ADVERTISEMENT

ಎಂಬೆಸಿ ಸಮೂಹದ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 20:13 IST
Last Updated 27 ಆಗಸ್ಟ್ 2016, 20:13 IST

ಬೆಂಗಳೂರು: ನಗರ ಜಿಲ್ಲಾಡಳಿತವು ಯಲಹಂಕ ತಾಲ್ಲೂಕಿನಲ್ಲಿ ಶನಿವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ₹8.72 ಕೋಟಿ ಮೌಲ್ಯದ 4 ಎಕರೆಯ ಒತ್ತುವರಿ ತೆರವು ಮಾಡಿತು. ಜಾಲ ಹೋಬಳಿಯ ಚಿಕ್ಕಜಾಲ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 76/ಪಿ4 ರಲ್ಲಿ 2 ಎಕರೆ, ಬಿಲ್ಲಮಾರನಹಳ್ಳಿ ಮತ್ತು ಹೊಸಹಳ್ಳಿಯಲ್ಲಿ ಹಾದುಹೋಗುವ ರಾಜಕಾಲುವೆ ಸರ್ವೆ ನಂಬರ್‌ಗಳಾದ 4, 6, 7, 8, 10, 13, 17 ಮತ್ತು ಇತರೆ ಸರ್ವೆ ನಂಬರ್‌ಗಳಲ್ಲಿ ‘ಎಂಬೆಸಿ ಸಮೂಹ’ ಮತ್ತು ‘ಸ್ಯಾಮಸ್ ಡ್ರೀಮ್ ಲ್ಯಾಂಡ್’ ಮಾಡಿದ್ದ ಒತ್ತುವರಿಯನ್ನು ತೆರವು ಗೊಳಿಸಲಾಯಿತು ಎಂದು ಜಿಲ್ಲಾಧಿಕಾರಿ ವಿ.ಶಂಕರ್‌ ತಿಳಿಸಿದರು.

ಯಲಹಂಕ ಹೋಬಳಿ ವಡೇರಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 8 ರಲ್ಲಿ 7 ಗುಂಟೆಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ ನಿರ್ಮಿಸಿದ್ದ ಒತ್ತುವರಿ ಜಾಗವನ್ನು ತೆರವುಗೊಳಿಸಲಾಯಿತು.  ಶಿವನಹಳ್ಳಿ ಗ್ರಾಮದ ಹನುಮಂತ ದೇವರ ಜಾಗ ಸರ್ವೆ ನಂ. 12 ರಲ್ಲಿ 30 ಗುಂಟೆ, ಹೆಸರಘಟ್ಟ ಹೋಬಳಿಯ  ಅಡ್ಡೆವಿಶ್ವನಾಥಪುರ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 42 ರಲ್ಲಿ 1 ಎಕರೆ 36 ಗುಂಟೆಯನ್ನು ಜಿಲ್ಲಾಡಳಿತದ ವಶಕ್ಕೆ ಪಡೆಯಲಾಯಿತು.

ಅವನಿ ಶೃಂಗೇರಿನಗರದಲ್ಲಿ ಕಾರ್ಯಾಚರಣೆ
ಬೊಮ್ಮನಹಳ್ಳಿ ವಲಯದ ಅವನಿ ಶೃಂಗೇರಿನಗರದಲ್ಲಿ ಶನಿವಾರವೂ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆ ಯಿತು. ಬಿಬಿಎಂಪಿ ಎಇಇ ಗಣೇಶ್‌ ಹೆಗಡೆ ನೇತೃತ್ವದಲ್ಲಿ ಬೆಳಿಗ್ಗೆ 10.30ಕ್ಕೆ ತೆರವು ಕಾರ್ಯಾಚರಣೆ ಆರಂಭಗೊಂಡಿತು. ಹುಳಿಮಾವು–ಬೇಗೂರು ರಸ್ತೆಯ ಆಂಧ್ರ ಬ್ಯಾಂಕ್‌ ಬಳಿ ಇರುವ ರಾಜೇಶ್‌ ವಿ.ಶಂಕರ್‌  ಅವರ ಮನೆಯ ಸಜ್ಜವನ್ನು ಜೆಸಿಬಿ ಮೂಲಕ ಒಡೆಯಲಾಯಿತು.

ಬಳಿಕ ಈ ಜಾಗದಲ್ಲಿ 12 ಅಡಿ  ಅಗಲ, ಎಂಟು ಅಡಿ ಆಳದ ಕಾಲುವೆಯನ್ನು ತೋಡಲಾಯಿತು. ಶುಕ್ರವಾರ ಸ್ಥಳೀಯ ನಿವಾಸಿಗಳು ಅಧಿಕಾರಿಗಳೊಂದಿಗೆ ಗಲಾಟೆ ಮಾಡಿದ್ದರಿಂದ ಮುಂಜಾಗೃತ ಕ್ರಮವಾಗಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT