ADVERTISEMENT

ಎಂ.ಜಿ. ರಸ್ತೆಯಲ್ಲಿ ಉತ್ಸವದ ಸೊಬಗು

ತಿಂಗಳಲ್ಲಿ ಒಂದುದಿನ ಈ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಬಂದ್‌

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 19:59 IST
Last Updated 1 ಆಗಸ್ಟ್ 2015, 19:59 IST

ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಇಲಾಖೆಯು ಎಂ.ಜಿ. ರಸ್ತೆಯಲ್ಲಿ ತಿಂಗಳಿಗೆ ಒಂದುದಿನ ಸಂಚಾರಮುಕ್ತ ವಲಯವನ್ನಾಗಿ ಮಾಡಿ ಉತ್ಸವ ಏರ್ಪಡಿಸಲು ಯೋಜನೆ ಸಿದ್ಧಪಡಿಸಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ನಗರಕ್ಕೆ ಆಕರ್ಷಿಸುವುದು ಮತ್ತು ನಗರದ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಪರಿಚಯ ಮಾಡಿ ಕೊಡುವುದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು.

‘ಎಂ.ಜಿ. ರಸ್ತೆಯ ಕಾವೇರಿ ಜಂಕ್ಷನ್‌ನಿಂದ ಅನಿಲ್‌ ಕುಂಬ್ಳೆ ವೃತ್ತದವರೆಗೆ ಈ ಉತ್ಸವವನ್ನು ನಡೆಸಲು ಉದ್ದೇಶಿಸಲಾಗಿದೆ. ರಾಜ್ಯದ ಜನಪದ ಸಂಸ್ಕೃತಿ, ಕರಕುಶಲ ಕಲೆ ಪರಿಚಯಿಸಲು ಈ ಉತ್ಸವ ವೇದಿಕೆಯಾಗಲಿದೆ. ಚಿತ್ರ ಸಂತೆಯನ್ನೂ ನಡೆಸುವ ಯೋಚನೆ ಇದೆ’ ಎಂದು ವಿವರಿಸುತ್ತಾರೆ.

‘ನಗರದ ರಸ್ತೆಗಳನ್ನು ಪ್ರವಾಸಿಗಳ ಸ್ನೇಹಿಯಾಗಿ ಮಾರ್ಪಡಿಸುವುದೇ ನಮ್ಮ ಯೋಜನೆ ಹಿಂದಿರುವ ಉದ್ದೇಶವಾಗಿದೆ. ಗೃಹ ಇಲಾಖೆಯಿಂದಲೂ ಈ ಯೋಜನೆಗೆ ಸಹಕಾರ ಸಿಗುತ್ತಿದೆ. ಉತ್ಸವಕ್ಕಾಗಿ ರಸ್ತೆ ಬಂದ್‌ ಮಾಡಿದರೆ ಪೊಲೀಸರು ಸಂಚಾರ ಹಾಗೂ ವಾಹನ ನಿಲುಗಡೆಗಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ’ ಎಂದು ಹೇಳುತ್ತಾರೆ.

‘ಯಾವಾಗ ಈ ಉತ್ಸವ ಆರಂಭಿಸಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಸಂಬಂಧಿಸಿದ ಎಲ್ಲ ಇಲಾಖೆಗಳ ಜತೆ ಚರ್ಚೆ ನಡೆಸಲಾಗುತ್ತಿದೆ. ಮೆಟ್ರೊ ನಿಗಮದಿಂದ ನಿರ್ಮಿಸಿರುವ ಬುಲೆವಾರ್ಡ್‌ ಸಹ ಉತ್ಸವದ ಭಾಗವಾಗಲಿದೆ’ ಎಂದು ಅವರು ಮಾಹಿತಿ ನೀಡುತ್ತಾರೆ.

