್ಷಿಣ ಭಾರತೀಯರಿಗೆ ಹಲ್ವಾ, ಇಡ್ಲಿ, ಉಪ್ಮಾ, ಕೊಬ್ಬರಿ ಚಟ್ನಿ, ಸಂಬಾರದ ರುಚಿ ಸವಿಯಲು ಇನ್‌ಸ್ಟಂಟ್‌ ಆಹಾರ ಪದಾರ್ಥಗಳ ಪಾಕೆಟ್‌ ಸಿದ್ಧಪಡಿಸಲಾಗಿದೆ.

ಹಾಲಿನ ಗುಣಮಟ್ಟ ಪರೀಕ್ಷೆಗೆ ಯಂತ್ರ
ಜನಸಾಮಾನ್ಯರು ತಾವು ಪ್ರತಿದಿನ ಉಪಯೋಗಿಸುವ ಹಾಲು ಗುಣಮಟ್ಟದಿಂದ ಕೂಡಿದೆಯೇ ಎಂಬುದನ್ನು ಪರೀಕ್ಷಿಸಲು ಡಿಎಫ್‌ಆರ್‌ಎಲ್‌ ಸಾಧನವೊಂದನ್ನು ಶೋಧಿಸಿದೆ. ಹಾಲಿನಲ್ಲಿ ಯೂರಿಯಾ ಇದೆಯೇ, ಮೈದಾ ಬೆರೆಸಲಾಗಿದೆಯೇ ಅಥವಾ ಬೇರೆ ಇನ್ಯಾವುದಾದರೂ ಕಲಬೆರಕೆ ಆಗಿದೆಯೇ ಎಂಬುದನ್ನು ಐದು ನಿಮಿಷದ ಪರೀಕ್ಷೆಯಿಂದ ಪತ್ತೆ ಮಾಡಬಹುದು. ಪ್ರನಾಳದಲ್ಲಿ ಸ್ವಲ್ಪ ಹಾಲು ಹಾಕಿ, ಡಿಎಫ್‌ಆರ್‌ಎಲ್‌ ಕೊಟ್ಟ ಮಾತ್ರೆಯನ್ನು ಅದಕ್ಕೆ ಹಾಕಬೇಕು. ಹಾಲಿನಲ್ಲಿ ಕಲಬೆರಕೆ ಆಗಿದ್ದರೆ ಅದು ಬಣ್ಣ ಬದಲಾಯಿಸುತ್ತದೆ. ‘ಹಾಲಿನಲ್ಲಿರುವ ನೀರಿನ ಪ್ರಮಾಣ ಗೊತ್ತಾಗಲಿದೆಯೇ’ ಎಂದು ಕೇಳಿದಾಗ ದೊಡ್ಡ ನಗುವೇ ಅಧಿಕಾರಿಗಳ ಉತ್ತರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.