ADVERTISEMENT

ಎಸ್‌ಐ ಕರ್ತವ್ಯಕ್ಕೆ ಅಡ್ಡಿ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST

ಬೆಂಗಳೂರು: ಶಿವಾಜಿನಗರ ಸಂಚಾರ ಠಾಣೆ ಎಸ್‌ಐ ಕೃಷ್ಣಮೂರ್ತಿ ಅವರನ್ನು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮೂವರನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಕೆನರಾ ಬ್ಯಾಂಕ್ ಉದ್ಯೋಗಿ ಆನಂದ್ (35), ಡಿಟಿಡಿಸಿ ಕೊರಿಯರ್ ಸಂಸ್ಥೆಯ ಸರವಣ್ ಕುಮಾರ್ (27) ಹಾಗೂ ಎಂಎಸ್‌ಡಬ್ಲ್ಯೂ ವಿದ್ಯಾರ್ಥಿ ಎಲ್ವಿನೊ (23) ಅವರನ್ನು ಬಂಧಿಸಲಾಗಿದೆ.

ಎಚ್‌ಎಎಲ್‌ ಮೂಲಕ ಮೈಸೂರಿಗೆ ಹೊರಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಳಿಗ್ಗೆ 10ರ ಸುಮಾರಿಗೆ ಕಬ್ಬನ್ ರಸ್ತೆ ಮಾರ್ಗವಾಗಿ ತಮ್ಮ ಬೆಂಗಾವಲು ವಾಹನಗಳೊಂದಿಗೆ ಕಾರಿನಲ್ಲಿ ಎಚ್‌ಎಎಲ್‌ ಕಡೆಗೆ ಹೊಗುತ್ತಿದ್ದರು. ಹಾಗಾಗಿ ರಸ್ತೆಯನ್ನು ಸಿಗ್ನಲ್ ಮುಕ್ತಗೊಳಿಸಿ, ಸಾರ್ವಜನಿಕರ ವಾಹನಗಳನ್ನು ತಡೆಯಲಾಗಿತ್ತು.

ಈ ವೇಳೆ ಕಬ್ಬನ್ ಜಂಕ್ಷನ್‌ನಲ್ಲಿ ಕೆಲ ಹೊತ್ತು ಬೈಕ್‌ನಲ್ಲಿ ಕಾದ ಆನಂದ್ ಒಮ್ಮೆಲೆ ಹೊರಡಲು ಮುಂದಾದರು. ಆಗ ಸ್ಥಳದಲ್ಲಿದ್ದ ಶಿವಾಜಿನಗರ ಸಂಚಾರ ಠಾಣೆ ಎಸ್‌ಐ ಕೃಷ್ಣಮೂರ್ತಿ, ಬೆಂಗಾವಲು ವಾಹನಗಳು ಪಾಸ್ ಆಗುವವರೆಗೆ ಹೋಗದಂತೆ ಸೂಚಿಸಿದರು.

ಆಗ ಆನಂದ್‌, ‘ಯಾಕೆ ಹೋಗಬಾರದು. ನನಗೆ ಲೇಟಾಗಿದೆ. ಡ್ಯೂಟಿಗೆ ಹೋಗಬೇಕು’ ಎಂದರು. ಆತನ ಮಾತಿಗೆ ಸರವಣ್ ಮತ್ತು ಎಲ್ವಿನೊ ಕೂಡ ದನಿಗೂಡಿಸಿ ಎಸ್‌ಐ ಜತೆ ವಾಗ್ವಾದಕ್ಕಿಳಿದರು. ಮಾತುಕತೆ ವಿಕೋಪಕ್ಕೆ ತಿರುಗಿದಾಗ, ಮೂವರೂ ಕೃಷ್ಣಮೂರ್ತಿ ಅವರನ್ನು ಎಳೆದಾಡಿ ಹಲ್ಲೆಗೆ ಯತ್ನಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಇತರ ಸಿಬ್ಬಂದಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಿದರು ಎಂದು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.