ರೇಷ್ಮೆ ಬಟ್ಟೆಗಳ ಮಳಿಗೆಗಳು, ಕರಕುಶಲ ವಸ್ತುಗಳ ಮಾರಾಟ ಕೇಂದ್ರಗಳು, ಹೋಟೆಲ್‌ಗಳು ಈ ರಸ್ತೆಯಲ್ಲಿವೆ. ಮೆಟ್ರೊ ರೈಲು ನಿಗಮವೂ ಈ ಉತ್ಸವ
ದಲ್ಲಿ ಪಾಲ್ಗೊಳ್ಳಲು ಉತ್ಸುಕವಾಗಿದೆ. ರಂಗೋಲಿ ಮೆಟ್ರೊ ಕಲಾ ಕೇಂದ್ರಕ್ಕೂ ಪ್ರವಾಸಿಗರನ್ನು ಆಕರ್ಷಿಸಲು ಇದರಿಂದ ಸಾಧ್ಯವಾಗಲಿದೆ ಎಂಬುದು ನಿಗಮದ ಅಧಿಕಾರಿಗಳ ಆಶಯವಾಗಿದೆ.

ಒಂದಿಷ್ಟು ಇತಿಹಾಸ: ಎಂ.ಜಿ. ರಸ್ತೆಗೆ ಸ್ವಾತಂತ್ರ್ಯ ಪೂರ್ವದಲ್ಲಿ ಸೌತ್‌ ಪರೇಡ್‌ ರಸ್ತೆ ಎಂದು ಕರೆಯಲಾಗುತ್ತಿತ್ತು. 1948ರ ಫೆಬ್ರುವರಿ 26ರಂದು ಈ ಮಾರ್ಗಕ್ಕೆ ಮಹಾತ್ಮ ಗಾಂಧಿ (ಎಂ.ಜಿ.) ರಸ್ತೆ ಎಂಬ ನಾಮಕರಣ ಮಾಡಲಾಯಿತು. 2000ರವರೆಗೂ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಅಷ್ಟಾಗಿ ಇರಲಿಲ್ಲ.

‘ನಾನು ಮೊದಲ ಸಲ ಬೆಂಗಳೂರಿಗೆ ಬಂದಾಗ (1970) ಮಹಾತ್ಮ ಗಾಂಧಿ ರಸ್ತೆಯ ನಡುವೆ ತುಂಬಾ ಹೊತ್ತು ನಿಂತಿದ್ದೆ. ದೂರದಲ್ಲಿ ಎರಡು ಕಾರುಗಳು ನಿಂತಿದ್ದನ್ನು ಬಿಟ್ಟರೆ ಬೇರೆ ವಾಹನಗಳೇ ಕಾಣಲಿಲ್ಲ. ಈ ರಸ್ತೆ ಆಗ ಅಷ್ಟೊಂದು ಆರಾಮವಾಗಿತ್ತು’ ಎನ್ನುತ್ತಾರೆ ಸುಪ್ರಸಿದ್ಧ ರಾಜಕೀಯ ವಿಶ್ಲೇಷಕ ಪ್ರೊ. ಜೇಮ್ಸ್‌ ಮ್ಯಾನರ್.

ಸದ್ಯದ ಸನ್ನಿವೇಶದಲ್ಲಿ ರಸ್ತೆ ಮಧ್ಯೆ ನಿಲ್ಲುವುದನ್ನು ಕಲ್ಪಿಸಿಕೊಳ್ಳಲು ಸಹ ಆಗುವುದಿಲ್ಲ. ಪ್ರತಿಗಂಟೆಗೆ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡುತ್ತವೆ. ಯೋಜನೆ ಜಾರಿಗೆ ಬಂದರೆ ಪ್ರತಿ ತಿಂಗಳು ಒಂದುದಿನ ರಸ್ತೆಯಲ್ಲಿ ವಾಹನ ಸಂಚಾರ ಇರುವುದಿಲ್ಲ. ಮೇಲೆ ಮೆಟ್ರೊ ರೈಲು ಮಾತ್ರ ಓಡಲಿದೆ!

ಎಂ.ಜಿ. ರಸ್ತೆಯಲ್ಲಿ ಯೋಜನೆ ಯಶಸ್ವಿಯಾದರೆ ವೈಟ್‌ಫೀಲ್ಡ್‌ ಮತ್ತು ಮಲ್ಲೇಶ್ವರದಲ್ಲೂ ಉತ್ಸವ ಏರ್ಪಡಿಸುವ ಉದ್ದೇಶವಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ವಿವರಿಸುತ್ತಾರೆ.

