ADVERTISEMENT

‘ಎಸ್‌.ಜಿ. ಸಿದ್ದರಾಮಯ್ಯ ಅನಾಥ ಕವಿ’

​ಪ್ರಜಾವಾಣಿ ವಾರ್ತೆ
Published 28 ಮೇ 2017, 20:00 IST
Last Updated 28 ಮೇ 2017, 20:00 IST

ಬೆಂಗಳೂರು: ‘ಎಸ್‌.ಜಿ.ಸಿದ್ದರಾಮಯ್ಯ ಅವರು  ಯಾವುದೇ ಚಳವಳಿಯಲ್ಲಿ ನೇರವಾಗಿ ಗುರುತಿಸಿಕೊಳ್ಳಲಿಲ್ಲ. ಅವರು ನವ್ಯ ಅಥವಾ ಬಂಡಾಯ ಸಾಹಿತ್ಯದ ವಕ್ತಾರರಂತೆ ಮಾತನಾಡಲಿಲ್ಲ. ಹಾಗಾಗಿ ಅವರ ಕೃತಿಗಳು ಚರ್ಚೆಗೆ ಒಳಗಾಗಲಿಲ್ಲ. ಈ ದೃಷ್ಟಿಯಲ್ಲಿ ಅವರೊಬ್ಬ ಅನಾಥ ಕವಿ’ ಎಂದು ಸಾಹಿತಿ ಕೆ.ಮರುಳಸಿದ್ದಪ್ಪ ಹೇಳಿದರು.

ಜೀವನ್ಮುಖಿ ಮತ್ತು ಪಲ್ಲವ ಪ್ರಕಾಶನವು ಪ್ರಕಟಿಸಿರುವ ಎಸ್‌.ಜಿ.ಸಿದ್ದರಾಮಯ್ಯ ಅವರ ‘ಉಪ್ಪು ಸೊಪ್ಪು’ ಮತ್ತು ‘ನೆನಪು ದಾಯಾದಿ’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಭಾನುವಾರ ಮಾತನಾಡಿದರು.

‘ಇವರು ಸಾಹಿತ್ಯದೊಂದಿಗೆ ಭಿನ್ನವಾದ ಅನುಸಂಧಾನ ಮಾಡಿಕೊಂಡಿದ್ದಾರೆ. ನೆಲದ ಸಂಸ್ಕೃತಿಯ ಪರಿಚಯ ಇವರಿಗಿದೆ. ಹಾಗಾಗಿ ಘನವಾದ ಬರಹಗಳು ಹೊರಬರುತ್ತಿವೆ. ಇವರು ಅಜ್ಞಾತ ವಚನಕಾರರನ್ನು ಪರಿಚಯಿಸುತ್ತಿರುವುದು ಶ್ಲಾಘನೀಯ’ ಎಂದರು.

ADVERTISEMENT

ಪುಸ್ತಕಗಳ ಕುರಿತು ಮಾತನಾಡಿದ ಕಥೆಗಾರ ಎಸ್.ದಿವಾಕರ್, ‘ನೆನಪು ದಾಯಾದಿ ಕವನ ಸಂಕಲನವು ವಚನಗಳನ್ನು ಧ್ವನಿಸುತ್ತದೆ. ಇದರಲ್ಲಿ
ನವ್ಯ, ನವೋದಯ ಕವಿಗಳ ಪದಸಮುಚ್ಚಯವಿದೆ. ಜನಪದವನ್ನು ಆಧುನಿಕ ಪರಿಭಾಷೆಯಲ್ಲಿ ನಿರೂಪಿಸಿದ್ದಾರೆ. ಶಬ್ದ ಜೋಡಣೆ ಭಾವಾಭಿನಯದಂತೆ ತೋರುತ್ತದೆ. ಹಿಂಸೆಯಿಂದ ಮಾನವೀಯತೆಯಡೆಗೆ ಸೆಳೆಯುವ ಸಾಲುಗಳಿವೆ. ಕಥನಾಂಶ ಹೇಳುವ ದಾಟಿಯಲ್ಲಿ ತತ್ವಗಳನ್ನು ಪರಿಚಯಿಸಿದ್ದಾರೆ’ ಎಂದು ತಿಳಿಸಿದರು.

‘ಉಪ್ಪು ಸೊಪ್ಪು ಕೃತಿ ಲೇಖನಗಳ ಸಂಗ್ರಹ. ಇದರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಅಲೆಮಾರಿಗಳ ಜೀವನ, ಲೇಖಕಿಯರ ಪರಿಚಯ, ಹೊಸ ಕೃತಿಗಳ ಓದುವ ಬಗೆ, ಸಾಹಿತ್ಯದ ತತ್ವ ವಿಚಾರಗಳಿವೆ’ ಎಂದರು.

ಪುಸ್ತಕಗಳು

ಉಪ್ಪು ಸೊಪ್ಪು’, 172 ಪುಟಗಳು, ಬೆಲೆ ₹ 150.

ನೆನಪು ದಾಯಾದಿ’, 122 ಪುಟಗಳು, ಬೆಲೆ ₹ 110.

**

ಸಿದ್ದರಾಮಯ್ಯ ಜನಪದ ಮತ್ತು ವಚನಗಳ ಭಾಷೆ ಬಳಸಿಕೊಂಡು ಬರೆಯುತ್ತಾರೆ. ಹಾಗಾಗಿ ಅವರ ಬರಹ ಭಿನ್ನವಾಗಿದೆ
-ಚಂದ್ರಶೇಖರ ಕಂಬಾರ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.