ADVERTISEMENT

ಎಲ್‌ಕೆಜಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 19:30 IST
Last Updated 21 ಅಕ್ಟೋಬರ್ 2014, 19:30 IST

ಬೆಂಗಳೂರು: ಜಾಲಹಳ್ಳಿ ಮುಖ್ಯರಸ್ತೆಯ ಆರ್ಕಿಡ್ ದಿ ಇಂಟರ್‌ನ್ಯಾಷನಲ್ ಶಾಲೆಯ ಮೂರೂವರೆ ವರ್ಷದ ವಿದ್ಯಾರ್ಥಿನಿ ಮೇಲೆ ಮಂಗಳವಾರ ಲೈಂಗಿಕ ದೌರ್ಜನ್ಯ ನಡೆದಿದೆ. ವಿಬ್ಗಯೊರ್ ಶಾಲೆಯ ಒಂದನೇ ತರಗತಿ ವಿದ್ಯಾ­ರ್ಥಿನಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ, ಅದೇ ರೀತಿಯ ಮತ್ತೊಂದು ಘಟನೆ ನಡೆದಿರುವುದು ಪೋಷಕರ ಆತಂಕವನ್ನು ಹೆಚ್ಚಿಸಿದೆ.

ಎಂದಿನಂತೆ ಮಂಗಳವಾರ ಶಾಲೆಗೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಮಧ್ಯಾಹ್ನ 12 ಗಂಟೆಗೆ ತರಗತಿ ಮುಗಿದಾಗ ಮಗ­ಳನ್ನು ಕರೆದುಕೊಂಡು ಹೋಗಲು ಆಕೆಯ ತಾಯಿ ಶಾಲೆಗೆ ಬಂದಿದ್ದರು. ಆಗ, ವಿದ್ಯಾರ್ಥಿನಿ ಹೊಟ್ಟೆ ನೋವು ಎಂದು ಅಳುತ್ತಿದ್ದಳು. ಈ ಬಗ್ಗೆ ತಾಯಿ ವಿಚಾರಿಸಿದಾಗ ‘ತರಗತಿಯಲ್ಲಿ ಅಂಕಲ್‌ ಹೊಡೆದರು’ ಎಂದಷ್ಟೆ ಆಕೆ ಹೇಳಿದ್ದಳು.

ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿದ್ಯಾರ್ಥಿನಿಗೆ ಜ್ವರ ಬಂದಿದೆ. ಹೀಗಾಗಿ ತಾಯಿಯು ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಪಾಸಣೆ ನಡೆಸಿದ ವೈದ್ಯರು, ‘ಮಗುವಿನ ಗುಪ್ತಾಂಗದ ಮೇಲೆ ಗಾಯಗಳಾಗಿವೆ. ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

ಇದರಿಂದ ಆಘಾತಗೊಂಡ ತಾಯಿ, ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಹೆಚ್ಚಿನ ತಪಾಸಣೆಗಾಗಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕರೆ ದೊಯ್ದಿದ್ದಾರೆ. ಇಲ್ಲಿನ ವೈದ್ಯರು ಸಹ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ದೃಢಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ವಿಷಯ ತಿಳಿಯುತ್ತಿದ್ದಂತೆಯೇ ನಗರ ಪೊಲೀಸ್ ಕಮಿಷನರ್ ಎಂ.ಎನ್‌.ರೆಡ್ಡಿ, ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ ಕುಮಾರ್, ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಹೇಮಂತ್ ನಿಂಬಾಳ್ಕರ್, ಉತ್ತರ ವಿಭಾಗದ ಡಿಸಿಪಿ ಟಿ.ಆರ್.ಸುರೇಶ್ ಅವರು ಘಟನಾ ಸ್ಥಳಕ್ಕೆ ತೆರಳಿ ಸಿಬ್ಬಂದಿಯ ವಿಚಾರಣೆ ನಡೆಸಿದರು. ‘ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ವಿದ್ಯಾರ್ಥಿನಿಯ ಪೋಷಕರು ದೂರು ಕೊಟ್ಟಿ ದ್ದಾರೆ. ದೂರಿನ ಅನ್ವಯ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ–2012 (ಪೋಕ್ಸೊ) ಹಾಗೂ ಅತ್ಯಾಚಾರ (ಐಪಿಸಿ 376) ಆರೋಪದಡಿ ಪ್ರಕರಣ ದಾಖಲಾಗಿದೆ’ ಎಂದು  ಎಂ.ಎನ್.ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲಾ ಆವರಣದಲ್ಲಿ ಸಿ.ಸಿ ಕ್ಯಾಮೆರಾಗಳಿದ್ದು, ಸಿಬ್ಬಂದಿ ಅವುಗಳ ಪರಿಶೀಲನಾ ಕಾರ್ಯದಲ್ಲಿ ತೊಡಗಿದ್ದಾರೆ. ಬಾಲಕಿ ಸಹ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ. ಪ್ರಕರಣದ ತನಿಖೆಗೆ ಮಲ್ಲೇಶ್ವರ ಉಪ ವಿಭಾಗದ ಎಸಿಪಿ ಸಾ.ರಾ.ಫಾತಿಮಾ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಶಾಲಾ ವಾಹನಗಳ ಚಾಲಕರು, ಭದ್ರತಾ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸದಸ್ಯರ ವಿಚಾರಣೆ ನಡೆಯುತ್ತಿದೆ’ ಎಂದು ರೆಡ್ಡಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.