ನಗರದಲ್ಲಿ ಜನಪ್ರಿಯವಾದ ಹಬ್ಬಗಳು
ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕೆರೆ ಹಾಗೂ ರಸ್ತೆ ಉತ್ಸವಗಳು ನಗರದ ಹೊಸ ಹಬ್ಬಗಳಾಗಿ ಜನಪ್ರಿಯಗೊಳ್ಳುತ್ತಿವೆ. ವಿವಿಧ ಸ್ವಯಂಸೇವಾ ಸಂಘಟನೆಗಳು ಹಲವೆಡೆ ಏರ್ಪಡಿಸಿದ್ದ ಕೆರೆ ಹಬ್ಬಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು. ಸೈಕಲ್‌ ದಿನಗಳು ಸಹ ಜನಾಕರ್ಷಿಸುವಲ್ಲಿ ಯಶಸ್ವಿಯಾಗಿದ್ದವು. ಇವುಗಳಿಂದ ಪ್ರೇರಣೆ ಪಡೆದ ತೋಟಗಾರಿಕೆ ಇಲಾಖೆ ಕೆಲವು ವಾರಗಳಿಂದ ಪ್ರತಿ ಭಾನುವಾರ ಕಬ್ಬನ್‌ ಉದ್ಯಾನದಲ್ಲಿ ಉತ್ಸವ ನಡೆಸುತ್ತಿದೆ.

ಉದ್ಯಾನದಲ್ಲಿ ಉದಯರಾಗ ಮತ್ತು ಸಂಧ್ಯಾರಾಗ, ಸಂಪೂರ್ಣ ವಾಹನಮುಕ್ತ ವಾತಾವರಣ, ಸಾಂಸ್ಕೃತಿಕ ಕಾರ್ಯಕ್ರಮ, ಸಹಜ ಕೃಷಿಯಲ್ಲಿ ಬೆಳೆದ ಹಣ್ಣುಗಳ ಮಾರಾಟ ಮೊದಲಾದ ಚಟುವಟಿಕೆಗಳು ಈ ಉತ್ಸವಕ್ಕೂ ಜನಪ್ರಿಯತೆ ತಂದುಕೊಟ್ಟವು.

ಕಬ್ಬನ್‌ ಉದ್ಯಾನದ ಹಾದಿಯಲ್ಲೇ ಈಗ ಲಾಲ್‌ಬಾಗ್‌ ಉದ್ಯಾನದಲ್ಲಿ ಸಹ ಇಂತಹ ಹಬ್ಬ ಮಾಡುತ್ತಿದೆ ತೋಟಗಾರಿಕೆ ಇಲಾಖೆ.

ಸಮಸ್ಯೆ ಆಗಲ್ಲ
‘ದಟ್ಟಣೆಯಿಂದ ಕೂಡಿದ ಎಂ.ಜಿ. ರಸ್ತೆಯಲ್ಲಿ ಒಂದುದಿನ ಪೂರ್ತಿ ಸಂಚಾರ ಬಂದ್‌ ಮಾಡಿದರೆ ಸಮಸ್ಯೆ ಆಗುವುದಿಲ್ಲವೆ’ ಎಂದು ಪ್ರಶ್ನಿಸಿದರೆ, ‘ಕಬ್ಬನ್‌ ರಸ್ತೆ ಈಗ ಸಂಚಾರಕ್ಕೆ ಮುಕ್ತವಾಗಿದೆ. ಹೀಗಾಗಿ ಎಂ.ಜಿ. ರಸ್ತೆ ಮೇಲಿನ ಒತ್ತಡ ಕಡಿಮೆಯಾಗಿದ್ದು ದಟ್ಟಣೆ ನಿಭಾಯಿಸುವುದು ಕಷ್ಟವಲ್ಲ’ ಎಂದು ಉತ್ತರಿಸುತ್ತಾರೆ ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಎಂ.ಎ. ಸಲೀಂ.

‘ಎಂ.ಜಿ. ರಸ್ತೆ ಉತ್ಸವ ಭಾನುವಾರವೇ ನಡೆಯುವುದರಿಂದ ಅಂದು ವಾಹನ ದಟ್ಟಣೆ ಅಷ್ಟಾಗಿ ಇರುವುದಿಲ್ಲ. ಕಬ್ಬನ್‌ ಉದ್ಯಾನದಲ್ಲಿ ಪ್ರತಿ ಭಾನುವಾರ ವಾಹನ ಸಂಚಾರ ನಿರ್ಬಂಧಿಸಿದ ಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಅವರು ಹೇಳುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.